ತೆಲಂಗಾಣ | ಅತ್ಯಾಚಾರ ಪ್ರಯತ್ನ: ಪ್ರತಿಭಟನೆ, ದಾಂಧಲೆ ಬಳಿಕ ಜೈನೂರ್‌ ಶಾಂತ

ಆದಿವಾಸಿ ಮಹಿಳೆಯೊಬ್ಬರ ಅತ್ಯಾಚಾರ, ಕೊಲೆಗೆ ಯತ್ನಿಸಿದ ಆಟೋರಿಕ್ಷಾ ಚಾಲಕನ ವಿರುದ್ಧ ಬುಡಕಟ್ಟು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು

Update: 2024-09-05 07:59 GMT

ಹೈದರಾಬಾದ್: ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಜೈನೂರ್ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ.

ಆದಿವಾಸಿ ಮಹಿಳೆಯೊಬ್ಬರ ಅತ್ಯಾಚಾರ, ಕೊಲೆಗೆ ಯತ್ನಿಸಿದ ಆಟೋರಿಕ್ಷಾ ಚಾಲಕನ ವಿರುದ್ಧ ಬುಡಕಟ್ಟು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸಿಬ್ಬಂದಿ ಪಟ್ಟಣದಲ್ಲಿ ಧ್ವಜ ಮೆರವಣಿಗೆ ನಡೆಸಿದ್ದು,ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಜೈನೂರ್ ಮಂಡಲದಲ್ಲಿ ಸೆಕ್ಷನ್ 163 ರಡಿ ನಿಷೇಧಾಜ್ಞೆ ಮುಂದುವರಿಯಲಿದೆ. ಕೆಲವು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನೆರೆಯ ಆದಿಲಾಬಾದ್ ಜಿಲ್ಲೆಯ ನಾಲ್ಕು ಮಂಡಲಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಅಗ್ನಿಸ್ಪರ್ಶ ಮತ್ತು ಹಿಂಸಾಚಾರದಲ್ಲಿ ಭಾಗಿಯಾದವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದರು.

ಆಗಸ್ಟ್ 31 ರಂದು ಇತರ ಸಮುದಾಯದ ವ್ಯಕ್ತಿಯೊಬ್ಬ 45 ವರ್ಷದ ಬುಡಕಟ್ಟು ಮಹಿಳೆಯ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ. ಜೈನೂರ್ ಪಟ್ಟಣದಲ್ಲಿ ಬುಡಕಟ್ಟು ಸಂಘಟನೆಗಳು ಬುಧವಾರ ಬಂದ್‌ಗೆ ಕರೆ ನೀಡಿದ್ದವು. ಉದ್ರಿಕ್ತ ಯುವಕರು ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಪೂಜಾ ಸ್ಥಳದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮತ್ತೊಂದು ಸಮುದಾಯದ ಆಸ್ತಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಯತ್ನ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Tags:    

Similar News