ಸತತ 30 ದಿನ ಬಂಧನವಾದರೆ ಪಿಎಂ, ಸಿಎಂ ಪದಚ್ಯುತಗೊಳಿಸುವ ಮಸೂದೆ: ಲೋಕಸಭೆಯಲ್ಲಿ ಮಂಡಿಸಿದ ಅಮಿತ್ ಶಾ
ಸಂವಿಧಾನ (130 ನೇ ತಿದ್ದುಪಡಿ) ಮಸೂದೆ 2025 ರ ಪ್ರಕಾರ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಥವಾ ಮಂತ್ರಿಯನ್ನು ಬಂಧಿಸಿ 30 ದಿನಗಳ ಕಾಲ ಜೈಲಿನಲ್ಲಿಟ್ಟರೆ, ಅವರನ್ನು 31 ನೇ ದಿನದಂದು ಅಧಿಕಾರದಿಂದ ಕೆಳಗಿಳಿಸಬೇಕಾಗುತ್ತದೆ.;
ಅಮಿತ್ ಷಾ
ಗಂಭೀರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಧಾನಿ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿದಂತೆ ಚುನಾಯಿತ ಪ್ರತಿನಿಧಿಗಳನ್ನು ಸತತ 30 ದಿನಗಳವರೆಗೆ ಬಂಧನದಲ್ಲಿದ್ದರೆ ಅವರನ್ನು ಅವರನ್ನು ಪದಚ್ಯುತಿಗೊಳಿಸುವ ಪ್ರಸ್ತಾಪವನ್ನು ಹೊಂದಿರುವ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು.
ಸಂವಿಧಾನ (130 ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2025, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2025 ಈ ಮೂರು ಮಸೂದೆಗಳನ್ನು ಮಂಡಿಸಲಾಯಿತು.
ಈ ಮೂರೂ ಮಸೂದೆಗಳನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಕಳುಹಿಸಲಾಗಿದೆ. ಈ ಸಮಿತಿಯಲ್ಲಿ 21 ಲೋಕಸಭಾ ಸಂಸದರನ್ನು ಸ್ಪೀಕರ್ ಮತ್ತು 10 ರಾಜ್ಯಸಭಾ ಸಂಸದರನ್ನು ರಾಜ್ಯಸಭಾ ಉಪಾಧ್ಯಕ್ಷರು ನೇಮಕ ಮಾಡುತ್ತಾರೆ. ಜಂಟಿ ಸಮಿತಿಯು ಸಂಸತ್ತಿನ ಮುಂದಿನ ಅಧಿವೇಶನದ ಮೊದಲ ದಿನದಂದು ತನ್ನ ವರದಿಯನ್ನು ಸಲ್ಲಿಸುತ್ತದೆ.
ಈ ಮಸೂದೆಯಲ್ಲಿ ಏನಿದೆ?
ಸಂವಿಧಾನ (130 ನೇ ತಿದ್ದುಪಡಿ) ಮಸೂದೆ 2025 ರ ಪ್ರಕಾರ, ಯಾವುದೇ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಥವಾ ಮಂತ್ರಿಯನ್ನು ಬಂಧಿಸಿ 30 ದಿನಗಳ ಕಾಲ ಜೈಲಿನಲ್ಲಿಟ್ಟರೆ, ಅವರನ್ನು 31 ನೇ ದಿನದಂದು ಅಧಿಕಾರದಿಂದ ತೆಗೆದುಹಾಕಲಾಗುತ್ತದೆ. ಈ ಕಾನೂನು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಯನ್ನು ಹೊಂದಿರುವ ಆರೋಪಗಳಿಗೆ ಅನ್ವಯಿಸುತ್ತದೆ. ಇಲ್ಲಿ ಅಪರಾಧ ಸಾಬೀತಾಗುವುದು ಬೇಡ, ಆರೋಪ ಮಾತ್ರಕ್ಕೆ ಪದಚ್ಯುತಿಗೊಳಿಸಲಾಗುವುದು. ಇದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ವಿಪಕ್ಷಗಳು ವಾದಿಸುತ್ತಿವೆ.
ಓವೈಸಿ ಆರೋಪ
ಲೋಕಸಭೆಯಲ್ಲಿ ಭಾರತ ಮೈತ್ರಿಕೂಟದ ಸಂಸದರ ಪ್ರತಿಭಟನೆಯ ನಡುವೆ, ಎಐಎಂಐಎಂ (AIMIM) ಸಂಸದ ಅಸಾದುದ್ದೀನ್ ಓವೈಸಿ ಮಧ್ಯಪ್ರವೇಶಿಸಿ, ಮೂರು ಮಸೂದೆಗಳ ಮಂಡನೆಯನ್ನು ವಿರೋಧಿಸಿ, ಅವುಗಳನ್ನು "ಅಸಂವಿಧಾನಿಕ" ಮತ್ತು ದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಮಸೂದೆಗಳು ಗೆಸ್ಟಪೋ ಮಾದರಿ (ರಹಸ್ಯ ಪೊಲೀಸ್ ದಳ)ಯ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿವೆ ಎಂದು ಓವೈಸಿ ಆರೋಪಿಸಿದರು.
