ಮುಂಬೈ: ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ, ಬಾಲಕಿ ಸೇರಿ ನಾಲ್ವರ ದುರ್ಮರಣ

ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗಳಿಗೂ ವ್ಯಾಪಿಸಿ, ಕೆಲವೇ ಕ್ಷಣಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಿವಾಸಿಗಳು ನಿದ್ದೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದರಿಂದ, ಅನೇಕರು ಒಳಗೆ ಸಿಲುಕಿಕೊಂಡಿದ್ದರು.

Update: 2025-10-21 06:05 GMT

 ನವಿ ಮುಂಬೈನಲ್ಲಿರುವ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸಂಭವಿಸಿದೆ.  

Click the Play button to listen to article

ಮಹಾರಾಷ್ಟ್ರದ ನವಿ ಮುಂಬೈನಲ್ಲಿರುವ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಆರು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನವಿ ಮುಂಬೈನ ವಾಶಿ ಪ್ರದೇಶದ ಸೆಕ್ಟರ್ 14ರಲ್ಲಿರುವ ರಹೇಜಾ ರೆಸಿಡೆನ್ಸಿ ಎಂಬ ವಸತಿ ಸಮುಚ್ಚಯದ 10ನೇ ಮಹಡಿಯಲ್ಲಿ ಮಧ್ಯರಾತ್ರಿ ಸುಮಾರು 12.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗಳಿಗೂ ವ್ಯಾಪಿಸಿ, ಕೆಲವೇ ಕ್ಷಣಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಿವಾಸಿಗಳು ನಿದ್ದೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದರಿಂದ, ಅನೇಕರು ಒಳಗೆ ಸಿಲುಕಿಕೊಂಡಿದ್ದರು.

ನಾಲ್ವರ ಸಾವು, ಹಲವರಿಗೆ ಗಾಯ

ಘಟನೆಯಲ್ಲಿ ವೇದಿಕಾ ಸುಂದರ್ ಬಾಲಕೃಷ್ಣನ್ (6), ಸುಂದರ್ ಬಾಲಕೃಷ್ಣನ್ (44), ಪೂಜಾ ರಾಜನ್ (39) ಮತ್ತು ಕಮಲಾ ಹೀರಾ ಜೈನ್ (84) ಎಂಬ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ. ಬೆಂಕಿ ಮತ್ತು ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಇವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಗೊಂಡ 10 ಮಂದಿಯನ್ನು ತಕ್ಷಣವೇ ಸಮೀಪದ ಎಂಜಿಎಂ ಮತ್ತು ಫೋರ್ಟಿಸ್ ಹಿರಾನಂದಾನಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ 40ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, 8ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ, ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.

ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಸಂಬಂಧ ವಾಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Similar News