ಇಂಡಿಯಾ ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾ.ರೆಡ್ಡಿಗೆ ಬೆಂಬಲ: ಇಕ್ಕಟ್ಟಿನಲ್ಲಿ ತೆಲುಗು ಪಕ್ಷಗಳು
ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಹಾಗೂ ಸರ್ಕಾರಗಳ ನಿಷ್ಠುರ ವಿಮರ್ಶಕರಾದ ಸುದರ್ಶನ್ ರೆಡ್ಡಿ ಅವರನ್ನು ಇಂಡಿಯಾ ಒಕ್ಕೂಟ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿಕೊಂಡಿರುವುದರಿಂದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪ್ರಾದೇಶಿಕ ಪಕ್ಷಗಳು ಉಭಯ ಸಂಕಟದಲ್ಲಿ ಸಿಲುಕಿವೆ;
ತೆಲಂಗಾಣ ಮೂಲದವರಾದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ತಮ್ಮ ಅಭ್ಯರ್ಥಿಯನ್ನಾಗಿ ವಿರೋಧ ಪಕ್ಷಗಳ ಒಕ್ಕೂಟವಾದ INDIA ಹೆಸರಿಸಿದೆ. ಇದು ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಾದೇಶಿಕ ಪಕ್ಷಗಳಿಗೆ ರಾಜಕೀಯವಾಗಿ ಸವಾಲಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುವ ಅನೇಕ ಸರ್ಕಾರಿ ನಿರ್ಧಾರಗಳ ನಿಷ್ಠುರ ವಿಮರ್ಶಕರಾಗಿರುವ ನ್ಯಾಯಮೂರ್ತಿ ರೆಡ್ಡಿ ಅವರು, ಸಂವಿಧಾನದ ಒಕ್ಕೂಟ ತತ್ವಗಳ ಪ್ರಬಲ ಪ್ರತಿಪಾದಕರೆಂಬ ಜನಪ್ರಿಯತೆಯನ್ನೂ ಗಳಿಸಿದ್ದಾರೆ.
ರೆಡ್ಡಿ ಅವರು ದೀನದಲಿತರು ಮತ್ತು ಮಹಿಳೆಯರ ಹಕ್ಕುಗಳ ಸಕ್ರಿಯ ಮತ್ತು ಧ್ವನಿಪೂರ್ಣ ಬೆಂಬಲಿಗರು ಕೂಡ ಹೌದು. ಅವರ ಕಾಲೇಜು ದಿನಗಳಲ್ಲಿ ಮತ್ತು ವಕೀಲರಾಗಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾಗ, ನ್ಯಾಯಮೂರ್ತಿ ರೆಡ್ಡಿ ಸಮಾಜವಾದಿ ಮತ್ತು ರಾಮ್ ಮನೋಹರ್ ಲೋಹಿಯಾ ಅವರ ಅನುಯಾಯಿ ಕೂಡ ಆಗಿದ್ದರು.
ಅವರು ಸಾಮಾಜಿಕ ನ್ಯಾಯ ಮತ್ತು ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಚಳುವಳಿಗಳಲ್ಲಿಯೂ ಕೂಡ ನಿಕಟವಾಗಿ ತೊಡಗಿಸಿಕೊಂಡಿದ್ದರು.
ಸಾಲ್ವಾ ಜುದಾಮ್ ಕುರಿತು ನ್ಯಾ.ರೆಡ್ಡಿ ಅವರು ನೀಡಿದ ತೀರ್ಪನ್ನು ಐತಿಹಾಸಿಕ ಎಂದು ಪರಿಗಣಿಸಲಾಗಿದೆ. ಇನ್ನೊಬ್ಬರು ನ್ಯಾಯಮೂರ್ತಿ ಎಸ್.ಎಸ್.ನಿಜ್ಜಾರ್ ಅವರೊಂದಿಗೆ 2011ರಲ್ಲಿ ಈ ತೀರ್ಪನ್ನು ನೀಡಿದ ಅವರು, ಛತ್ತೀಸಗಢ ಸರ್ಕಾರ ಜಾರಿಗೆ ತಂದ ಮಾವೋ ನಿಗ್ರಹ ವ್ಯವಸ್ಥೆಯನ್ನು ಮುಲಾಜಿಲ್ಲದೆ ಬಹಿಷ್ಕರಿಸಿದ್ದರು. ಬಂಡುಕೋರರನ್ನು ಸದೆಬಡಿಯುವ ಕಾರ್ಯಾಚರಣೆಗಳಲ್ಲಿ ಯಾವುದೇ ತರಬೇತಿಯನ್ನೂ ಪಡೆಯದ ಗ್ರಾಮಸ್ಥರು ಮತ್ತು ಶರಣಾಗತರಾಗಿರುವ ಮಾವೋವಾದಿಗಳನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ಬಳಸುವ ಕ್ರಮವನ್ನು ಸಂವಿಧಾನಬಾಹಿರ ಎಂದು ತೀರ್ಪು ನೀಡಿದ್ದರು.
