Telangana floods| ಗೋದಾವರಿಯಲ್ಲಿ ನೀರಿನ ಮಟ್ಟ ನಿರಂತರ ಏರಿಕೆ, ಕತ್ತಲೆಯಲ್ಲಿ ಖಮ್ಮಂ

ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಕುಸಿದಿದೆ. ಆದರೆ, ಖಮ್ಮಂ ನಗರ ಮತ್ತು ಸುತ್ತಮುತ್ತಲಿನ ಅನೇಕ ವಸತಿ ಕಾಲೋನಿಗಳಲ್ಲಿ ಪರಿಸ್ಥಿತಿ ಕಠೋರವಾಗಿದೆ.

Update: 2024-09-04 10:22 GMT
ತೆಲಂಗಾಣದ ಗೋದಾವರಿ ನದಿಯಲ್ಲಿ ನೀರು ಅಪಾಯಕರವಾಗಿ ಏರುತ್ತಿದ್ದು, ಪ್ರವಾಹ ಪರಿಸ್ಥಿತಿ ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ. ಈಗಾಗಲೇ ರಾಜ್ಯದಲ್ಲಿ ಪ್ರವಾಹದಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಲಾನಯನ ಪ್ರದೇಶಗಳು ಮತ್ತು ನೆರೆಯ ಮಹಾರಾಷ್ಟ್ರದ ಉಪನದಿಗಳಿಂದ ಭಾರೀ ಪ್ರಮಾಣದ ನೀರು ಹರಿವಿನಿಂದ ಗೋದಾವರಿ ಸ್ಥಿರವಾಗಿ ಏರುತ್ತಿದೆ. ತೆಲಂಗಾಣದಲ್ಲಿ ಪ್ರವಾಹ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.

ಹಲವು ಸ್ಥಳಗಳಲ್ಲಿ ನದಿ ನೀರು ಹೆಚ್ಚುತ್ತಿದೆ. ಇದರಿಂದ ತೆಲಂಗಾಣದಲ್ಲಿ ಪ್ರವಾಹದಿಂದ ತತ್ತರಿಸಿರುವ ಜನರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ನದಿಯ ಜಲಾನಯನ ಪ್ರದೇಶಗಳಿಂದ ಹೆಚ್ಚು ನೀರು ಹೊರಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎಲ್ಲೆಲ್ಲೂ ನೀರು: ಭದ್ರಾಚಲಂನಲ್ಲಿ ಪ್ರವಾಹದ ಮಟ್ಟ 24 ಗಂಟೆಗಳೊಳಗೆ ನಿರ್ಣಾಯಕ ಎಚ್ಚರಿಕೆ ಮಟ್ಟ ತಲುಪುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ಮುಲುಗು ಜಿಲ್ಲೆಯಲ್ಲಿ ಗೋದಾವರಿಯು ರಾಷ್ಟ್ರೀಯ ಹೆದ್ದಾರಿ 163 ರ ಮೇಲೆ ಹರಿಯುತ್ತಿದೆ. ಈ ರಸ್ತೆ ಹೈದರಾಬಾದನ್ನು ಛತ್ತೀಸ್‌ಗಢದ ಭೂಪಾಲಪಟ್ಟಣದೊಂದಿಗೆ ಸಂಪರ್ಕಿಸುತ್ತದೆ. ಇದರಿಂದ ತೆಕುಲಗುಡೆಮ್‌ನಲ್ಲಿ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಶ್ರೀರಾಮ ಸಾಗರ್ ಯೋಜನೆಗೆ ನದಿಯ ಮೇಲ್ಭಾಗದಿಂದ ಅಧಿಕ ಒಳಹರಿವು ಆಗುತ್ತಿದೆ. ಅದರ 42 ಗೇಟ್‌ಗಳಲ್ಲಿ 41 ಅನ್ನು ನೀರು ಹರಿಯಲು ತೆರೆಯಲಾಗಿದೆ.

ಉಪನದಿಗಳಿಂದ ನೀರು: ಶ್ರೀಪಾದ ಯೆಲ್ಲಂಪಳ್ಳಿ ಯೋಜನೆಗೆ 4.78 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರಹರಿವು 5.3 ಲಕ್ಷ ಕ್ಯೂಸೆಕ್ ಇದೆ. ಉಪನದಿಗಳಾದ ತಾಳಿಪೇರು, ಕಿನ್ನೆರಸಾನಿ ಮತ್ತು ಶಬರಿ ನದಿಗಳು ಪ್ರವಾಹವನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿವೆ. ಗೋದಾವರಿಯಲ್ಲಿ ಪ್ರವಾಹಕ್ಕೆ ಪ್ರಾಣಹಿತ ಮತ್ತು ಇತರ ಕೆಳಗಿನ ಉಪನದಿಗಳು ಕಾರಣ. ಈ ಬಾರಿ ಮಹಾರಾಷ್ಟ್ರದ ಉಪನದಿಗಳಿಂದಲೂ ನೀರು ಬರುತ್ತಿದೆ.

ಖಮ್ಮಂನಲ್ಲಿ ವಿದ್ಯುತ್, ನೀರು ಇಲ್ಲ: ಹಲವು ದಿನಗಳಿಂದ ನೀರು, ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ ಎಂದು ಖಮ್ಮಂ ನಿವಾಸಿಗಳು ದೂರಿದ್ದಾರೆ. ಕೆಲವೇ ಕೆಲವು ಪುರಸಭೆಯ ನೀರಿನ ಟ್ಯಾಂಕರ್‌ಗಳು ನೀರು ಪೂರೈಸುತ್ತಿವೆ. ಕೆಲವು ದತ್ತಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ದಿನಸಿ ನೀಡಿದ್ದಾರೆ. ಆದರೆ, ಪಾತ್ರೆಗಳು ಕೊಚ್ಚಿಹೋಗಿದ್ದರಿಂದ ಅನೇಕರಿಗೆ ಅಡುಗೆ ಮಾಡಲು ಸಾಧ್ಯವಾಗಲಿಲ್ಲ.

ಕೊಚ್ಚಿ ಹೋದ ಸರಕು: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಕುಸಿದಿದೆ. ಆದರೆ, ಖಮ್ಮಂ ನಗರ ಮತ್ತು ಸುತ್ತಮುತ್ತಲಿನ ವಸತಿ ಕಾಲೋನಿಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. ಮುನ್ನೇರುವಿನ 17,000 ಕುಟುಂಬಗಳು ಹಾನಿಗೊಳಗಾಗಿವೆ. ನೀರು ಇಳಿಮುಖವಾಗುತ್ತಿದ್ದಂತೆ ನಿವಾಸಿಗಳು ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ.

Tags:    

Similar News