ತೆಲಂಗಾಣ ಫಾರ್ಮಾ ಕಾರ್ಖಾನೆ ಸ್ಫೋಟ: ಸಿಎಂ ರೇವಂತ್ ರೆಡ್ಡಿ ಭೇಟಿ, ಸಂತ್ರಸ್ತರಿಗೆ ಸಾಂತ್ವನ
ಸ್ಫೋಟದಲ್ಲಿ ಗಾಯಗೊಂಡವರ ಸಂಖ್ಯೆಯೂ ಗಣನೀಯವಾಗಿದೆ. ಮಿಯಾಪೂರ್‌ನ ಪ್ರಣಾಮ್ ಆಸ್ಪತ್ರೆಗೆ 21 ರೋಗಿಗಳು ಸುಟ್ಟ ಗಾಯಗಳು ಮತ್ತು ತಲೆಗೆ ಪೆಟ್ಟಾದ ಸ್ಥಿತಿಯಲ್ಲಿ ದಾಖಲಾಗಿದ್ದರು.;
ತೆಲಂಗಾಣ ಅಗ್ನಿ ದುರಂತ
ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್‌ನ ಫಾರ್ಮಾ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ಸ್ಫೋಟದ ಸ್ಥಳಕ್ಕೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮಂಗಳವಾರ ಭೇಟಿ ನೀಡಿದರು. ಅವರೊಂದಿಗೆ ಕೆಲವು ಸಚಿವ ಸಂಪುಟದ ಸಹೋದ್ಯೋಗಿಗಳು ಸಹ ಇದ್ದರು. ಈ ದುರಂತದಲ್ಲಿ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡುವುದಾಗಿ ಅವರು ಭರವಸೆ ನೀಡಿದರು.
ಸ್ಫೋಟದಲ್ಲಿ ಗಾಯಗೊಂಡವರ ಸಂಖ್ಯೆಯೂ ಗಣನೀಯವಾಗಿದೆ. ಮಿಯಾಪೂರ್‌ನ ಪ್ರಣಾಮ್ ಆಸ್ಪತ್ರೆಗೆ 21 ರೋಗಿಗಳು ಸುಟ್ಟ ಗಾಯಗಳು ಮತ್ತು ತಲೆಗೆ ಪೆಟ್ಟಾದ ಸ್ಥಿತಿಯಲ್ಲಿ ದಾಖಲಾಗಿದ್ದರು. ಅವರಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿದ್ದರೆ, ಮತ್ತೊಬ್ಬರು ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು, ಪಟಾಂಚೇರುದಲ್ಲಿರುವ ಧ್ರುವ ಆಸ್ಪತ್ರೆಗೆ 11 ರೋಗಿಗಳನ್ನು ದಾಖಲಿಸಲಾಗಿದ್ದು, ಅವರಲ್ಲಿ ಐವರು ವೆಂಟಿಲೇಟರ್‌ನಲ್ಲಿದ್ದಾರೆ. ಏಳು ರೋಗಿಗಳಿಗೆ 40-80% ಸುಟ್ಟ ಗಾಯಗಳಾಗಿದ್ದರೆ, ಇಬ್ಬರಿಗೆ 10% ಸುಟ್ಟ ಗಾಯಗಳಾಗಿವೆ.
ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ
ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿದ್ದು, ಮೃತದೇಹಗಳ ಗುರುತು ಪತ್ತೆ ಕಾರ್ಯ ಸವಾಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಒಂಬತ್ತು ಮೃತದೇಹಗಳ ಗುರುತು ಮಾತ್ರ ಇದುವರೆಗೆ ಪತ್ತೆಯಾಗಿದೆ. ಉಳಿದ ಮೃತದೇಹಗಳ ಗುರುತು ಪತ್ತೆ ಹಚ್ಚಲು ಡಿಎನ್‌ಎ ಪ್ರೊಫೈಲಿಂಗ್ ನಡೆಸಬೇಕಾಗಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದಂತಹ ಅನ್ಯ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.
ಸೋಮವಾರ ನಡೆದ ಈ ಭೀಕರ ಅಪಘಾತಕ್ಕೆ ರಾಸಾಯನಿಕ ಕ್ರಿಯೆ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಔಷಧೀಯ ಉತ್ಪನ್ನಗಳಾದ ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರಿಡಿಯಂಟ್ಸ್ (API), ಇಂಟರ್ಮೀಡಿಯೇಟ್ಸ್, ಎಕ್ಸಿಪಿಯೆಂಟ್‌ಗಳು, ವಿಟಮಿನ್-ಖನಿಜ ಮಿಶ್ರಣಗಳು ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣಾ ಸೇವೆಗಳಲ್ಲಿ ಪರಿಣತಿ ಹೊಂದಿರುವ ಕಂಪನಿಯಾಗಿದೆ.