
ಏನಿದು ಸಂಚಾರ್ ಸಾಥಿ ಆ್ಯಪ್: ಎಲ್ಲಾ ಮೊಬೈಲ್‌ಗಳಲ್ಲಿ ಕಡ್ಡಾಯ ಎಂದಿದ್ದೇಕೆ ಸರ್ಕಾರ?
ಹೊಸದಾಗಿ ಮಾರುಕಟ್ಟೆಗೆ ಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆ್ಯಪ್ 'ಪ್ರಿ-ಇನ್‌ಸ್ಟಾಲ್' (Pre-Install) ಆಗಿರಲೇಬೇಕು. ಅಂದರೆ, ಮೊಬೈಲ್ ಖರೀದಿಸುವಾಗಲೇ ಅದರಲ್ಲಿ ಈ ಆ್ಯಪ್ ಇರಬೇಕು.
ಸೈಬರ್ ವಂಚನೆ ಮತ್ತು ಮೊಬೈಲ್ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಂಚಾರ್ ಸಾಥಿ' (Sanchar Saathi) ಆ್ಯಪ್ ಅನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಆ್ಯಪಲ್, ಸ್ಯಾಮ್‌ಸಂಗ್, ವಿವೋ ಮತ್ತು ಓಪ್ಪೋ ಸೇರಿದಂತೆ ಪ್ರಮುಖ ಮೊಬೈಲ್ ತಯಾರಕರಿಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ಈ ಬಗ್ಗೆ ಮಹತ್ವದ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ಹೊಸದಾಗಿ ಮಾರುಕಟ್ಟೆಗೆ ಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆ್ಯಪ್ 'ಪ್ರಿ-ಇನ್‌ಸ್ಟಾಲ್' (Pre-Install) ಆಗಿರಲೇಬೇಕು. ಅಂದರೆ, ಮೊಬೈಲ್ ಖರೀದಿಸುವಾಗಲೇ ಅದರಲ್ಲಿ ಈ ಆ್ಯಪ್ ಇರಬೇಕು. ಬಳಕೆದಾರರಿಗೆ ಇದನ್ನು ಡಿಲೀಟ್ ಅಥವಾ ಅನ್-ಇನ್‌ಸ್ಟಾಲ್ ಮಾಡುವ ಆಯ್ಕೆ ನೀಡಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸರ್ಕಾರದ ಪ್ರಮುಖ ಆದೇಶಗಳೇನು?
ದೂರಸಂಪರ್ಕ ಸಚಿವಾಲಯವು ಮೊಬೈಲ್ ತಯಾರಕ ಕಂಪನಿಗಳಿಗೆ ನೀಡಿರುವ ಸೂಚನೆಗಳು ಹೀಗಿವೆ:
ಇನ್ನು ಮುಂದೆ ತಯಾರಾಗುವ ಎಲ್ಲಾ ಮೊಬೈಲ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯವಾಗಿ ಇರಬೇಕು. ಇದನ್ನು ಅಳವಡಿಸಲು ಕಂಪನಿಗಳಿಗೆ 90 ದಿನಗಳ ಗಡುವು ನೀಡಲಾಗಿದೆ.
ಈಗಾಗಲೇ ಗ್ರಾಹಕರ ಕೈಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ (Software Update) ಮೂಲಕ ಈ ಆ್ಯಪ್ ತಲುಪುವಂತೆ ವ್ಯವಸ್ಥೆ ಮಾಡಬೇಕು.
ಬಳಕೆದಾರರು ಬಯಸಿದರೂ ಈ ಆ್ಯಪ್ ಅನ್ನು ಫೋನ್‌ನಿಂದ ತೆಗೆದುಹಾಕಲು (Uninstall) ಸಾಧ್ಯವಾಗದಂತೆ ಇದನ್ನು ವಿನ್ಯಾಸಗೊಳಿಸಬೇಕು.
ಏನಿದು 'ಸಂಚಾರ್ ಸಾಥಿ' ಆ್ಯಪ್? ಇದರ ಉಪಯೋಗವೇನು?