ನ್ಯಾಯಪೀಠದಿಂದ 2013ರಲ್ಲಿ ನಿವೃತ್ತರಾಗಿದ್ದರೂ, ನ್ಯಾಯಮೂರ್ತಿ ರೆಡ್ಡಿ ಅವರು ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬಂದಿದ್ದಾರೆ. ತೆಲಂಗಾಣ ಚಳುವಳಿಯ ನಾಯಕರಲ್ಲಿ ಒಬ್ಬರಾದ ಪ್ರೊ. ಎಂ. ಕೋದಂಡರಾಮ್ ಅವರ ಪ್ರಕಾರ, ಅವರು 2014ರ ಆಂಧ್ರ ಪ್ರದೇಶ ರಾಜ್ಯ ಪುನರ್-ಸಂಘಟನೆ ಕಾಯ್ದೆ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಹಾಗಾದರೆ ಅವರ ನಾಮನಿರ್ದೇಶನ ತೆಲುಗು ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆಯೇ?
ಪ್ರಾದೇಶಿಕ ಪಕ್ಷಗಳ ಲೆಕ್ಕಾಚಾರ
ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ರೆಡ್ಡಿ ಅವರ ನಾಮನಿರ್ದೇಶನವು ತೆಲುಗು ಮಾತನಾಡುವ ರಾಜ್ಯಗಳಲ್ಲಿನ ರಾಜಕೀಯ ಲೆಕ್ಕಾಚಾರವನ್ನು ಬದಲಿಸುತ್ತದೆಯೇ? ಈ ಪ್ರಶ್ನೆಯು ಆ ರಾಜ್ಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಬಹುದು, ಏಕೆಂದರೆ ಅಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರಮ್ಯ.
ತೆಲಂಗಾಣದ ಭಾರತ ರಾಷ್ಟ್ರ ಸಮಿತಿ (BRS)ಯ ಹಿನ್ನೆಲೆ ಮತ್ತು ರಾಜಕೀಯ ಮೌಲ್ಯಗಳನ್ನು ಗಮನಿಸಿದರೆ, ನ್ಯಾಯಮೂರ್ತಿ ರೆಡ್ಡಿಯವರ ಅಭ್ಯರ್ಥಿತನವನ್ನು ಅವರು ಬೆಂಬಲಿಸುವ ನಿರೀಕ್ಷೆಯಿದೆ. ಆದರೆ ಇದು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದು ಪ್ರಶ್ನೆ.
ಬಿ.ಆರ್.ಎಸ್ ಪಕ್ಷದ ಮೂಲಗಳ ಪ್ರಕಾರ, ನ್ಯಾಯಮೂರ್ತಿ ರೆಡ್ಡಿ ಅವರು INDIA ಒಕ್ಕೂಟದ ಅಭ್ಯರ್ಥಿಯಾಗಿರುವ ಕಾರಣ ಅವರನ್ನು ಬೆಂಬಲಿಸುವುದು ಪಕ್ಷಕ್ಕೆ ಕಷ್ಟವಾಗಬಹುದು. ಯಾಕೆಂದರೆ, ಇದು ಪಕ್ಷ ಕಾಂಗ್ರೆಸ್ನ ಕಡೆಗೆ ವಾಲುತ್ತಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಅದೇ ಹೊತ್ತಿಗೆ ತೆಲಂಗಾಣದ ಜನರ ಹೃದಯಕ್ಕೆ ಹತ್ತಿರವಾಗಿರುವ ವ್ಯಕ್ತಿಯನ್ನು ಪಕ್ಷ ನಿರ್ಲಕ್ಷಿಸಲೂ ಸಾಧ್ಯವಿಲ್ಲ.
ಹಾಗಂತ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ಬೆಂಬಲಕ್ಕೆ ನಿಂತರೆ, ಭಾರತೀಯ ಜನತಾ ಪಕ್ಷದ ಜೊತೆ ವಿಲೀನಗೊಳ್ಳಲು ಬಿ.ಆರ್.ಎಸ್ ಯೋಜಿಸುತ್ತಿದೆ ಎಂಬ ಮಾತುಗಳು ಮತ್ತೆ ಹುಟ್ಟಿಕೊಳ್ಳಲು ದಾರಿಮಾಡಿಕೊಟ್ಟಂತಾಗುತ್ತದೆ.
