ಬಿಹಾರ ಎನ್‌ಡಿಎ ಸೀಟು ಹಂಚಿಕೆ ಬಿಕ್ಕಟ್ಟು: ಬಿಜೆಪಿ-ಜೆಡಿಯು ಒಪ್ಪಂದಕ್ಕೆ ಸಣ್ಣ ಪಕ್ಷಗಳ ಅಸಮಾಧಾನ
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) 29 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಆದರೆ, ಜಿತನ್ ರಾಮ್ ಮಾಂಝಿ ಮತ್ತು ಉಪೇಂದ್ರ ಕುಶ್ವಾಹ ಅವರ ಪಕ್ಷಗಳಿಗೆ ಕೇವಲ ತಲಾ 6 ಸ್ಥಾನಗಳನ್ನು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಹಿಂದುಸ್ತಾನಿ ಅವಾಮ್ ಮೋರ್ಚಾದ ನೇತಾರ ಜಿತನ್ ರಾಮ್ ಮಾಂಝಿ
ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ, ಆಡಳಿತಾರೂಢ ಮೈತ್ರಿಕೂಟದ ಸಣ್ಣ ಪಕ್ಷಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಿಜೆಪಿ ಮತ್ತು ಜೆಡಿಯು ಪಕ್ಷಗಳು ತಲಾ 101 ಸ್ಥಾನಗಳನ್ನು ಹಂಚಿಕೊಂಡಿರುವುದಕ್ಕೆ, ಸಣ್ಣ ಮಿತ್ರಪಕ್ಷಗಳಾದ ಜಿತನ್ ರಾಮ್ ಮಾಂಝಿ ಅವರ ಹಿಂದುಸ್ತಾನಿ ಅವಾಮ್ ಮೋರ್ಚಾ (HAM) ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (RLM) ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ, ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) 29 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಆದರೆ, ಜಿತನ್ ರಾಮ್ ಮಾಂಝಿ ಮತ್ತು ಉಪೇಂದ್ರ ಕುಶ್ವಾಹ ಅವರ ಪಕ್ಷಗಳಿಗೆ ಕೇವಲ ತಲಾ 6 ಸ್ಥಾನಗಳನ್ನು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
"ಹೈಕಮಾಂಡ್ ನಿರ್ಧಾರವನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೆ, ನಮಗೆ ಕೇವಲ ಆರು ಸ್ಥಾನಗಳನ್ನು ನೀಡುವ ಮೂಲಕ ನಮ್ಮನ್ನು ಕಡೆಗಣಿಸಲಾಗಿದೆ. ಇದು ಚುನಾವಣೆಯಲ್ಲಿ ಎನ್‌ಡಿಎಗೆ ದುಬಾರಿಯಾಗಬಹುದು," ಎಂದು ಜಿತನ್ ರಾಮ್ ಮಾಂಝಿ ಅವರು ಅಸಮಾಧಾನ ಹೊರಹಾಕಿದ್ದಾರೆ. ಮಾನ್ಯತೆ ಪಡೆಯಲು ಕನಿಷ್ಠ 8 ಸ್ಥಾನಗಳನ್ನು ಗೆಲ್ಲಬೇಕಾಗಿರುವುದರಿಂದ, ತಮಗೆ 15 ಸ್ಥಾನಗಳನ್ನು ನೀಡಬೇಕೆಂದು ಮಾಂಝಿ ಪಟ್ಟು ಹಿಡಿದಿದ್ದರು.
ಇದೇ ವೇಳೆ, ಉಪೇಂದ್ರ ಕುಶ್ವಾಹ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ, "ನಿಮ್ಮ ನಿರೀಕ್ಷೆಗೆ ತಕ್ಕಂತೆ ಸೀಟುಗಳು ಸಿಕ್ಕಿಲ್ಲ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಈ ನಿರ್ಧಾರವು ನಮ್ಮ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದ ಸಹೋದ್ಯೋಗಿಗಳಿಗೆ ನೋವುಂಟು ಮಾಡುತ್ತದೆ ಎಂದು ನನಗೆ ತಿಳಿದಿದೆ. ಉಳಿದದ್ದನ್ನು ಕಾಲವೇ ಹೇಳಲಿದೆ," ಎಂದು 'X' ನಲ್ಲಿ ಬರೆದುಕೊಂಡಿದ್ದಾರೆ.
ನಿತೀಶ್ ಕುಮಾರ್ ವರ್ಚಸ್ಸು ಕುಗ್ಗಿಸಿದೆಯೇ ಬಿಜೆಪಿ?
ಈ ಸೀಟು ಹಂಚಿಕೆ ಸೂತ್ರವು ಬಿಹಾರದ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಈ ಹಿಂದೆ, ಜೆಡಿಯು ಯಾವಾಗಲೂ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿತ್ತು. "ಈ ಸೀಟು ಹಂಚಿಕೆ ವ್ಯವಸ್ಥೆಯು, ಬಿಜೆಪಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ಕುಗ್ಗಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮುಂಬರುವ ದಿನಗಳಲ್ಲಿ ಬಿಜೆಪಿ, ಜೆಡಿಯು ಅನ್ನು ನುಂಗಿಹಾಕಲಿದೆ," ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ರಾಜೇಶ್ ರಾಥೋಡ್ ವ್ಯಂಗ್ಯವಾಡಿದ್ದಾರೆ