ದೆಹಲಿ ಗಲಭೆ ಪ್ರಕರಣ: ಶಾರ್ಜೀಲ್ ಇಮಾಮ್‌ಗೆ ಜಾಮೀನು
ನ್ಯಾಯಾಲಯ ಇಮಾಮ್ ಅವರಿಗೆ ಜಾಮೀನು ನೀಡಿದ್ದರೂ, ʻದೆಹಲಿ ಗಲಭೆಗೆ ಪ್ರಚೋದನೆ ನೀಡುವ ದೊಡ್ಡ ಪಿತೂರಿʼ ಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಕಂಬಿ ಹಿಂದೆ ಉಳಿಯುತ್ತಾರೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ದೇಶದ್ರೋಹ ಮತ್ತು ಯುಎಪಿಎ ಅಡಿಯಲ್ಲಿ ಬಂಧಿತರಾಗಿದ್ದ ಜೆಎನ್‌ಯು ವಿದ್ವಾಂಸ ಶರ್ಜೀಲ್ ಇಮಾಮ್ ಅವರಿಗೆ ಶಾಸನಬದ್ಧ ಜಾಮೀನು ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ಪೀಠ ಬುಧವಾರ (ಮೇ 29) ಜಾಮೀನು ನೀಡಿದೆ. ಆದರೆ, ಇಮಾಮ್ ಅವರು ʻದೆಹಲಿ ಗಲಭೆಗೆ ಪ್ರಚೋದನೆ ನೀಡುವ ದೊಡ್ಡ ಪಿತೂರಿʼ ಯಲ್ಲಿ ಪಾಲ್ಗೊಂಡಿದ್ದರಿಂದ, ಕಂಬಿಗಳ ಹಿಂದೆ ಉಳಿಯಲಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಗಲಭೆಯಲ್ಲಿ 53 ಜನ ಮೃತಪಟ್ಟು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇಮಾಮ್, ಉಮರ್ ಖಾಲಿದ್, ಖಾಲಿದ್ ಸೈಫಿ ಮತ್ತು ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇಪ್ಪತ್ತು ಮಂದಿ ಗಲಭೆಯನ್ನು ಪ್ರಚೋದಿಸುವ ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್ ವಿಶೇಷ ದಳ ನಡೆಸುತ್ತಿದೆ.
ಉಮರ್ ಖಾಲಿದ್ ಜಾಮೀನು ತಿರಸ್ಕೃತ: ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ಮೇ 28ರಂದು ತಿರಸ್ಕರಿಸಿದೆ. ಇದು ಖಾಲಿದ್ ಅವರ ಎರಡನೇ ಸಾಮಾನ್ಯ ಜಾಮೀನು ಅರ್ಜಿ. ಅವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅರ್ಜಿ ವಜಾಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್‌ಪೇಯ್, ʻಅರ್ಜಿದಾರರ ಕ್ರಿಮಿನಲ್ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಈಗಾಗಲೇ ಅಕ್ಟೋಬರ್ 18, 2022 ರಂದು ವಜಾಗೊಳಿಸಿದೆ. ಆನಂತರ ಅರ್ಜಿದಾರರು ಸುಪ್ರೀಂ ಕೋರ್ಟ್ ನಿಂದ ಅರ್ಜಿಯನ್ನು ಹಿಂಪಡೆದಿದ್ದಾರೆ. ಈ ನ್ಯಾಯಾಲಯದ ಮಾರ್ಚ್ 24, 2022 ರ ಆದೇಶವು ಅಂತಿಮ ಹಂತವನ್ನು ತಲುಪಿದೆ. ಅರ್ಜಿದಾರರು ಬಯಸಿದಂತೆ ಪ್ರಕರಣದ ಸತ್ಯಗಳನ್ನು ವಿಶ್ಲೇಷಿಸಲು ಮತ್ತು ಅವರು ಪ್ರಾರ್ಥಿಸಿದಂತೆ ಪರಿಹಾರವನ್ನು ಪರಿಗಣಿಸಲು ಸಾಧ್ಯವಿಲ್ಲ,ʼ ಎಂದು ಹೇಳಿದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅಮಿತ್ ಪ್ರಸಾದ್ ಅವರ ಸಲ್ಲಿಕೆಗಳನ್ನು ಗಮನಿಸಿದ ನ್ಯಾಯಾಲಯ, ʻಆರೋಪಗಳನ್ನು ರೂಪಿಸುವಲ್ಲಿ ಮತ್ತು ವಿಚಾರಣೆಯನ್ನು ಪ್ರಾರಂಭಿಸುವಲ್ಲಿ ದೆಹಲಿ ಪೊಲೀಸರಿಂದ ಯಾವುದೇ ವಿಳಂಬವಿಲ್ಲʼ ಎಂದು ಹೇಳಿದೆ.
ಜುಲೈ 2023 ರಲ್ಲಿ ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಏಪ್ರಿಲ್ 5ರಂದು ಶೋಮಾ ಕಾಂತಿ ಸೇನ್ ಅವರಿಗೆ ಜಾಮೀನು ನೀಡಿರುವುದರಿಂದ, ʻಪ್ರಾಥಮಿಕ ಸಾಕ್ಷ್ಯʼ ಕುರಿತು ಸುಪ್ರೀಂ ಕೋರ್ಟ್‌ನ ದೃಷ್ಟಿಕೋನವು ಬದಲಾಗಿದೆ ಎಂಬ ಖಾಲಿದ್ ಅವರ ವಕೀಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.
ಶಾರ್ಜೀಲ್ ಇಮಾಮ್ ಪ್ರಕರಣ: ಒಂದು ವೇಳೆ ಅಪರಾಧ ಸಾಬೀತಾದಲ್ಲಿ ತನಗೆ ನೀಡಬಹುದಾದ ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಶಿಕ್ಷೆಯನ್ನು ಈಗಾಗಲೇ ಅನುಭವಿಸಿದ್ದೇನೆ ಎಂದು ಇಮಾಮ್ ಆದೇಶವನ್ನು ಪ್ರಶ್ನಿಸಿದ್ದರು. ಇಮಾಮ್ ನಾಲ್ಕು ವರ್ಷ ಏಳು ತಿಂಗಳುಗಳಿಂದ ಬಂಧನದಲ್ಲಿದ್ದಾರೆ. ಯುಎಪಿಎ ಕಾಯ್ದೆಯ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆ ಗಳಿಗೆ ಶಿಕ್ಷೆ) ಅಡಿಯಲ್ಲಿಅವರ ಅಪರಾಧಕ್ಕೆ ನೀಡಬಹುದಾದ ಗರಿಷ್ಠ ಶಿಕ್ಷೆ 7 ವರ್ಷ ಎಂದು ಅವರ ವಕೀಲರು ವಾದಿಸಿದರು. ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಆನಂತರ ಯುಎಪಿಎ ಸೆಕ್ಷನ್ 13 ಅನ್ವಯಿಸಲಾಯಿತು. ಅವರು ಜನವರಿ 28, 2020 ರಿಂದ ಸೆರೆಮನೆಯಲ್ಲಿದ್ದಾರೆ.