ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಭಾರತದ ಮೇಲೆ ಅಧಿಕ ಸುಂಕ; ಶ್ವೇತಭವನ
ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿ ಲೀವಿಟ್ ಮಂಗಳವಾರ ಹೇಳಿಕೊಂಡಿದ್ದಾರೆ.;
ಡೊನಾಲ್ಡ್ ಟ್ರಂಪ್
ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಅಧಿಕ ಸುಂಕ ಹೇರಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಮಂಗಳವಾರ ಹೇಳಿದ್ದಾರೆ.
"ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಸಾರ್ವಜನಿಕವಾಗಿ ಹೆಚ್ಚು ಒತ್ತಡ ಬಂದಿತ್ತು. ಆದರೆ, ಭಾರತವು ರಷ್ಯಾದಿಂದ ಹೆಚ್ಚು ತೈಲ ಖರೀದಿಸುವ ಮೂಲಕ ನೆರವಾಗುತ್ತಿತ್ತು. ಯುದ್ಧ ನಿಲ್ಲಿಸಬೇಕಾದರೆ ರಷ್ಯಾದಿಂದ ತೈಲ ಖರೀದಿ ತಡೆಯಬೇಕಾಗಿತ್ತು. ಈ ಬಗ್ಗೆ ಸೂಚನೆ ನೀಡಿದರೂ ಭಾರತ ಕೇಳದ ಹಿನ್ನೆಲೆಯಲ್ಲಿ ಭಾರತದ ಮೇಲಿನ ಅಧಿಕ ಸುಂಕ ಹಾಗೂ ಇತರೆ ನಿರ್ಬಂಧಗಳನ್ನು ಹೇರಬೇಕಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷ ಕೊನೆಗೊಳಿಸಿದ್ದಾರೆ. ನಮ್ಮ ಮಿತ್ರರಾಷ್ಟ್ರಗಳು ಪ್ರಪಂಚದಾದ್ಯಂತ ನಮ್ಮ ವಿರೋಧಿಗಳಿಂದ ಆ ಗೌರವ ಪಡೆಯಲು ಅಮೆರಿಕ ತನ್ನ ಶಕ್ತಿ ಬಳಸುತ್ತಿದೆ ಎಂದು ಲೀವಿಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಏಳು ಜಾಗತಿಕ ಸಂಘರ್ಷ ಅಂತ್ಯ
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಮಾತ್ರವಲ್ಲದೆ ಪ್ರಪಂಚದಾದ್ಯಂತ ನಡೆಯುತ್ತಿರುವ ಏಳು ಜಾಗತಿಕ ಸಂಘರ್ಷಗಳಿಗೆ ಅಮೆರಿಕ ಅಂತ್ಯ ಹಾಡಲಿದೆ ಎಂದು ಲೀವಿಟ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಇದನ್ನು ನೋಡಿದ್ದೇವೆ. ನಮ್ಮಲ್ಲಿ ಶಕ್ತಿ ಮತ್ತು ನಿಯಂತ್ರಣದ ಮೇಲೆ ನಂಬಿಕೆಯಿಲ್ಲದ ಅಧ್ಯಕ್ಷರು ಇದ್ದಿದ್ದರೆ ಪರಮಾಣು ಯುದ್ಧಕ್ಕೆ ಕಾರಣವಾಗಬಹುದಿತ್ತು ಎಂದು ಲೀವಿಟ್ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಟ್ರಂಪ್ ಅವರು 'ವ್ಯಾಪಾರ ಒಪ್ಪಂದʼ ವನ್ನು ದಾಳವಾಗಿ ಬಳಸಿದರು. ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ನಂತರ ಭಾರತ ಮತ್ತು ಪಾಕಿಸ್ತಾನ ತಕ್ಷಣವೇ ಕದನವಿರಾಮಕ್ಕೆ ಒಪ್ಪಿಕೊಂಡವು ಎಂದು ಲೀವಿಟ್ ಪುನರುಚ್ಚರಿಸಿದ್ದಾರೆ.
ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಟ್ಟು ಶೇ. 50 ರಷ್ಟು ಸುಂಕ ವಿಧಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತವು, "ಇದು ನ್ಯಾಯಸಮ್ಮತವಲ್ಲ, ಅಸಮಂಜಸ" ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.