ಈ ಕುರಿತು ಬಿ.ಆರ್.ಎಸ್ ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ನ್ಯಾಯಮೂರ್ತಿ ರೆಡ್ಡಿಯವರ ಅಭ್ಯರ್ಥಿತನದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದು ಪಕ್ಷವು ನಿರ್ಧರಿಸಬೇಕಾದ ವಿಷಯ ಎಂದು ಹೇಳಿ ನುಣುಚಿಕೊಂಡರು.
ಲೋಕಸಭೆಯಲ್ಲಿ ಬಿ.ಆರ್.ಎಸ್ ಯಾವುದೇ ಪ್ರಾತಿನಿಧ್ಯವನ್ನು ಹೊಂದಿಲ್ಲದಿದ್ದರೂ, ರಾಜ್ಯಸಭೆಯಲ್ಲಿ ಅದರ ನಾಲ್ಕು ಮಂದಿ ಸದಸ್ಯರಿದ್ದಾರೆ.
ಆಂಧ್ರ ಪ್ರದೇಶದ ಸ್ಥಿತಿ
ಆಂಧ್ರಪ್ರದೇಶದಲ್ಲಿ ಪರಿಸ್ಥಿತಿ ಭಿನ್ನ. ಇಲ್ಲಿರುವ ಮೂರು ಪ್ರಮುಖ ಪಕ್ಷಗಳಲ್ಲಿ, ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನಾ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ತೆಕ್ಕೆಯಲ್ಲಿದೆ. ಆದರೆ ವಿರೋಧ ಪಕ್ಷವಾದ ವೈಎಸ್ಆರ್ ಕಾಂಗ್ರೆಸ್ ರಾಧಾಕೃಷ್ಣನ್ ಅವರನ್ನು ಬೆಂಬಲಿಸುತ್ತಿದೆ.
ಒಂದು ವೇಳೆ ಸಿದ್ಧಾಂತಕ್ಕೆ ಕಟ್ಟುಬಿದ್ದರೆ ಈ ಎಲ್ಲಾ ಪಕ್ಷಗಳು ತೆಲುಗು ಮೂಲದ ಅಭ್ಯರ್ಥಿಯಾಗಿರುವ ನ್ಯಾ. ರೆಡ್ಡಿ ಅವರಿಗೆ ಬೆಂಬಲ ನೀಡಬೇಕು. ಆದರೆ ಇದು ಅಸಂಭವ ಎನಿಸುತ್ತದೆ. ಯಾಕೆಂದರೆ ಇಲ್ಲಿನ ರಾಜಕೀಯ ರೇಖೆಗಳು ಸ್ಪಷ್ಟವಾಗಿವೆ. ಆ ಕಾರಣಕ್ಕೆ ನ್ಯಾಯಮೂರ್ತಿ ರೆಡ್ಡಿ ಅವರು ಇಲ್ಲಿನ ಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಎನ್ನುವುದು ಕೂಡ ಸ್ಪಷ್ಟ.
ಆಂಧ್ರಪ್ರದೇಶದ ಹಿರಿಯ ನ್ಯಾಯವಾದಿ ಸಿ. ನಾಗೇಂದ್ರನಾಥ್ ಅವರು ಪ್ರತಿಕ್ರಿಯೆ ನೀಡಿ, ರೆಡ್ಡಿಯವರ ಅಭ್ಯರ್ಥಿತನವು ತೆಲುಗರ ಹೆಮ್ಮೆಯ ಪ್ರತೀಕ ಎಂದು ಹೇಳುವ ಮೂಲಕ ತೆಲುಗು ರಾಜ್ಯಗಳಲ್ಲಿ, ಕನಿಷ್ಠ ಆಂಧ್ರದಲ್ಲಿ ರಾಜಕೀಯ ಲೆಕ್ಕಾಚಾರವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
"ಆಂಧ್ರಪ್ರದೇಶದಲ್ಲಿನ ರಾಜಕೀಯ ಪಕ್ಷಗಳ ನಿಲುವಿನಲ್ಲಿ ಸ್ಪಷ್ಟವಾದ ಗೆರೆ ಎಳೆಯಲಾಗಿದೆ. ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಟಿಡಿಪಿ ಮತ್ತು ಜನಸೇನಾ, ಎನ್ಡಿಎಯ ಪಾಲುದಾರರಾಗಿವೆ. ತೆಲುಗು ಹೆಮ್ಮೆಯ ಹೆಸರಿನಲ್ಲಿ ಈ ಬಾಂಧವ್ಯವನ್ನು ಮುರಿಯುವ ಸ್ಥಿತಿಯಲ್ಲಿ ಅವುಗಳಿಲ್ಲ. ಅದೇ ರೀತಿ, ವೈಎಸ್ಆರ್ ಕಾಂಗ್ರೆಸ್ ಕೂಡಾ ಕೇಂದ್ರದ ಏಜೆನ್ಸಿಗಳು ತಮ್ಮ ನಾಯಕರ ವಿರುದ್ಧ ನಡೆಸುತ್ತಿರುವ ತನಿಖೆಗಳ ಹಿನ್ನೆಲೆಯಲ್ಲಿ ಕೇಂದ್ರದಲ್ಲಿರುವ ಮೋದಿ ಸರ್ಕಾರವನ್ನು ವಿರೋಧಿಸುವ ಧೈರ್ಯ ಮಾಡಲಾರವು," ಎಂದು ಅವರು 'ದ ಫೆಡರಲ್' ತಿಳಿಸಿದರು.