2023ರಲ್ಲಿ ಸರ್ಕಾರ ಆರಂಭಿಸಿದ್ದ 'ಸಂಚಾರ್ ಸಾಥಿ' ವೆಬ್‌ಸೈಟ್‌ನ (sancharsaathi.gov.in) ಮುಂದುವರಿದ ಭಾಗವೇ ಈ ಆ್ಯಪ್. ಜನವರಿ 2025ರಲ್ಲಿ ಇದರ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್‌ನಲ್ಲಿರುವ ಪ್ರಮುಖ ಸೌಲಭ್ಯಗಳು ಇಲ್ಲಿವೆ:
1. ಕಳುವಾದ ಮೊಬೈಲ್ ಬ್ಲಾಕ್ ಮಾಡಬಹುದು: ನಿಮ್ಮ ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ, ಈ ಆ್ಯಪ್ ಮೂಲಕ ದೂರು ನೀಡಿ ಫೋನ್ ಅನ್ನು ಬ್ಲಾಕ್ ಮಾಡಬಹುದು. ಹೀಗೆ ಮಾಡಿದರೆ, ಆ ಫೋನ್‌ನಲ್ಲಿ ಬೇರೆ ಯಾವುದೇ ಸಿಮ್ ಕಾರ್ಡ್ ಹಾಕಿದರೂ ಅದು ಕೆಲಸ ಮಾಡುವುದಿಲ್ಲ.
2. ಖಚಿತ ಮಾಹಿತಿ ಲಭ್ಯ: ಬ್ಲಾಕ್ ಆದ ಮೊಬೈಲ್ ಅನ್ನು ದೇಶದ ಯಾವುದೇ ಮೂಲೆಯಲ್ಲಿ ಬಳಸಲು ಪ್ರಯತ್ನಿಸಿದರೂ, ತಕ್ಷಣವೇ ಕಾನೂನು ಜಾರಿ ಸಂಸ್ಥೆಗಳಿಗೆ (ಪೊಲೀಸ್) ಮಾಹಿತಿ ರವಾನೆಯಾಗುತ್ತದೆ.
3. 'ಚಕ್ಷು' (Chakshu) ಮೂಲಕ ವಂಚನೆಗೆ ಬ್ರೇಕ್: ನಿಮಗೆ ಅನುಮಾನಾಸ್ಪದ ಕರೆ, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಸಂದೇಶಗಳು ಬಂದರೆ, 'ಚಕ್ಷು' ಆಯ್ಕೆ ಮೂಲಕ ನೇರವಾಗಿ ವರದಿ ಮಾಡಬಹುದು. ಇದರಿಂದ ಸೈಬರ್ ವಂಚನೆ ತಡೆಯಲು ಸಾಧ್ಯವಾಗುತ್ತದೆ.
4. ನಕಲಿ ಸಿಮ್ ಪತ್ತೆ: ನಿಮ್ಮ ಹೆಸರಿನಲ್ಲಿ (ಆಧಾರ್ ಅಥವಾ ಐಡಿ ಬಳಸಿ) ನಿಮಗೆ ತಿಳಿಯದಂತೆ ಬೇರೆ ಯಾರಾದರೂ ಸಿಮ್ ಕಾರ್ಡ್ ಪಡೆದಿದ್ದರೆ, ಅದನ್ನು ಪತ್ತೆ ಹಚ್ಚಿ ಅನಧಿಕೃತ ಸಂಖ್ಯೆಗಳನ್ನು ರದ್ದುಗೊಳಿಸಲು ಈ ಆ್ಯಪ್ ಸಹಕಾರಿ.
5. ನೋ ಯುವರ್ ಮೊಬೈಲ್ (KYM): ನೀವು ಬಳಸುತ್ತಿರುವ ಅಥವಾ ಖರೀದಿಸಲು ಉದ್ದೇಶಿಸಿರುವ ಫೋನ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿಯಲು, ಐಎಂಇಐ (IMEI) ಸಂಖ್ಯೆ ಮೂಲಕ ಪರಿಶೀಲನೆ ನಡೆಸಬಹುದು.
ಇದುವರೆಗಿನ ಸಾಧನೆ
ಸಂಚಾರ್ ಸಾಥಿ ಆ್ಯಪ್ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಈ ವ್ಯವಸ್ಥೆಯಿಂದಾಗಿ 37 ಲಕ್ಷಕ್ಕೂ ಹೆಚ್ಚು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ ಹಾಗೂ 3 ಕೋಟಿಗೂ ಅಧಿಕ ನಕಲಿ ಸಂಪರ್ಕಗಳನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸುತ್ತವೆ. ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ಮತ್ತು ನಾಗರಿಕರ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

