ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುವ ಭರವಸೆ; ಮೋದಿಗೆ ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು,” ಎಂದು ಮೋದಿ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
ರಷ್ಯಾದಿಂದ ಹೆಚ್ಚಿನ ತೈಲ ಖರೀದಿ ಮಾಡುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದೀಪಾವಳಿ ಹಬ್ಬದ ಅಂಗವಾಗಿ ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದ ನಂತರ ತೈಲ ಖರೀದಿ ಕುರಿತು ಚರ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಂತ ಹಂತವಾಗಿ ರಷ್ಯಾದಿಂದ ತೈಲ ಖರೀದಿ ಕಡಿಮೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಮೋದಿ ಜತೆಗಿನ ದೂರವಾಣಿ ಸಂಭಾಷಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ ಬೆಳಕಿನ ಹಬ್ಬದ ಸಂದರ್ಭದಲ್ಲಿ ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳ ಆಶಯ ವಿಶ್ವಕ್ಕೆ ಬೆಳಕಾಗಲಿ, ಎಲ್ಲಾ ವಿಧದ ಭಯೋತ್ಪಾದನೆ ವಿರುದ್ಧ ಏಕತೆಯಿಂದ ನಿಲ್ಲುವಂತಾಗಲಿ" ಎಂದು ಪ್ರಧಾನಿ ತಿಳಿಸಿರುವುದಾಗಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ವಾಣಿಜ್ಯ ಸುಂಕ ಸೇರಿದಂತೆ ವಿವಿಧ ವಿಚಾರಗಳಲ್ಲಿ ಅಮೆರಿಕಾ–ಭಾರತದ ಸಂಬಂಧ ಕಗ್ಗಂಟಾದ ಬೆನ್ನಲ್ಲೇ ಉಭಯ ನಾಯಕರ ಸಂಭಾಷಣೆ ಕುತೂಹಲ ಕೆರಳಿಸಿದೆ.
ವೈಟ್ ಹೌಸ್‌ನಲ್ಲಿ ದೀಪಾವಳಿ ಆಚರಿಸಿದ ಟ್ರಂಪ್ ಅವರು “ಭಾರತವು ರಷ್ಯಾದಿಂದ ಹೆಚ್ಚು ತೈಲ ಖರೀದಿಸುವುದಿಲ್ಲ ಎಂದು ಮೋದಿ ಅವರು ಮಾತು ಕೊಟ್ಟಿದ್ದಾರೆ. ಇಂದು ಮೋದಿ ಅವರ ಜತೆ ಮಾತನಾಡಿದೆ. ವಾಣಿಜ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಅವರೊಂದಿಗೆ ನಮ್ಮ ಉತ್ತಮ ಸಂಬಂಧ ಇದೆ. ಅವರು ರಷ್ಯಾದಿಂದ ಹೆಚ್ಚು ತೈಲ ಖರೀದಿಸುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಶೀಘ್ರದಲ್ಲೇ ಮುಗಿಯಬೇಕೆಂದು ಬಯಸಿದ್ದಾರೆ" ಎಂದು ಟ್ರಂಪ್ ಹೇಳಿದ್ದಾರೆ.