ಬೆಂಬಲ ಕಷ್ಟ
ನಾಗೇಂದ್ರನಾಥ್ ಅವರ ಪ್ರಕಾರ, ನ್ಯಾಯಮೂರ್ತಿ ರೆಡ್ಡಿ ಅವರ ನಿಷ್ಕಳಂಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಮನಿಸಿದರೆ, ಉಪರಾಷ್ಟ್ರಪತಿ ಹುದ್ದೆಗೆ ಅವರು ಸೂಕ್ತ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈಗಿನ ಸಂದರ್ಭದಲ್ಲಿ ಅವರ ಹೆಸರು ತೆಲುಗರ ಹೆಮ್ಮೆ ಎಂಬ ಕಾರಣಕ್ಕೆ ಬೆಂಬಲ ದೊರೆಯುವ ಸಾಧ್ಯತೆ ವಿರಳ.
ಆದಾಗ್ಯೂ, ನ್ಯಾಯಮೂರ್ತಿ ರೆಡ್ಡಿಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ದಿಶೆಯಲ್ಲಿ ಒಂದು ಮಹತ್ತರ ಹೆಜ್ಜೆಯಾಗಿದೆ ಎಂದು ಪ್ರೊಫೆಸರ್ ಮದಭಿಷಿ ಶ್ರೀಧರ್ ಅಭಿಪ್ರಾಯಪಟ್ಟರು.
"ತಮ್ಮ ತೀರ್ಪುಗಳ ಮೂಲಕ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ಜನರ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ ಸರ್ಕಾರಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು. ಇದು ಭಾರತೀಯ ನ್ಯಾಯಾಂಗದಲ್ಲಿ ನ್ಯಾಯ, ಮಾನವ ಹಕ್ಕುಗಳು, ಸಾಂವಿಧಾನಿಕ ಸಿದ್ಧಾಂತಗಳು ಮತ್ತು “ನ್ಯಾಯಾಂಗ ಮಾನವೀಯತೆ” (ನ್ಯಾಯಾಂಗದಲ್ಲಿ ಮಾನವೀಯ ಮೌಲ್ಯಗಳ ಪ್ರತಿಬಿಂಬ)ಯನ್ನು ರಕ್ಷಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ," ಎಂದು ಪ್ರೊ. ಶ್ರೀಧರ್ ಹೇಳಿದರು.
ರಂಗಾ ರೆಡ್ಡಿ ಜಿಲ್ಲೆಯ ಅಕುಲಾ ಮೈಲಾರಂ ಗ್ರಾಮದಲ್ಲಿ 1946ರ ಜುಲೈನಲ್ಲಿ ಜನಿಸಿದ ಸುದರ್ಶನ ರೆಡ್ಡಿಯವರು 1971ರ ಡಿಸೆಂಬರ್ 27ರಂದು ಹೈದರಾಬಾದ್ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. 1995ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಅವರು ಅಲ್ಲೇ ವಕೀಲಿ ವೃತ್ತಿ ನಡೆಸಿದರು. 1990ರಲ್ಲಿ ಆರು ತಿಂಗಳ ಕಾಲ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು.
ಜುಲೈನಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವು ನಡೆಸಿದ ಜಾತಿ ಸಮೀಕ್ಷೆಯನ್ನು ಪರಿಶೀಲಿಸಲು ನೇಮಿಸಲಾದ 11 ಸದಸ್ಯರ ತಜ್ಞರ ಸಮಿತಿಯ ಮುಖ್ಯಸ್ಥರಾಗಿಯೂ ನ್ಯಾಯಮೂರ್ತಿ ರೆಡ್ಡಿ ಸೇವೆ ಸಲ್ಲಿಸಿದ್ದಾರೆ.