ಲೋಕಸಭೆಯ ಸ್ಪೀಕರ್ ಪೀಠದಲ್ಲಿ ಕನ್ನಡಿಗ: ಗದ್ದಲದ ನಡುವೆಯೂ ಸದನ ನಡೆಸಿಕೊಟ್ಟ ಪಿ.ಸಿ. ಮೋಹನ್

ಪ್ರತಿಪಕ್ಷಗಳ ಘೋಷಣೆ ಮತ್ತು ಅಡೆತಡೆಗಳ ನಡುವೆಯೂ ಮೋಹನ್ ಅವರು ತಾಳ್ಮೆಯಿಂದ ಸದನದ ಕಲಾಪ ನಡೆಸಲು ಯತ್ನಿಸಿದರು.

Update: 2025-12-02 09:11 GMT
Click the Play button to listen to article

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಲೋಕಸಭಾ ಚೇರ್‌ಪರ್ಸನ್‌ಗಳ ಪ್ಯಾನಲ್ ಸದಸ್ಯರಾದ ಶ್ರೀ ಪಿ.ಸಿ. ಮೋಹನ್ ಅವರು ಇಂದು (ಡಿಸೆಂಬರ್ 2) ಲೋಕಸಭೆಯ ಸ್ಪೀಕರ್​​ ಸ್ಥಾನ ಅಲಂಕರಿಸುವ ಮೂಲಕ ಗಮನ ಸೆಳೆದರು.


ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ, ವಿರೋಧ ಪಕ್ಷಗಳು ಸಂವಿಧಾನ ರಕ್ಷಣೆ, ಅದಾನಿ ಸಮೂಹದ ವಿರುದ್ಧದ ಆರೋಪಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ಭಾರೀ ಗದ್ದಲ ಎಬ್ಬಿಸಿದವು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರ ಅನುಪಸ್ಥಿತಿಯಲ್ಲಿ, ಪ್ಯಾನಲ್ ಸ್ಪೀಕರ್ ಆಗಿದ್ದ ಪಿ.ಸಿ. ಮೋಹನ್ ಅವರು ಸ್ಪೀಕರ್ ಆಸನದಲ್ಲಿ ಆಸೀನರಾಗಿದ್ದರು.

ಪ್ರತಿಪಕ್ಷಗಳ ಘೋಷಣೆ ಮತ್ತು ಅಡೆತಡೆಗಳ ನಡುವೆಯೂ ಮೋಹನ್ ಅವರು ತಾಳ್ಮೆಯಿಂದ ಸದನದ ಕಲಾಪ ನಡೆಸಲು ಯತ್ನಿಸಿದರು. ಸದಸ್ಯರನ್ನು ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನದ ಘನತೆ ಕಾಪಾಡುವಂತೆ ಹಲವು ಬಾರಿ ಮನವಿ ಮಾಡಿದರು. ಆದಾಗ್ಯೂ, ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​

ಈ ಐತಿಹಾಸಿಕ ಕ್ಷಣದ ಬಗ್ಗೆ ಪಿ.ಸಿ. ಮೋಹನ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ವೀಡಿಯೊ ಹಂಚಿಕೊಂಡಿದ್ದು, ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. "ಲೋಕಸಭೆಯಲ್ಲಿ ಅಧ್ಯಕ್ಷೀಯ ಪೀಠದಲ್ಲಿ ಕುಳಿತು ಸದನ ನಡೆಸುವ ಅವಕಾಶ ಸಿಕ್ಕಿತು," ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಕನ್ನಡಿಗರು ಸೇರಿದಂತೆ ಸಾವಿರಾರು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪಿ.ಸಿ. ಮೋಹನ್ ಅವರು ಹಿರಿಯ ಬಿಜೆಪಿ ನಾಯಕರಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಅವರು ಲೋಕಸಭಾ ಸ್ಪೀಕರ್ ಅವರ ಚೇರ್‌ಪರ್ಸನ್ ಪ್ಯಾನಲ್‌ನ ಸದಸ್ಯರಾಗಿ ನೇಮಕಗೊಂಡಿದ್ದು, ಸ್ಪೀಕರ್ ಅನುಪಸ್ಥಿತಿಯಲ್ಲಿ ಸದನ ನಡೆಸುವ ಜವಾಬ್ದಾರಿ ಇವರ ಮೇಲಿರುತ್ತದೆ. 

Tags:    

Similar News