ಬಿಹಾರ ಚುನಾವಣೆ: ಟಿಕೆಟ್ ನಿರಾಕರಿಸಿದ್ದಕ್ಕೆ ರಸ್ತೆಯಲ್ಲಿ ಹೊರಳಾಡಿ, ತಿಪ್ಪರಲಾಗ ಹಾಕಿದ ಆಕಾಂಕ್ಷಿ
ನನ್ನ ಮಕ್ಕಳ ಮದುವೆಯನ್ನು ಮುಂದೂಡಿ ಹಣ ಹೊಂದಿಸಿದ್ದೆ. ಈಗ ನಾನು ಬೀದಿಗೆ ಬಿದ್ದಿದ್ದೇನೆ. ಕನಿಷ್ಠ ನನ್ನ ಹಣವನ್ನಾದರೂ ವಾಪಸ್ ಕೊಡಲಿ," ಎಂದು ಆರ್‌ಜೆಡಿ ಟಿಕೆಟ್ ಆಕಾಂಕ್ಷಿಯೊಬ್ಬರು ಕಣ್ಣೀರು ಹಾಕಿದ್ದಾರೆ.
ಬಿಹಾರ ಚುನಾವಣೆಗೆ ರಾಷ್ಟ್ರೀಯ ಜನತಾ ದಳ ಟಿಕೆಟ್ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಆಕಾಂಕ್ಷಿಯೊಬ್ಬರು, ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ನಿವಾಸದ ಮುಂದೆ ಬಟ್ಟೆ ಹರಿದುಕೊಂಡು, ರಸ್ತೆಯಲ್ಲಿ ಹೊರಳಾಡಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಮದನ್ ಸಾಹ್ ಎಂಬ ಈ ನಾಯಕ, 2020ರ ಚುನಾವಣೆಯಲ್ಲಿ ಮಧುಬನ್ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿಯೂ ತಮಗೆ ಟಿಕೆಟ್ ಸಿಗುವ ಭರವಸೆಯಲ್ಲಿದ್ದರು. ಆದರೆ, ಟಿಕೆಟ್ ನಿರಾಕರಿಸಿದ್ದರಿಂದ ಹತಾಶರಾಗಿ ಅವರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
2.70 ಕೋಟಿ ರೂಪಾಯಿ ಬೇಡಿಕೆ ಆರೋಪ
ಟಿಕೆಟ್‌ಗಾಗಿ ತಮ್ಮ ಬಳಿ 2.70 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು ಎಂದು ಮದನ್ ಸಾಹ್ ಗಂಭೀರ ಆರೋಪ ಮಾಡಿದ್ದಾರೆ. "ನನ್ನ ಮಕ್ಕಳ ಮದುವೆಯನ್ನು ಮುಂದೂಡಿ ಹಣ ಹೊಂದಿಸಿದ್ದೆ. ಈಗ ನಾನು ಬೀದಿಗೆ ಬಿದ್ದಿದ್ದೇನೆ. ಕನಿಷ್ಠ ನನ್ನ ಹಣವನ್ನಾದರೂ ವಾಪಸ್ ಕೊಡಲಿ," ಎಂದು ಅವರು ಕಣ್ಣೀರು ಹಾಕಿದ್ದಾರೆ.
ಸಂಸದ ಸಂಜಯ್ ಯಾದವ್ ಅವರು ಹಣಕ್ಕಾಗಿ ಟಿಕೆಟ್ "ದಲ್ಲಾಳಿ ಕೆಲಸ" ಮಾಡಿದ್ದಾರೆ ಎಂದು ಆರೋಪಿಸಿದ ಸಾಹ್, ಮಧುಬನ್ ಕ್ಷೇತ್ರದ ಟಿಕೆಟ್ ಅನ್ನು ಡಾ. ಸಂತೋಷ್ ಕುಶ್ವಾಹ ಅವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
"ನನ್ನಂತಹ ಪ್ರಾಮಾಣಿಕ ಮತ್ತು ಕಷ್ಟಪಟ್ಟು ದುಡಿಯುವ ಕಾರ್ಯಕರ್ತರನ್ನು ಪಕ್ಷ ಕಡೆಗಣಿಸಿದೆ. ಹಣ ಇರುವವರಿಗೆ ಮಣೆ ಹಾಕುತ್ತಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಈ ಸ್ಥಾನವನ್ನು ಆರ್‌ಜೆಡಿ ಉಳಿಸಿಕೊಳ್ಳಲಿದೆಯೇ ಅಥವಾ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಆರೋಪಗಳ ಬಗ್ಗೆ ಆರ್‌ಜೆಡಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.