Pahalgam Terror Attack |ಜಮ್ಮುಕಾಶ್ಮೀರದ ಜೈಲುಗಳ ಮೇಲೆ ಉಗ್ರರ ದಾಳಿ ಸಾಧ್ಯತೆ, ಗುಪ್ತಚರ ಮಾಹಿತಿ ಹಿನ್ನೆಲೆ ಭದ್ರತೆ ಹೆಚ್ಚಳ
ಶ್ರೀನಗರದ ಕೇಂದ್ರ ಜೈಲು ಹಾಗೂ ಜಮ್ಮುವಿನ ಕೋಟ್ ಬಲ್ವಾಲ್ ಜೈಲುಗಳಲ್ಲಿ ಭಯೋತ್ಪಾದಕರು ಹಾಗೂ ಭೂಗತ ಪಾತಕಿಗಳು ಇರುವುದರಿಂದ ಈ ಜೈಲುಗಳನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಎನ್‌ಐಎ ಮಾಹಿತಿ ನೀಡಿದೆ.;
ಕೇಂದ್ರ ಕಾರಗೃಹ
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ, ಜಮ್ಮುಕಾಶ್ಮೀರದ ಜೈಲುಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಜೈಲುಗಳಿಗೆ ಹೆಚ್ಚು ಭದ್ರತೆ ಒದಗಿಸಲಾಗಿದೆ.
ಶ್ರೀನಗರದ ಕೇಂದ್ರ ಕಾರಾಗೃಹ ಹಾಗೂ ಜಮ್ಮುವಿನ ಕೋಟ್ ಬಲ್ವಾಲ್ ಜೈಲುಗಳಲ್ಲಿ ಭಯೋತ್ಪಾದಕರು ಹಾಗೂ ಭೂಗತ ಪಾತಕಿಗಳು ಇರುವುದರಿಂದ ಈ ಜೈಲುಗಳ ಮೇಲೆ ಉಗ್ರರು ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜೈಲುಗಳ ಸುವ್ಯವಸ್ಥೆ ಪರಿಶೀಲಿಸಿ ಭದ್ರತೆ ಬಲಪಡಿಸಲಾಗಿದೆ. 2023 ರಿಂದಲೂ ಜಮ್ಮುಕಾಶ್ಮೀರದ ಜೈಲುಗಳಿಗೆ ಕೇಂದ್ರಿಯ ಮೀಸಲು ಪೊಲೀಸ್ ಪಡೆ ಬದಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಭದ್ರತೆ ಒದಗಿಸುತ್ತಿದೆ. ಈಗ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಏಪ್ರಿಲ್ 22 ರಂದು ಜಮ್ಮುಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕರ್ನಾಟಕದ ಇಬ್ಬರು ಸೇರಿ 26 ಮಂದಿ ಉಗ್ರರ ದುಷ್ಕೃತ್ಯದಲ್ಲಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಲಷ್ಕರ್ -ಎ-ತೊಯಿಬಾ ಅಂಗಸಂಸ್ಥೆಯಾದ ಟಿಆರ್‌ಎಫ್ ದಾಳಿಯ ಹೊಣೆ ಹೊತ್ತಿತ್ತು.
ಭಾರತದಿಂದ ಕಟ್ಟುನಿಟ್ಟಿನ ಕ್ರಮ
ಪಹಲ್ಗಾಮ್ ದಾಳಿ ನಂತರ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ವೀಸಾ, ಸಿಂಧೂ ನದಿ ಒಪ್ಪಂದ ರದ್ಧತಿ, ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸುವುದು, ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು.
ಅಲ್ಲದೇ, ಭಾರತದ ವಾಯುಪ್ರದೇಶ ಹಾಗೂ ಬಂದರು ಬಳಸದಂತೆಯೂ ನಿರ್ಬಂಧ ಹೇರಿತ್ತು. ದೇಶದ ವಿರುದ್ಧ ದ್ವೇಷ ಹಾಗೂ ಸುಳ್ಳು ಮಾಹಿತಿ ಪ್ರಸಾರ ಮಾಡುವ ಪಾಕಿಸ್ತಾನದ ಮಾಧ್ಯಮಗಳ ಪ್ರಸಾರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು.
ಪಾಕಿಸ್ತಾನದಿಂದ ಪ್ರತೀಕಾರದ ಕ್ರಮ
ಭಾರತದ ಕಠಿಣ ಕ್ರಮಗಳಿಗೆ ಪಾಕಿಸ್ತಾನ ಕೂಡ ಹಲವು ಪ್ರತೀಕಾರದ ಕ್ರಮಗಳನ್ನು ಕೈಗೊಂಡಿತ್ತು. ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಕೆಗೆ ನಿರ್ಬಂಧ ಹಾಗೂ ಬಂದರು ಬಳಕೆಗೂ ನಿಷೇಧ ಹೇರಿತ್ತು. ಸಿಂಧೂನದಿ ನೀರನ್ನು ಬೇರೆಡೆ ತಿರುಗಿಸಿ ಕಾಮಗಾರಿ ಕೈಗೊಂಡರೆ ನಾಶ ಮಾಡುವುದಾಗಿ ಬೆದರಿಕೆ ಕೂಡ ಹಾಕಿತ್ತು.