ಕೋಲ್ಡ್ರಿಫ್ ಸಿರಪ್ ಸೇವಿಸಿ 20 ಮಕ್ಕಳ ಸಾವು : ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಮಾಲೀಕ ಬಂಧನ
ಮಧ್ಯಪ್ರದೇಶ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಂಗನಾಥನ್ ಅವರನ್ನು ಚೆನ್ನೈನಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ರಂಗನಾಥನ್ ಅವರನ್ನು ಭೋಪಾಲ್‌ಗೆ ಕರೆದೊಯ್ಯಲಾಗಿದೆ.
The Federal 9 Oct 2025 10:04 AM IST (Updated:2025-10-09 06:03:11)
ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ (Coldrif) ಕೆಮ್ಮು ಸಿರಪ್ ಸೇವನೆಯಿಂದ 20 ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಮಾಲೀಕ ಎಸ್. ರಂಗನಾಥನ್ ಅವರನ್ನು ಪೊಲೀಸರು ಬಂಧಿಸಿದ್ದು, ಸಿರಪ್ ತಯಾರಿಕಾ ಘಟಕಕ್ಕೆ ಬೀಗಮುದ್ರೆ ಹಾಕಿದ್ದಾರೆ.ಮಧ್ಯಪ್ರದೇಶ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಂಗನಾಥನ್ ಅವರನ್ನು ಚೆನ್ನೈನಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ರಂಗನಾಥನ್ ಅವರನ್ನು ಭೋಪಾಲ್‌ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಮಾಲಿಕ ರಂಗನಾಥನ್ ಸುಳಿವು ನೀಡಿದವರಿಗೆ ಛಿಂದ್ವಾರ ಪೊಲೀಸರು 20 ಸಾವಿರ ಬಹುಮಾನ ಘೋಷಿಸಿದ್ದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲೇ ಮತ್ತೆ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ ಛಿಂದ್ವಾರ, ಪಂಧುರ್ನಾ ಮತ್ತು ಬೇತುಲ್ ಜಿಲ್ಲೆಗಳಲ್ಲಿ 20 ಮಕ್ಕಳು ಮೃತಪಟ್ಟಿದ್ದಾರೆ. ಐವರು ಮಕ್ಕಳು ನಾಗ್ಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.“ಕೋಲ್ಡ್ರಿಫ್ ಸಿರಪ್‌ನಲ್ಲಿ ವಿಷಕಾರಿ ಅಂಶ ಇದ್ದುದೇ ಮಕ್ಕಳ ಸಾವಿಗೆ ಕಾರಣವಾಗಿದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ” ಎಂದು ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ರಾಜೇಂದ್ರ ಶುಕ್ಲಾ ಅವರು ಹೇಳಿದ್ದಾರೆ.ಡಾ. ಪ್ರವೀಣ್ ಸೋನಿ ಸೇರಿದಂತೆ ಕೆಲವು ಖಾಸಗಿ ವೈದ್ಯರು ಮಕ್ಕಳಿಗೆ ಕೋಲ್ಡ್ರಿಫ್ ಸಿರಪ್ ನೀಡಿದ್ದರು. ಸಿರಪ್ ಸೇವಿಸಿದ ಕೆಲವೇ ಗಂಟೆಗಳಲ್ಲಿ ಮಕ್ಕಳ ಮೂತ್ರಪಿಂಡ ವೈಫಲ್ಯವಾಗಿದೆ (Kidney failure). ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕ ಅಂಶ ಇರುವುದು ಫೊರೆನ್ಸಿಕ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ರಾಸಾಯನಿಕಗಳು ಮೂತ್ರಪಿಂಡವನ್ನು ಹಾನಿಗೊಳಪಡಿಸುತ್ತಿದ್ದರಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಸಿರಪ್ ತಯಾರಿಕಾ ಘಟಕಕ್ಕೆ ಬೀಗ
ತಮಿಳುನಾಡು ಸರ್ಕಾರ ಸಿರಪ್ ತಯಾರಿಕಾ ಘಟಕಕ್ಕೆ ಬೀಗಮುದ್ರೆ ಹಾಕಿದೆ. ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಪರವಾನಗಿ ರದ್ದುಪಡಿಸುವ ಪ್ರಕ್ರಿಯೆ ಆರಂಭವಾಗಿದೆ. ಸಿರಪ್ ತಯಾರಿಕೆ ಮತ್ತು ವಿತರಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದವರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.