ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ಇಂಡಿಯಾ ಪಾಳಯದಲ್ಲಿ ಕೊನೆಯ ಕ್ಷಣದ ತಳಮಳಗಳು

ಉಪರಾಷ್ಟ್ರಪತಿ ಚುನಾವಣೆಗೆ ಈಗ ಎರಡೂ ಪಕ್ಷಗಳಿಂದ ಅಖೈರುಗೊಳಿಸಲಾಗಿದೆ. ತಮಿಳು ನಾಡು ಮೂಲದವರಾದ ರಾಧಾಕೃಷ್ಣನ್ ಅವರನ್ನು ಎನ್.ಡಿ.ಎ ಆಯ್ಕೆ ಮಾಡಿದ ಬಳಿಕ ಇಂಡಿಯಾ ಒಕ್ಕೂಟದಿಂದ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕೊನೆಯ ಹಂತದ ವರೆಗೂ ಕಸರತ್ತುಗಳು ನಡೆದವು;

Update: 2025-08-20 10:21 GMT
ಮಂಗಳವಾರ ನವದೆಹಲಿಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ವಿರೋಧ ಪಕ್ಷದ ಸಂಸದರು ಬರಮಾಡಿಕೊಂಡರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉಪರಾಷ್ಟ್ರಪತಿ ಚುನಾವಣೆಯನ್ನು “ಸೈದ್ಧಾಂತಿಕ ಸಂಘರ್ಷ” ಎಂದು ಬಣ್ಣಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರ ವಿರುದ್ಧ ‘ಸಂಯುಕ್ತ ವಿರೋಧ ಪಕ್ಷದ’ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದ ಬಳಿಕ ಅವರು ಈ ಮಾತು ಹೇಳಿದ್ದಾರೆ.

ಸುದರ್ಶನ್ ರೆಡ್ಡಿ ಅವರಿಗೆ ಇಂಡಿಯಾ ಬ್ಲಾಕ್‌ನ 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಅದರಲ್ಲಿ ಈ ಒಕ್ಕೂಟದ ಭಾಗವಾಗದೇ ಇರುವ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕೂಡ ಸೇರಿದೆ.

2011ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ, ವ್ಯಾಪಕ ಗೌರವಕ್ಕೆ ಪಾತ್ರರಾಗಿರುವ ನ್ಯಾಯವಾದಿ ರೆಡ್ಡಿ ಅವರನ್ನು ಬಿಜೆಪಿಯ ರಾಧಾಕೃಷ್ಣನ್ ವಿರುದ್ಧ ನಿಲ್ಲಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಸಂವಿಧಾನ ಮತ್ತು ನ್ಯಾಯಾಂಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಡೆಸುತ್ತಿರುವ ದಾಳಿಗಳ ವಿರುದ್ಧ ತಮ್ಮ ರಾಜಕೀಯ ಆಖ್ಯಾನವನ್ನು ಮುಂದುವರಿಸುವುದು ಇಂಡಿಯಾ ಬ್ಲಾಕ್ ಕಾರ್ಯತಂತ್ರವಾಗಿದೆ.

ತೆಲುಗು ಪಕ್ಷಗಳ ವಿರುದ್ಧ ಚಾಣಾಕ್ಷ ನಡೆ

ಇದೇ ವೇಳೆ, ಎನ್‌ಡಿಎ ಘಟಕ ಪಕ್ಷಗಳಾದ ಎನ್. ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ, ಹಾಗೂ ಯಾವುದೇ ಮೈತ್ರಿ ಮಾಡಿಕೊಳ್ಳದ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಮತ್ತು ಕೆ. ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ – ಈ ತೆಲುಗು ಮಾತನಾಡುವ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಎಲ್ಲಾ ಪ್ರಮುಖ ಪಕ್ಷಗಳನ್ನು ರಾಜಕೀಯ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ನ ಈ ಕ್ರಮ ಒಂದು ಚಾಣಾಕ್ಷ ನಡೆ ಕೂಡ ಆಗಿದೆ.

