ಕೋಲ್ಡ್ರಿಫ್ ಸಿರಪ್ ದುರಂತ: ಫಾರ್ಮಾ ಕಂಪನಿ ಮಾಲೀಕ, ಅಧಿಕಾರಿಗಳ ಮನೆ ಮೇಲೆ ಇಡಿ ದಾಳಿ

ಕೋಡಂಬಾಕ್ಕಂನಲ್ಲಿರುವ 75 ವರ್ಷದ ಜಿ. ರಂಗನಾಥನ್ ಅವರ ನಿವಾಸದ ಮೇಲೆ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ, ಮಹತ್ವದ ದಾಖಲೆಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಣಕಾಸು ಲೆಡ್ಜರ್‌ಗಳನ್ನು ವಶಪಡಿಸಿಕೊಂಡಿದೆ.

Update: 2025-10-13 04:59 GMT

ಸಾಂದರ್ಭಿಕ ಚಿತ್ರ

Click the Play button to listen to article

ಮಧ್ಯಪ್ರದೇಶದಲ್ಲಿ 23ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ವಿಷಕಾರಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಚುರುಕುಗೊಳಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ, ಸೋಮವಾರ ಚೆನ್ನೈನ ಐದು ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ದಾಳಿಯು, ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ಜಿ. ರಂಗನಾಥನ್, ಅಮಾನತುಗೊಂಡಿರುವ ಇಬ್ಬರು ಔಷಧ ನಿಯಂತ್ರಣ ಅಧಿಕಾರಿಗಳ ನಿವಾಸಗಳು ಹಾಗೂ ಕಂಪನಿಗೆ ಸಂಬಂಧಿಸಿದ ಎರಡು ಇತರ ಸ್ಥಳಗಳನ್ನು ಗುರಿಯಾಗಿಸಿಕೊಂಡಿತ್ತು. ಕೋಡಂಬಾಕ್ಕಂನಲ್ಲಿರುವ 75 ವರ್ಷದ ಜಿ. ರಂಗನಾಥನ್ ಅವರ ನಿವಾಸದ ಮೇಲೆ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ, ಮಹತ್ವದ ದಾಖಲೆಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಣಕಾಸು ಲೆಡ್ಜರ್‌ಗಳನ್ನು ವಶಪಡಿಸಿಕೊಂಡಿದೆ.

ಕಳಪೆ ಗುಣಮಟ್ಟದ ಔಷಧಿಗಳ ಮಾರಾಟದಿಂದ ಗಳಿಸಿದ ಅಕ್ರಮ ಲಾಭದ ಕುರಿತು ಇವುಗಳಲ್ಲಿ ಮಾಹಿತಿ ಲಭಿಸುವ ಸಾಧ್ಯತೆಯಿದೆ.

ಇದೇ ವೇಳೆ, ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಅಮಾನತುಗೊಂಡ ನಿರ್ದೇಶಕಿ ದೀಪಾ ಜೋಸೆಫ್ ಮತ್ತು ಹಿರಿಯ ಇನ್ಸ್‌ಪೆಕ್ಟರ್ ಕೆ. ಕಾರ್ತಿಕೇಯನ್ ಅವರ ತಿರುವನ್ಮಿಯೂರಿನ ನಿವಾಸಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕಂಪನಿಯ ಉತ್ಪಾದನಾ ಘಟಕದ ಮೇಲ್ವಿಚಾರಣೆಯಲ್ಲಿ ಉದ್ದೇಶಪೂರ್ವಕವಾಗಿ ಲೋಪ ಎಸಗಿರುವ ಬಗ್ಗೆ ಇಮೇಲ್‌ಗಳು ಮತ್ತು ತಪಾಸಣಾ ವರದಿಗಳಲ್ಲಿ ಸಾಕ್ಷ್ಯಗಳು ಸಿಗುವ ನಿರೀಕ್ಷೆಯಿದೆ.

ಇದಲ್ಲದೆ, ಸ್ರೆಸನ್ ಕಂಪನಿಯು ಬಳಸುತ್ತಿದ್ದ ಗೋದಾಮು ಮತ್ತು ಕಲಬೆರಕೆ ಸಿರಪ್‌ಗಳನ್ನು ಸಾಗಾಟ ಮಾಡಿದ ಶಂಕೆಯ ಮೇಲೆ ಲಾಜಿಸ್ಟಿಕ್ಸ್ ಸಂಸ್ಥೆಯ ಕಚೇರಿಯ ಮೇಲೂ ಇಡಿ ಶೋಧ ನಡೆಸಿದೆ.

ವಿಷಕಾರಿ ಅಂಶ ಪತ್ತೆ

ಶ್ರೀಪೆರಂಬದೂರ್ ಬಳಿಯ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯು ತಯಾರಿಸಿದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 23ಕ್ಕೂ ಹೆಚ್ಚು ಮಕ್ಕಳು ತೀವ್ರ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದರು.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲಿ, ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕವಾದ ಡೈಥಿಲೀನ್ ಗ್ಲೈಕಾಲ್ (DEG) ಇರುವುದು ದೃಢಪಟ್ಟಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ವಿಶೇಷ ತನಿಖಾ ತಂಡವು (SIT) ಅಕ್ಟೋಬರ್ 9 ರಂದು ಕಂಪನಿಯ ಮಾಲೀಕ ಜಿ. ರಂಗನಾಥನ್ ಅವರನ್ನು ಬಂಧಿಸಿತ್ತು.

ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರು ಔಷಧ ನಿಯಂತ್ರಣ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈ ಹಗರಣವು ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

Tags:    

Similar News