Supreme Court | ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಂತ್ಯ

ಜೈಲುಗಳಲ್ಲಿನ ಜಾತಿ ಆಧರಿತ ತಾರತಮ್ಯ ತೊಡೆದುಹಾಕಲು ಹಲವು ನಿರ್ದೇಶನಗಳನ್ನು ನೀಡಿರುವ ಪೀಠ, ಸೆರೆಮನೆಗಳಲ್ಲಿ ಅಂಥ ತಾರತಮ್ಯ ಇರಬಾರದು. ಅವು ಅಸಂವಿಧಾನಿಕ. ರಾಜ್ಯಗಳು ತೀರ್ಪಿಗೆ ಅನುಸಾರವಾಗಿ ಜೈಲು ಕೈಪಿಡಿಗಳಲ್ಲಿ ಬದಲಾವಣೆ ಮಾಡಬೇಕು ಎಂದು ಹೇಳಿದೆ.

Update: 2024-10-03 11:02 GMT

11 ರಾಜ್ಯಗಳ ಜೈಲುಗಳಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌, ಮೂರು ತಿಂಗಳೊಳಗೆ ಜೈಲು ಕೈಪಿಡಿಗಳನ್ನು ತಿದ್ದುಪಡಿ ಮಾಡುವಂತೆ ಸರ್ಕಾರಗಳಿಗೆ ಗುರುವಾರ (ಅಕ್ಟೋಬರ್ 3) ನಿರ್ದೇಶಿಸಿದೆ.

ʻಇಂತಹ ತಾರತಮ್ಯಗಳನ್ನು ತಡೆಗಟ್ಟಲು ರಾಜ್ಯ ಸಕಾರಾತ್ಮಕ ಬಾಧ್ಯತೆಯನ್ನು ಹೊಂದಿದೆ,ʼ ಎಂದಿರುವ ಮು.ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ, ವಸಾಹತುಶಾಹಿ ಯುಗದ ಕಾನೂನುಗಳ ಕಟು ಟೀಕೆ ಮಾಡಿದ್ದಾರೆ.

ಜೈಲುಗಳಲ್ಲಿನ ಅಂತಹ ತಾರತಮ್ಯ ತೊಡೆದುಹಾಕಲು ಹಲವು ನಿರ್ದೇಶನಗಳನ್ನು ನೀಡಿರುವ ಪೀಠ, ಜೈಲುಗಳಲ್ಲಿ ಜಾತಿಯನ್ನು ಆಧರಿಸಿದ ಎಲ್ಲ ತಾರತಮ್ಯ ಹೋಗಬೇಕು ಎಂದು ಸ್ಪಷ್ಟಪಡಿಸಿದೆ.

ʻಅಂತಹ ಎಲ್ಲಾ ನಿಬಂಧನೆಗಳು ಅಸಂವಿಧಾನಿಕ. ರಾಜ್ಯಗಳು ತೀರ್ಪಿಗೆ ಅನುಸಾರವಾಗಿ ಜೈಲು ಕೈಪಿಡಿಗಳಲ್ಲಿ ಬದಲಾವಣೆ ಮಾಡಬೇಕು,ʼ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. 

ʻರೂಢಿಗತ ಅಪರಾಧಿಗಳ ಉಲ್ಲೇಖಗಳು ಅಂಥ ಅಪರಾಧಿಗಳ ಕಾನೂನುಗಳನ್ನು ಆಧರಿಸಿರುತ್ತವೆ; ರಾಜ್ಯ ಜೈಲು ಕೈಪಿಡಿಗಳಲ್ಲಿನ ರೂಢಿಗತ ಅಪರಾಧಿಗಳ ಉಲ್ಲೇಖಗಳು ಅವರ ಜಾತಿಗಳನ್ನು ಆಧರಿಸಿದ್ದರೆ, ಅಸಂವಿಧಾನಿಕವಾಗಲಿವೆ,ʼ ಎಂದು ಹೇಳಿದರು. 

ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಕುರಿತ ವಿಚಾರಣೆಯನ್ನು ನ್ಯಾಯಾಲಯ ಸ್ವಯಂಪ್ರೇರಿತವಾಗಿ ತೆಗೆದುಕೊಂಡಿತು. ತೀರ್ಪಿನ ಅನುಸರಣೆ ವರದಿಯನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ವಸಾಹತುಶಾಹಿ ಕಾನೂನು: ʻಕೈದಿಗಳ ಗುರುತು ಆಧರಿಸಿ ಕೆಲವು ರಾಜ್ಯಗಳ ಜೈಲುಗಳಲ್ಲಿ ದೈಹಿಕ ಶ್ರಮ ಮತ್ತು ಬ್ಯಾರಕ್‌ಗಳನ್ನು ವಿಭಜಿಸಲಾಗಿದೆ. ವಸಾಹತುಶಾಹಿ ಯುಗದ ಅಪರಾಧ ಕಾನೂನುಗಳು ಈಗಲೂ ಪರಿಣಾಮ ಬೀರುತ್ತಿವೆ. ಕಾನೂನುಗಳು ನಾಗರಿಕರ ಸಮಾನತೆ ಮತ್ತು ಘನತೆಯನ್ನು ಎತ್ತಿಹಿಡಿಯಬೇಕು. ವಿಮೋಚನೆ, ಸಮಾನತೆ ಮತ್ತು ಜಾತಿ ಆಧಾರಿತ ತಾರತಮ್ಯದ ವಿರುದ್ಧ ತೀರ್ಪು ನೀಡಿದ್ದೇವೆ ಮತ್ತು ಇದನ್ನೆಲ್ಲವನ್ನೂ ರಾತ್ರೋರಾತ್ರಿ ಗೆಲ್ಲಲು ಸಾಧ್ಯವಿಲ್ಲ,ʼ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. 

ಕೈದಿಗಳ ಘನತೆ ರಕ್ಷಣೆ: ಜಾತಿ ಆಧಾರಿತ ತಾರತಮ್ಯದ ವಿರುದ್ಧದ ಹೋರಾಟಕ್ಕೆ ನ್ಯಾಯಾಲಯ ಕೊಡುಗೆ ನೀಡಿದೆ ಎಂದರು.

ʻಇದನ್ನು ತಡೆಯಲು ರಾಜ್ಯ ಸಕಾರಾತ್ಮಕ ಬಾಧ್ಯತೆ ಹೊಂದಿದೆ; ನ್ಯಾಯಾಲಯಗಳು ಪರೋಕ್ಷ ಮತ್ತು ವ್ಯವಸ್ಥಿತ ತಾರತಮ್ಯದ ಹಕ್ಕುಗಳನ್ನು ನಿರ್ಣಯಿಸಬೇಕಿದೆ. ಕೈದಿಗಳಿಗೆ ಘನತೆಯ ನಿರಾಕರಣೆ ವಸಾಹತುಶಾಹಿ ಕಾಲದ ಕುರುಹು. ಅವರನ್ನು ಅಮಾನವೀಯಗೊಳಿಸಲಾಗಿದೆ. ಕೈದಿ ಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕೆಂದು ಸಂವಿಧಾನ ಆದೇಶಿಸುತ್ತದೆ; ಜೈಲು ವ್ಯವಸ್ಥೆಗೆ ಕೈದಿಗಳ ಮಾನಸಿಕ ಮತ್ತು ದೈಹಿಕ ಸ್ಥಿತಿ ಬಗ್ಗೆ ಅರಿವು ಇರಬೇಕು,ʼ ಎಂದು ಪೀಠ ಹೇಳಿದೆ.

ಅಮಾನವೀಯ ಕೆಲಸ ಕೂಡದು: ಕೈದಿಗಳಿಂದ ಅಮಾನವೀಯ ಕೆಲಸ ಮಾಡಿಸಿ, ಅಮಾನವೀಯವಾಗಿ ನಡೆಸಿಕೊಂಡರೆ ರಾಜ್ಯಗಳೇ ಹೊಣೆ ಹೊರಬೇಕಾಗುತ್ತದೆ. ಜಾತಿ ಬಗೆಗಿನ ದ್ವೇಷ ಮತ್ತು ತಿರಸ್ಕಾರವು ಅಂತರ್ಗತವಾಗಿದ್ದು, ಅದರಿಂದ ಪಕ್ಷಪಾತ ಆಗಿದೆ. ವಸಾಹತುಶಾಹಿ ಆಡಳಿತದಲ್ಲಿ ಸಾಮಾಜಿಕ ಶ್ರೇಣೀಖರಣ ಇರುವುದನ್ನು ಸೂಚಿಸುತ್ತದೆ,ʼ ಎಂದು ಸಿಜೆ ಹೇಳಿದರು.

ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಡಿನೋಟಿಫೈಡ್ ಬುಡಕಟ್ಟುಗಳ ವಿರುದ್ಧದ ತಾರತಮ್ಯ ಮುಂದುವರಿದಿದೆ; ನ್ಯಾಯಾಲಯಗಳು ರಕ್ಷಣಾತ್ಮಕ ಕಾನೂನುಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಂಚಿನಲ್ಲಿರುವ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

ಜಾತಿಯಿಂದ ನಿರ್ಣಯಿಸಬೇಡಿ: ಸ್ವಚ್ಛತೆ- ಕಸ ಗುಡಿಸಲು ಅಂಚಿನಲ್ಲಿರುವವರ ನಿಯೋಜನೆ ಮತ್ತು ಉನ್ನತ ಜಾತಿಯವರನ್ನು ಅಡುಗೆಗೆ ನಿಯೋಜಿಸುವುದು 15 ನೇ ವಿಧಿಯ ಉಲ್ಲಂಘನೆ ಎಂದು ಪೀಠ, ಉತ್ತರ ಪ್ರದೇಶದ ಕಾನೂನನ್ನು ಉಲ್ಲೇಖಿಸಿತು. ಯಾವುದೇ ಗುಂಪು ತೋಟಿ ವರ್ಗವಾಗಿ ಹುಟ್ಟುವುದಿಲ್ಲ ಅಥವಾ ಕೀಳು ಕೆಲಸ ಮಾಡಬೇಕು ಅಥವಾ ಮಾಡಬಾರದು ಎಂದು ಹೇಳುತ್ತೇವೆ. ಅಡುಗೆ ಮಾಡುವುದು ಮತ್ತು ಮಾಡದೆ ಇರುವುದು ಅಸ್ಪೃಶ್ಯತೆಯ ಅಂಶಗಳು; ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ತೀರ್ಪು ಹೇಳಿದೆ.

ಸ್ವಚ್ಛಗೊಳಿಸುವವರನ್ನು ಚಂಡಾಳ ಜಾತಿಯಿಂದ ಆಯ್ಕೆ ಮಾಡಬೇಕು ಎನ್ನುವುದು ವಸ್ತುನಿಷ್ಠ ಸಮಾನತೆಗೆ ಸಂಪೂರ್ಣ ವಿರುದ್ಧವಾದುದು ಮತ್ತು ಸಾಂಸ್ಥಿಕ ತಾರತಮ್ಯದ ಒಂದು ಮುಖ. ಅಪಾಯಕರ ಪರಿಸ್ಥಿತಿಗಳಲ್ಲಿ ಒಳಚರಂಡಿ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕೈದಿಗಳಿಗೆ ಹೇಳಬಾರದು ಎಂದು ನ್ಯಾಯಾಧೀಶರು ಹೇಳಿದರು.

ರಾಜ್ಯಗಳಿಂದ ಪ್ರತಿಕ್ರಿಯೆ ಕೋರಿಕೆ: ಮಹಾರಾಷ್ಟ್ರದ ಕಲ್ಯಾಣ್‌ನ ಸುಕನ್ಯಾ ಶಾಂತ ಅವರು ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳಿಂದ ಜನವರಿಯಲ್ಲಿ ಪ್ರತಿಕ್ರಿಯೆ ಕೇಳಿತ್ತು.

ಮನವಿಯಲ್ಲಿ ಕೇರಳ ಕಾರಾಗೃಹದ ನಿಯಮಗಳನ್ನು ಉಲ್ಲೇಖಿಸಲಾಗಿತ್ತು. ಅದು ರೂಢಿಗತ ಹಾಗೂ ಮರು ಶಿಕ್ಷೆಗೊಳಗಾದ ಅಪರಾಧಿಗಳ ನಡುವೆ ವ್ಯತ್ಯಾಸವನ್ನು ಗುರುತಿಸಿದ್ದು, ದರೋಡೆಕೋರರು, ಡಕಾಯಿತರು ಅಥವಾ ಕಳ್ಳರನ್ನು ಇತರ ಅಪರಾಧಿಗಳಿಂದ ವರ್ಗೀಕರಿಸಬೇಕು ಮತ್ತು ಪ್ರತ್ಯೇಕಿಸಬೇಕು ಎಂದು ಹೇಳುತ್ತದೆ.

Tags:    

Similar News