ರೆಡ್ಡಿ ಅವರು ಕಣದಲ್ಲಿ ಇರುವುದರಿಂದ ಮತ್ತು ಅವರ ನಾಮಪತ್ರಗಳು ಪರಿಶೀಲನೆಯಲ್ಲಿ ಉತ್ತೀರ್ಣವಾಗುತ್ತವೆ ಎಂದು ಊಹಿಸಿದರೆ, INDIA ಒಕ್ಕೂಟ ಮತ್ತು ಅದರ ಘಟಕ ಪಕ್ಷಗಳು, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಪಕ್ಷಗಳು ತಕ್ಕಮಟ್ಟಿಗೆ ನಿರಾಳವಾಗಿರಬಹುದು. ಎನ್‌ಡಿಎಗೆ ಸ್ಪಷ್ಟ ಬಹುಮತ ಇರುವುದರಿಂದ, ರಾಧಾಕೃಷ್ಣನ್ ಅವರಿಗೆ ಅನುಕೂಲಕರ ಫಲಿತಾಂಶ ಲಭ್ಯವಾಗುವುದು ಪೂರ್ವನಿರ್ಧರಿತ ಸಂಗತಿಯಾಗಿದೆ.

ಅದೇ ರೀತಿ ರೆಡ್ಡಿ ಅವರ ಸ್ಪರ್ಧೆಯ ಕಾರಣದಿಂದ, ಬಿಜೆಪಿ ತಮಿಳು ಅಸ್ಮಿತೆಯನ್ನು ಪ್ರಚೋದಿಸಿ, ತಮ್ಮವರೇ ಆದ ರಾಧಾಕೃಷ್ಣನ್ ಅವರನ್ನು ಬೆಂಬಲಿಸದ ದಕ್ಷಿಣದ ರಾಜ್ಯದ ವಿರೋಧ ಪಕ್ಷಗಳನ್ನು ಟೀಕಿಸುವ ಸಾಧ್ಯತೆ ಕ್ಷೀಣಿಸಿದೆ. ಇದರಿಂದ ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅದರ ಮಿತ್ರಪಕ್ಷಗಳು ರಾಜ್ಯದಲ್ಲಿ ಯಾವುದೇ ಆತಂಕಕಾರಿ ಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಕೂಡ ಇಲ್ಲ.

ಹಿಂದೂತ್ವದ ಮತಾಂತರ ವಿರೋಧಿ ಸಂಘರ್ಷವು ಕೇರಳದಲ್ಲಿ ಬಿಜೆಪಿಗಿರುವ ಕ್ರಿಶ್ಚಿಯನ್ ಕುರಿತ ಗೊಂದಲವನ್ನು ಹೇಗೆ ಬಯಲು ಮಾಡುತ್ತದೆ?

ಬಿಜೆಪಿಯು ತಮಿಳು ಅಸ್ಮಿತೆಯನ್ನು ಪ್ರಚೋದಿಸಿದರೆ, ವಿರೋಧ ಪಕ್ಷಗಳು ತೆಲುಗು ಅಸ್ಮಿತೆಯನ್ನು ಕೈಗೆತ್ತಿಕೊಂಡು ತಿರುಗೇಟು ನೀಡಬಹುದು. ಟಿಡಿಪಿ, ಜನಸೇನಾ ಮತ್ತು ಕೇಸರಿ ಪಕ್ಷವನ್ನು ಪ್ರಶ್ನಿಸಿ, ರೆಡ್ಡಿ ಅವರ ವಿರುದ್ಧದ ಅವರ ವಿರೋಧವು ತೆಲುಗು ಮಾತನಾಡುವ ಈ ಎರಡು ರಾಜ್ಯಗಳಿಗೆ ಮಾಡಿದ ಅವಮಾನವೆಂದು ಪರಿಗಣಿಸಬೇಕೇ ಎಂದು ಕೇಳಬಹುದು. ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿರುವುದನ್ನು ಅನುಮೋದಿಸಿರುವ ನಾಯ್ಡು, ಪವನ್ ಕಲ್ಯಾಣ್ ಮತ್ತು ಜಗನ್ ರೆಡ್ಡಿ, ಈ ಮೂವರೂ ನಾಯಕರು ಇಂತಹ ಆರೋಪವನ್ನು ತಪ್ಪಿಸಲು ಕಟಿಬದ್ಧರಾಗಿದ್ದಾರೆ.

ಡಿಎಂಕೆ ಅಭ್ಯರ್ಥಿ ಶಿವ

ಹಾಗಂತ ರೆಡ್ಡಿ ಅವರೇನೂ ವಿರೋಧ ಪಾಳಯದ ಮೊದಲ ಆಯ್ಕೆಯೇನೂ ಆಗಿರಲಿಲ್ಲ. ಯಾವಾಗ ಎನ್.ಡಿ.ಎ ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ತಳೆಯಿತೋ ಆಗಲೇ ಇಂಡಿಯಾ ಒಕ್ಕೂಟದ ನಿಲುವು ಬದಲಾಯಿತು. ಡಿಎಂಕೆ ತಮಿಳರನ್ನು ಆಯ್ಕೆ ಮಾಡಬೇಕೆಂದು ಒತ್ತಡ ಹಾಕಿತ್ತು. ಅದಕ್ಕಾಗಿ ರಾಜ್ಯಸಭಾ ಸದಸ್ಯರೂ ಹಿರಿಯರೂ ಆದ ತಿರುಚ್ಚಿ ಶಿವ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಸೂಚಿಸಿತ್ತು.

