ಸಂಚಾರ್ ಸಾಥಿ ಕಡ್ಡಾಯವಲ್ಲ, ಡಿಲೀಟ್ ಮಾಡಬಹುದು: ಗೊಂದಲಗಳಿಗೆ ತೆರೆ ಎಳೆದ ಸಚಿವ ಸಿಂಧಿಯಾ

ಗ್ರಾಹಕರ ರಕ್ಷಣೆ ಮತ್ತು ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಈ ಆ್ಯಪ್​ ಜಾರಿಗೆ ತರಲಾಗಿದೆಯೇ ಹೊರತು, ಇದು ಕಡ್ಡಾಯ ಹೇರಿಕೆಯಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

Update: 2025-12-02 10:18 GMT

ದೇಶದಲ್ಲಿ ಮಾರಾಟವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್​ (Sanchar Saathi App) ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ದೇಶನದ ಬಗ್ಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಈ ಗದ್ದಲದ ನಡುವೆಯೇ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಪಷ್ಟನೆ ನೀಡಿದ್ದು, "ಈ ಆ್ಯಪ್​ ಬಳಕೆ ಕಡ್ಡಾಯವಲ್ಲ, ಗ್ರಾಹಕರು ಇಷ್ಟವಿಲ್ಲದಿದ್ದರೆ ಇದನ್ನು ತಮ್ಮ ಫೋನಿನಿಂದ ಡಿಲೀಟ್ ಮಾಡಬಹುದು" ಎಂದು ತಿಳಿಸಿದ್ದಾರೆ.

ಗ್ರಾಹಕರ ರಕ್ಷಣೆ ಮತ್ತು ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಈ ಆ್ಯಪ್​ ಜಾರಿಗೆ ತರಲಾಗಿದೆಯೇ ಹೊರತು, ಇದು ಕಡ್ಡಾಯ ಹೇರಿಕೆಯಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ಗೂಗಲ್ ಮ್ಯಾಪ್ಸ್ ರೀತಿಯಲ್ಲೇ ಡಿಲೀಟ್ ಮಾಡಬಹುದು

ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಸಿಂಧಿಯಾ, "ಸಂಚಾರ್ ಸಾಥಿ ಆ್ಯಪ್​ ಬೇಡ ಎಂದಾದರೆ ಸಕ್ರಿಯಗೊಳಿಸಬೇಡಿ (ಆಕ್ಟಿವೇಟ್). ನಿಮಗೆ ಇಷ್ಟವಿದ್ದರೆ ಮಾತ್ರ ಫೋನ್‌ನಲ್ಲಿ ಇಟ್ಟುಕೊಳ್ಳಿ. ಬೇಡವೆಂದರೆ ನಿರ್ಭೀತಿಯಿಂದ ಡಿಲೀಟ್ ಮಾಡಿ. ಉದಾಹರಣೆಗೆ, ನೀವು ಹೊಸ ಫೋನ್ ಖರೀದಿಸಿದಾಗ ಗೂಗಲ್ ಮ್ಯಾಪ್ಸ್ ಸೇರಿದಂತೆ ಹಲವು ಆಪ್‌ಗಳು ಪ್ರಿ-ಇನ್‌ಸ್ಟಾಲ್ (ಮೊದಲೇ ಅಳವಡಿಸಿದ) ಆಗಿ ಬಂದಿರುತ್ತವೆ. ನೀವು ಗೂಗಲ್ ಮ್ಯಾಪ್ಸ್ ಬಳಸಲು ಇಚ್ಛಿಸದಿದ್ದರೆ ಅದನ್ನು ಹೇಗೆ ಡಿಲೀಟ್ ಮಾಡುತ್ತೀರೋ, ಹಾಗೆಯೇ ಇದನ್ನೂ ಮಾಡಬಹುದು" ಎಂದು ವಿವರಿಸಿದರು.

ತಾಂತ್ರಿಕವಾಗಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಮ್ಯಾಪ್ಸ್ ಅನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲು ಬರುವುದಿಲ್ಲ, ಕೇವಲ ಡಿಸೇಬಲ್ (ನಿಷ್ಕ್ರಿಯ) ಮಾಡಬಹುದು ಎಂಬುದು ಗಮನಾರ್ಹ. ಐಫೋನ್‌ಗಳಲ್ಲಿ ಮಾತ್ರ ಇದನ್ನು ಡಿಲೀಟ್ ಮಾಡುವ ಅವಕಾಶವಿದೆ.