'ಮಸೂದೆಗಳು ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತವೆ'
ಈ ಮಸೂದೆಗಳನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ವಿರೋಧಿಸಿದ್ದಾರೆ. ಈ ಮಸೂದೆಗಳು ಸಂವಿಧಾನದ 21 ನೇ ವಿಧಿಯ ನ್ಯಾಯ ಪ್ರಕ್ರಿಯೆಯ ಷರತ್ತನ್ನು ಉಲ್ಲಂಘಿಸುತ್ತವೆ ಮತ್ತು 'ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ವ್ಯಕ್ತಿಯನ್ನು ನಿರಪರಾಧಿ' ಎಂದು ಪರಿಗಣಿಸುವ ನ್ಯಾಯಶಾಸ್ತ್ರದ ಮೂಲಭೂತ ತತ್ವವನ್ನು ತಲೆಯ ಮೇಲೆ ಹಾಕುತ್ತವೆ ಎಂದು ಅವರು ತಿಳಿಸಿದರು.
ಈ ಮಸೂದೆಗಳು ರಾಜಕೀಯ ದುರುಪಯೋಗ ಅಥವಾ ತನಿಖಾ ಸಂಸ್ಥೆಗಳ ಪ್ರತೀಕಾರದ ಬಳಕೆಗೆ ಬಾಗಿಲು ತೆರೆದಂತಿದೆ. ಎಲ್ಲಾ ಪ್ರಜಾಪ್ರಭುತ್ವದ ಸುರಕ್ಷತೆಗಳನ್ನು ಕಿಟಕಿಯಿಂದ ಹೊರಗೆಸೆಯುತ್ತವೆ ಎಂದು ಅವರು ಆರೋಪಿಸಿದರು. ಅಮಿತ್ ಶಾ ಅವರು ಮೂರು ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ತಿವಾರಿ ಒತ್ತಾಯಿಸಿದರು.
ಆರೋಪಗಳನ್ನು ನಿರಾಕರಿಸಿದ ಅಮಿತ್ ಶಾ
ಆರ್‌ಎಸ್‌ಪಿ ಸಂಸದ ಎನ್‌ಕೆ ಪ್ರೇಮಚಂದ್ರನ್ ಕೂಡ ಮಸೂದೆಗಳನ್ನು ಮಂಡಿಸುವುದನ್ನು ವಿರೋಧಿಸಿದರು, ಅವುಗಳನ್ನು ತರಾತುರಿಯಲ್ಲಿ ತರಲಾಗಿದೆ ಮತ್ತು ಸಂಸದೀಯ ವ್ಯವಹಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದರು. ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಲು ಯೋಜಿಸುತ್ತಿರುವುದಾಗಿ ಅಮಿತ್ ಶಾ ಉತ್ತರಿಸಿದರು.
ಗುಜರಾತ್ ಗೃಹ ಸಚಿವರಾಗಿದ್ದಾಗ ಬಂಧನಕ್ಕೊಳಗಾದ ನಂತರ ರಾಜೀನಾಮೆ ನೀಡಿದ್ದೀರಾ ಎಂಬ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ರಾಜಕೀಯ ಪ್ರೇರಿತ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ನೈತಿಕ ಉನ್ನತ ಸ್ಥಾನವನ್ನು ಆರಿಸಿಕೊಂಡು ರಾಜೀನಾಮೆ ನೀಡಿದ್ದಾಗಿ ಹೇಳಿದರು.
ಮೂರು ಮಸೂದೆಗಳು ವಿರೋಧ ಪಕ್ಷದ ನೇತೃತ್ವದ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಅಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ವೇಣುಗೋಪಾಲ್ ಆರೋಪಿಸಿದರು.
ಸಮಾಜವಾದಿ ಪಕ್ಷ ಟೀಕೆ
ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಕೂಡ ಮೂರು ಮಸೂದೆಗಳ ಮಂಡನೆಯನ್ನು ವಿರೋಧಿಸಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿಯನ್ನು ಭ್ರಷ್ಟ ಎಂದು ಕರೆದ ಪಕ್ಷದ ವ್ಯಕ್ತಿ, ನೈತಿಕತೆಯ ಬಗ್ಗೆ ಮಾತನಾಡಬಾರದು ಎಂದು ಅವರು ಹೇಳಿದರು.
ಲೋಕಸಭಾ ಸ್ಪೀಕರ್ ಯಾದವ್ ಅವರ ಮಾತನ್ನು ನಿಲ್ಲಿಸಿ, ಮಸೂದೆಗಳನ್ನು ಮಂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಸೂಚಿಸಿದರು. ಮಸೂದೆಗಳನ್ನು ಮಂಡಿಸಿದ ನಂತರ, ಷಾ ಅವರು ಅವುಗಳನ್ನು ಸಂಸತ್ತಿನ ಎರಡೂ ಸದನಗಳ ಜಂಟಿ ಸಮಿತಿಗೆ ಕಳುಹಿಸುವ ಪ್ರಸ್ತಾಪವನ್ನು ಮಂಡಿಸಿದರು.
ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್
ವಿರೋಧ ಪಕ್ಷಗಳ ಗದ್ದಲದಿಂದಾಗಿ ಮುಂದೂಡಲ್ಪಟ್ಟಿದ್ದ ಲೋಕಸಭೆಯ ಕಲಾಪ, ಮಧ್ಯಾಹ್ನ 3 ಗಂಟೆಗೆ ಮತ್ತೆ ಆರಂಭಗೊಂಡಿತು. ಈ ವೇಳೆ, ಸ್ಪೀಕರ್ ಓಂ ಬಿರ್ಲಾ ಅವರು, ನೈತಿಕ ರಾಜಕೀಯಕ್ಕೆ ನಾಂದಿ ಹಾಡುವ ಮಹತ್ವದ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾದಾಗ, ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಭಟನಾ ನಿರತ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ನಂತರ, ಸದನವನ್ನು ಸಂಜೆ 5 ಗಂಟೆಯವರೆಗೆ ಮುಂದೂಡಿದರು.