ಸ್ಪಷ್ಟ ಆರ್.ಎಸ್.ಎಸ್. ಹಿನ್ನೆಲೆಯುಳ್ಳ ರಾಧಾಕೃಷ್ಣನ್ ಅವರನ್ನು ಬೆಂಬಲಿಸುವ ಮಾತೇ ಇಲ್ಲ ಎಂದು ಡಿಎಂಕೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಆದರೆ ಮುಂದಿನ ವರ್ಷವೇ ತಮಿಳು ನಾಡು ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ಆಗ ಬಿಜೆಪಿ ತಮಿಳು ಅಸ್ಮಿತೆಯನ್ನು ಎತ್ತಿಕೊಂಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಟೀಕಿಸುವ ಸಾಧ್ಯತೆಯನ್ನೂ ಕಡೆಗಣಿಸುವಂತಿಲ್ಲ.

ಬಿಜೆಪಿಯ ಅಂತಹ ಪ್ರಯತ್ನಕ್ಕೆ ಟಕ್ಕರ್ ನೀಡುವ ದೃಷ್ಟಿಯಿಂದಲೇ ಎಲ್ಲ ಪಕ್ಷದ ವಲಯಗಳಲ್ಲಿ ಉತ್ತಮ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿರುವ ಉತ್ತಮ ಸಂಸದೀಯಪಟು ಶಿವ ಅವರ ಹೆಸರನ್ನು ಚಾಲ್ತಿಗೆ ತರಲಾಗಿತ್ತು ಎಂದು ಡಿಎಂಕೆ ಮೂಲಗಳು ತಿಳಿಸುತ್ತವೆ.

ಷರತ್ತು ಮುಂದಿಟ್ಟ ಮಮತಾ

ಆದರೆ ಮೊದಲ ಪ್ರತಿರೋಧ ವ್ಯಕ್ತವಾಗಿದ್ದೇ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ ಅವರಿಂದ. ಇತ್ತೀಚಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಿಂದ ಯಾವುದೇ ಸಲಹೆಗಳು ಬಂದರೂ ಅದನ್ನು ಏಕಾಏಕಿ ಒಪ್ಪಿಕೊಳ್ಳದಿರುವ ನಿಲುವು ತೋರುತ್ತಿರುವ ಮಮತಾ ಅವರು ಮುಂಬರುವ ಉಪ ರಾಷ್ಟ್ರಪತಿ ಚುನಾವಣೆ ವಿರೋಧ ಪಕ್ಷದ ಸಂಯುಕ್ತ ಅಭ್ಯರ್ಥಿಯನ್ನು ಒಪ್ಪಿಕೊಳ್ಳಬೇಕಾದರೆ ಎರಡು ಬಹುಮುಖ್ಯ ಷರತ್ತುಗಳನ್ನು ವಿಧಿಸಿದ್ದರು.

ಆ ಎರಡು ಷರತ್ತುಗಳೆಂದರೆ, ಅಭ್ಯರ್ಥಿಯು ರಾಜಕಾರಣಿಯಾಗಿರಬಾರದು ಮತ್ತು ಉಪರಾಷ್ಟ್ರಪತಿ ಚುನಾವಣೆಯು ತಮಿಳರ ವಿರುದ್ಧ ತಮಿಳು ಸ್ಪರ್ಧೆಯಾಗಬಾರದು. ಬ್ಯಾನರ್ಜಿ ಅವರ ಈ ಷರತ್ತುಗಳ ಕಾರಣದಿಂದಾಗಿ ಕೇವಲ ಶಿವ ಮಾತ್ರವಲ್ಲ, ರಾಜಕಾರಣಿ ಅಲ್ಲದ ಇಸ್ರೋ ವಿಜ್ಞಾನಿ ಮೈಲಸ್ವಾಮಿ ಅವರ ಹೆಸರನ್ನೂ ಪಕ್ಕಕ್ಕಿಡಬೇಕಾಯಿತು.

