ಇಂಧನ ಸೋರಿಕೆ; ವಾರಾಣಸಿಯಲ್ಲಿ ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶ
ಇಂಧನ ಸೋರಿಕೆ ಗಮನಿಸಿದ ನಂತರ ಪೈಲಟ್ ತ್ವರಿತವಾಗಿ ವಾಯು ಸಂಚಾರ ನಿಯಂತ್ರಣ ಅಧಿಕಾರಿಗೆ (ATC) ಮಾಹಿತಿ ನೀಡಿದ್ದರು. ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ, ಎಲ್ಲಾ 166 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲ್ಕತ್ತಾದಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಬುಧವಾರ (ಅ. 22) ಇಂಧನ ಸೋರಿಕೆಯಿಂದ ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಇಂಧನ ಸೋರಿಕೆ ಗಮನಿಸಿದ ನಂತರ ಪೈಲಟ್ ತ್ವರಿತವಾಗಿ ವಾಯು ಸಂಚಾರ ನಿಯಂತ್ರಣ (ATC) ಗೆ ಮಾಹಿತಿ ನೀಡಿದ್ದರು. ಕೂಡಲೇ ವಿಮಾನವನ್ನು ಲ್ಯಾಂಡಿಂಗ್ ಮಾಡಿಸಿ, 166 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಘಟನೆಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಎಂದು ವಾರಾಣಸಿ ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ದುರಸ್ತಿ ನಂತರ ಪ್ರಯಾಣ ಪುನರಾರಂಭ
ನಿಲ್ದಾಣದ ವಾಯು ಸಂಚಾರ ನಿಯಂತ್ರಣ ಅಧಿಕಾರಿ ಅನುಮತಿ ನೀಡಿದ ನಂತರ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ರನ್‌ವೇಯಲ್ಲಿ ಇಳಿಸಿದ್ದಾರೆ. ಅಗತ್ಯ ತಪಾಸಣೆ ಮತ್ತು ದುರಸ್ತಿ ನಂತರ ಇಂಡಿಗೋ ವಿಮಾನವು ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್ ಮತ್ತು ಸಿಬ್ಬಂದಿಯ ಮುಂಜಾಗ್ರತಾ ಕ್ರಮವನ್ನು ಪ್ರಯಾಣಿಕರು ಶ್ಲಾಘಿಸಿದರು. "ಪೈಲಟ್ ಮತ್ತು ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿದರು. ನಾವು ವಿಮಾನದಲ್ಲಿ ಸುರಕ್ಷಿತವಾಗಿದ್ದೆವು" ಎಂದು ಒಬ್ಬ ಪ್ರಯಾಣಿಕರೊಬ್ಬರು ವರದಿಗಾರರಿಗೆ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬಿರುಕು ಬಿಟ್ಟಿದ್ದ ವಿಮಾನದ ವಿಂಡ್‌ಶೀಲ್ಡ್
ಅ. 11 ರಂದು ಮಧುರೈನಿಂದ ಚೆನ್ನೈಗೆ 76 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ವಿಮಾನ (6E 7253) ಲ್ಯಾಂಡಿಂಗ್‌ಗೆ ಸ್ವಲ್ಪ ಮೊದಲು ವಿಂಡ್‌ಶೀಲ್ಡ್ ಬಿರುಕು ಬಿಟ್ಟಿತ್ತು. ಪೈಲಟ್ ಈ ಸಮಸ್ಯೆಯನ್ನು ತಕ್ಷಣ ವಾಯು ಸಂಚಾರ ನಿಯಂತ್ರಣಕ್ಕೆ ವರದಿ ಮಾಡಿದ್ದರು. ಶೀಲ್ಡ್ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲು ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿತ್ತು.
ಬಾಂಬ್ ಬೆದರಿಕೆ
ಕಳೆದ ತಿಂಗಳು, ಮುಂಬೈನಿಂದ ದೆಹಲಿಗೆ ಸುಮಾರು 200 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ವಿಮಾನಕ್ಕೆ (6E 762) ಸೆ.30 ರಂದು ಬಾಂಬ್ ಬೆದರಿಕೆ ಬಂದಿತ್ತು. ತಕ್ಷಣ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ವಿಮಾನಯಾನ ಸಿಬ್ಬಂದಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ವಿಮಾನ ಟ್ರ್ಯಾಕಿಂಗ್ ಡೇಟಾದ ಪ್ರಕಾರ ಏರ್‌ಬಸ್ A321neo ವಿಮಾನವು ಬೆಳಿಗ್ಗೆ 7:53 ರ ಸುಮಾರಿಗೆ ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದಿತ್ತು.