ಗ್ರಾಹಕರ ರಕ್ಷಣೆಯೇ ಮುಖ್ಯ ಉದ್ದೇಶ

ಸಂಚಾರ್ ಸಾಥಿ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ ಸಿಂಧಿಯಾ, "ಇದು ಗ್ರಾಹಕರ ಸುರಕ್ಷತೆಯ ವಿಷಯ. ಇದರಲ್ಲಿ ಕಡ್ಡಾಯ ಎನ್ನುವಂಥದ್ದು ಏನೂ ಇಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ವಂಚನೆಯಿಂದ ರಕ್ಷಿಸಿಕೊಳ್ಳಲು ಒಂದು ಆ್ಯಪ್​ ಇದೆ ಎಂಬ ಮಾಹಿತಿ ಇರುವುದಿಲ್ಲ. ಹೀಗಾಗಿ, ಫೋನ್ ತಯಾರಕರಿಗೆ ಈ ನಿರ್ದೇಶನ ನೀಡುವ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ವಿಪಕ್ಷಗಳಿಂದ 'ಗೂಢಾಚಾರಿಕೆ' ಆರೋಪ

ಕೇಂದ್ರದ ಈ ನಡೆಯನ್ನು ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇದು ನಾಗರಿಕರ ಮೇಲೆ ಕಣ್ಣಿಡುವ ತಂತ್ರ ಎಂದು ಆರೋಪಿಸಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದೊಂದು "ಗೂಢಾಚಾರಿಕೆ ಆ್ಯಪ್​" (Snooping App) ಎಂದು ಜರೆದಿದ್ದು, "ಇದು ಕೇವಲ ಫೋನ್ ಕದ್ದಾಲಿಕೆಯಲ್ಲ, ದೇಶವನ್ನು ಸರ್ವಾಧಿಕಾರತ್ವದತ್ತ ಕೊಂಡೊಯ್ಯುವ ಪ್ರಯತ್ನ. ನಾಗರಿಕರ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವುದು ಹಾಸ್ಯಾಸ್ಪದ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಇದೊಂದು "ಬಿಗ್ ಬಾಸ್ ಮಾದರಿಯ ಕಣ್ಗಾವಲು" ಎಂದು ಟೀಕಿಸಿದ್ದಾರೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾಸಗಿತನ ಮೂಲಭೂತ ಹಕ್ಕಾಗಿದ್ದು, 'ಬಿಗ್ ಬ್ರದರ್' ನಮ್ಮನ್ನು ವೀಕ್ಷಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ: ಖರ್ಗೆ ಕಿಡಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಜನರ ದ್ವನಿಯನ್ನು ಹತ್ತಿಕುವ ಬಿಜೆಪಿಯ ಪ್ರಯತ್ನಗಳ ಪಟ್ಟಿಗೆ ಇದೊಂದು ಹೊಸ ಸೇರ್ಪಡೆ ಎಂದು ಟೀಕಿಸಿದ್ದಾರೆ. "ಯಾವುದೇ ಪಾಲುದಾರರು ಅಥವಾ ನಾಗರಿಕರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಆ್ಯಪ್​ ಹೇರುವುದು ಸರ್ವಾಧಿಕಾರಕ್ಕೆ ಸಮ. ನಾಗರಿಕರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಏನು ಮಾತನಾಡುತ್ತಾರೆ ಎಂಬುದನ್ನು ತಿಳಿಯಲು ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಏಕೆ?" ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಸಚಿವರ ತಿರುಗೇಟು

ವಿಪಕ್ಷಗಳು ವಿಷಯವಿಲ್ಲದಿದ್ದರೂ ವಿವಾದ ಸೃಷ್ಟಿಸುತ್ತಿವೆ ಎಂದು ಸಿಂಧಿಯಾ ತಿರುಗೇಟು ನೀಡಿದ್ದಾರೆ. "2024ರಲ್ಲಿ ದೇಶದಲ್ಲಿ ಬರೋಬ್ಬರಿ 22,800 ಕೋಟಿ ರೂ. ಮೌಲ್ಯದ ಸೈಬರ್ ವಂಚನೆ ನಡೆದಿದೆ. ವಂಚನೆಯನ್ನು ಹೇಗೆ ತಡೆಯುತ್ತೀರಿ ಎಂದು ವಿಪಕ್ಷಗಳು ನಮ್ಮನ್ನು ಪ್ರಶ್ನಿಸುತ್ತವೆ. ಆದರೆ ನಾವು 'ಸಂಚಾರ್ ಸಾಥಿ'ಯಂತಹ ಪರಿಹಾರ ನೀಡಿದಾಗ ಅದನ್ನು 'ಪೆಗಾಸಸ್' ಎಂದು ಕರೆಯುತ್ತಾರೆ. ಸತ್ಯವನ್ನು ಒಪ್ಪಿಕೊಳ್ಳದವರಿಗೆ ನಾವೇನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

Tags:    

Similar News