ಈ ಹಿನ್ನೆಲೆಯಲ್ಲಿ 2022ರ ಉಪರಾಷ್ಟ್ರಪತಿ ಚುನಾವಣೆಯ ಮುಜುಗರದ ಸನ್ನಿವೇಶ ಪುನರಾವರ್ತನೆಯಾಗುವುದು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿರಲಿಲ್ಲ. ಆಗ ಎನ್.ಡಿ.ಎ ಅಭ್ಯರ್ಥಿ ಜಗದೀಪ್ ಧನಕರ್ ಅವರ ವಿರುದ್ಧ ಕಾಂಗ್ರೆಸ್ ನಾಯಕಿ ಹಾಗೂ ವಿರೋಧ ಪಕ್ಷದ ಜಂಟಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರನ್ನು ಕಣಕ್ಕಿಳಿಸಿದಾಗ ಮಮತಾ ಅವರು ಮುನಿಸಿಕೊಂಡು ತಮ್ಮ ಸಂಸದರಿಗೆ ಮತ ಚಲಾವಣೆ ಮಾಡದೇ ಗೈರಾಗುವಂತೆ ಸೂಚನೆ ನೀಡಿದ್ದರು.

ಧನಕರ್ ಅವರು ಪಶ್ಚಿಮ ಬಂಗಾಲದಲ್ಲಿ ರಾಜ್ಯಪಾಲರಾಗಿದ್ದಾಗ ಬ್ಯಾನರ್ಜಿ ಸರ್ಕಾರದ ವಿರುದ್ಧ ದೊಡ್ಡ ಸಮರವೇ ಸಾರಿದ್ದರಿಂದ ಅವರಿಬ್ಬರ ಸಂಬಂಧ ಹಳಸಿತ್ತು. ಆದ್ದರಿಂದ ವಿರೋಧಿ ಪಾಳಯದಿಂದ ಯಾರನ್ನೇ ಕಣಕ್ಕಿಳಿಸಿದರೂ ಮಮತಾ ಬೆಂಬಲ ನೀಡಿಯೇ ನೀಡುತ್ತಾರೆ ಎಂಬ ಕಾಂಗ್ರೆಸ್ಸಿನ ಲೆಕ್ಕಾಚಾರ ತಲೆಕೆಳಗಾಗಿ ತೀವ್ರ ಮುಖಭಂಗ ಅನುಭವಿಸಿತ್ತು. ಹಾಗಾಗಿ ಅದು ಈ ಬಾರಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಹೋಗಿಲ್ಲ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೇನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿರುವಾಗ, ಬ್ಯಾನರ್ಜಿ ಮತ್ತೆ ತಮ್ಮ ವಿರೋಧ ಪಕ್ಷದ ಸಹೋದ್ಯೋಗಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಖರ್ಗೆ ಮತ್ತು ಇತರ ಇಂಡಿಯಾ ಬಣದ ನಾಯಕರ ನಡುವೆ ಕಳೆದ ಎರಡು ದಿನಗಳಿಂದ ನಡೆದ ಕನಿಷ್ಠ ಎರಡು ಸುತ್ತಿನ ಚರ್ಚೆಗಳು ನಡೆದರೂ ಒಮ್ಮತಕ್ಕೆ ಬರಲು ವಿಫಲವಾಗಿವೆ ಎಂದು ಮೂಲಗಳು ತಿಳಿಸಿವೆ.

ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಹಿಂದಿ ವಲಯದ ರಾಜ್ಯಗಳಿಂದ ದಲಿತ ಅಥವಾ ಹಿಂದುಳಿದ ಜಾತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ಪರಿಗಣಿಸುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿತ್ತು.

ರೆಡ್ಡಿ ಬಗ್ಗೆ ರಾಹುಲ್ ಮೆಚ್ಚುಗೆ

"ಮತದಾರ ಅಧಿಕಾರ ಯಾತ್ರೆ"ಯಲ್ಲಿ ಬಿಹಾರದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಸುದರ್ಶನ ರೆಡ್ಡಿ ಅವರ ಹೆಸರನ್ನು ಸೂಚಿಸಿದ್ದು ಆಗಸ್ಟ್ 18ರಂದು. ಕಾಂಗ್ರೆಸ್ ಮೂಲಗಳು ತಿಳಿಸಿರುವಂತೆ, ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಸ್ಥಾಪಿಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸಮೀಕ್ಷೆಯನ್ನು ಮೌಲ್ಯಮಾಪನ ಮಾಡಲು ಮತ್ತು ವರದಿ ಸಲ್ಲಿಸಲು ರೆಡ್ಡಿ ಅವರು ತಜ್ಞರ ಗುಂಪಿನ ಮುಖ್ಯಸ್ಥರಾಗಿದ್ದಾಗ, ಅವರ ಕಾರ್ಯಗಳಿಂದ ರಾಹುಲ್ "ಹೆಚ್ಚು ಪ್ರಭಾವಿತರಾಗಿದ್ದರು". ರಾಹುಲ್ ಅವರು ಜಾತಿ ಸಮೀಕ್ಷೆಗಾಗಿ "ತೆಲಂಗಾಣ ಮಾದರಿ" ಯನ್ನು ದೇಶಾದ್ಯಂತ ಪುನರಾವರ್ತಿಸಬೇಕು ಎಂದು ಪ್ರತಿಪಾದಿಸುತ್ತಿರುವುದನ್ನು ಗಮನಿಸಬಹುದು.

ರಾಹುಲ್ ಅವರ ಸಲಹೆಯ ನಂತರ ಖರ್ಗೆ ತಕ್ಷಣ ಇತರ ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದರು. ಅಲ್ಲಿಂದ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಎಡಪಕ್ಷಗಳು ರೆಡ್ಡಿ ಅವರ ಅಭ್ಯರ್ಥಿತನವನ್ನು ಸುಲಭವಾಗಿ ಅನುಮೋದಿಸಿದರೆ, ತಮ್ಮ ಎರಡೂ ಷರತ್ತು ಪೂರೈಸಿದ್ದಕ್ಕಾಗಿ ಟಿಎಂಸಿ, ಅನಿವಾರ್ಯವಾಗಿ ಒಪ್ಪಿಕೊಂಡಿತು.

ತರಾತುರಿಯ ಸಭೆ

ಸೋಮವಾರ ಮಧ್ಯಾಹ್ನದ ಸುಮಾರಿಗೆ, ವಿರೋಧ ಪಕ್ಷದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮುಖ್ಯಸ್ಥ ಶರದ್ ಪವಾರ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಟಿಎಂಸಿ ಸಂಸದರಾದ ಡೆರೆಕ್ ಓಬ್ರೇನ್ ಮತ್ತು ಶತಬ್ದಿ ರಾಯ್, ಡಿಎಂಕೆ ಪಕ್ಷದ ಶಿವ ಮತ್ತು ಕನಿಮೋಳಿ, ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಸಂಜಯ್ ರಾವತ್ ಸೇರಿದಂತೆ ಅನೇಕ ವಿರೋಧ ಪಕ್ಷದ ನಾಯಕರು ಖರ್ಗೆ ಅವರ ನಿವಾಸಕ್ಕೆ ಆಗಮಿಸಿದರು.

ಅಲ್ಲಿಯೇ ರೆಡ್ಡಿ ಅವರ ಹೆಸರನ್ನು ಅನುಮೋದಿಸಲಾಯಿತು, ಖರ್ಗೆ ಅವರು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರನ್ನು "ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಸ್ಥಿರ ಮತ್ತು ಧೈರ್ಯಶಾಲಿ ಪ್ರತಿಪಾದಕ... ಬಡವರ ಪರ ವ್ಯಕ್ತಿ" ಎಂದು ಕರೆದರು. ಅವರ ತೀರ್ಪುಗಳು "ಬಡವರ ಪರವಾಗಿದ್ದು, ಸಂವಿಧಾನ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸಿವೆ" ಎಂದು ಘೋಷಣೆ ಮಾಡಿದರು.

“ಉಪರಾಷ್ಟ್ರಪತಿ ಚುನಾವಣೆಯು ಒಂದು ಸೈದ್ಧಾಂತಿಕ ಸಂಘರ್ಷವಾಗಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಬಿ. ಸುದರ್ಶನ್ ರೆಡ್ಡಿಗಾರು ಅವರನ್ನು ಸರ್ವಾನುಮತದಿಂದ ನಾಮನಿರ್ದೇಶನ ಮಾಡಿವೆ” ಎಂದು ಖರ್ಗೆ ಹೇಳಿದರು. ಅಭ್ಯರ್ಥಿಯು “ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯನ್ನು ಗಹನವಾಗಿ ರೂಪಿಸಿದ ಮೌಲ್ಯಗಳು ಮತ್ತು ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಾರೆ, ಈ ಎಲ್ಲಾ ಮೌಲ್ಯಗಳು ದಾಳಿಗೆ ಒಳಗಾಗಿರುವ ಈ ಕಾಲಘಟ್ಟದಲ್ಲಿ ಈ ಚುನಾವಣೆಯಲ್ಲಿ ಹೋರಾಡಲು ನಮ್ಮ ಸಾಮೂಹಿಕ ಮತ್ತು ದೃಢ ಸಂಕಲ್ಪವಿದೆ" ಎಂದು ಹೇಳಿರುವುದು ವಿಶೇಷ.

Tags:    

Similar News