ಮತ ಕಳವು ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗದ ವೆಬ್ಸೈಟ್ಗಳು ಡೌನ್, ತನಿಖೆಗೆ ಹೆಚ್ಚಿದ ಒತ್ತಡ
ಆಗಸ್ಟ್ 7ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕರೆದು ದೇಶಾದ್ಯಂತ ಮತಗಳವು ನಡೆದಿದೆ ಎಂದು ಆರೋಪಿಸಿದ್ದರು. ಕರ್ನಾಟಕದಲ್ಲಿ ಬರೋಬ್ಬರಿ 1,00,250 ನಕಲಿ ಮತಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದರು.;
ಮಧ್ಯಪ್ರದೇಶ ಚುನಾವಣಾ ಆಯೋಗದ ಜಾಲತಾಣ
2024ರ ಲೋಕಸಭಾ ಚುನಾವಣೆಯಲ್ಲಿ "ದೊಡ್ಡ ಮಟ್ಟದ ಚುನಾವಣಾ ಅಕ್ರಮ" ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಚುನಾವಣಾ ಆಯುಕ್ತರ (CEO) ಅಧಿಕೃತ ವೆಬ್ಸೈಟ್ಗಳಲ್ಲಿ ಮತದಾರರ ಪಟ್ಟಿಗಳು ಏಕಾಏಕಿ ಕಣ್ಮರೆಯಾಗಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿದೆ. ಇದು ಆರೋಪಗಳನ್ನು ಮರೆಮಾಚುವ ಪ್ರಯತ್ನವಿರಬಹುದೇ ಎಂಬ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ಆಗಸ್ಟ್ 7ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕರೆದು ದೇಶಾದ್ಯಂತ ಮತಗಳವು ನಡೆದಿದೆ ಎಂದು ಆರೋಪಿಸಿದ್ದರು. ಕರ್ನಾಟಕದಲ್ಲಿ ಬರೋಬ್ಬರಿ 1,00,250 ನಕಲಿ ಮತಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಮತದಾರರ ಪಟ್ಟಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಸ್ತುತ ಕೇಳಿಬರುತ್ತಿರುವ ಗಂಭೀರ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆಯನ್ನು ಮರುಸ್ಥಾಪಿಸಲು ಸ್ವತಂತ್ರ ವಿಧಿವಿಜ್ಞಾನ ಲೆಕ್ಕಪರಿಶೋಧನೆ (independent forensic audit) ನಡೆಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.
ಘೋಷಣಾ ಪತ್ರಕ್ಕೆ ಸಹಿ ಹಾಕದೇ ಹೋದರೆ ನಂಬಲ್ಲ ಎಂದು ಚುನಾವಣಾ ಆಯೋಗ
ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ "ದೊಡ್ಡ ಮಟ್ಟದ ಅಕ್ರಮಗಳು" ನಡೆದಿವೆ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಚುನಾವಣಾ ಆಯೋಗವು (EC) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ರಾಹುಲ್ ಗಾಂಧಿ ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಕಾನೂನುಬದ್ಧ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು, ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಬೇಕು ಎಂದು ಆಯೋಗವು ಸವಾಲು ಹಾಕಿದೆ.
ಕರ್ನಾಟಕದ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ರಾಹುಲ್ ಗಾಂಧಿ ಅವರು ಅಂಕಿಅಂಶ ಸಹಿತ ಆರೋಪಗಳನ್ನು ಮಾಡಿದ ಮರು ದಿನವೇ ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿದೆ. "ರಾಹುಲ್ ಗಾಂಧಿ ಅವರು ತಮ್ಮ ವಿಶ್ಲೇಷಣೆ ಮತ್ತು ಚುನಾವಣಾ ಆಯೋಗದ ಮೇಲಿನ ಆರೋಪಗಳಲ್ಲಿ ಸತ್ಯಾಂಶವಿದೆ ಎಂದು ನಂಬುವುದಾದರೆ, ಅವರು ಘೋಷಣಾ ಪತ್ರಕ್ಕೆ ಸಹಿ ಹಾಕಲು ಯಾವುದೇ ಸಮಸ್ಯೆ ಇರಬಾರದು" ಎಂದು ಆಯೋಗದ ಮೂಲಗಳು ತಿಳಿಸಿವೆ.
ಚುನಾವಣಾ ನೋಂದಣಿ ನಿಯಮಗಳು, 1960ರ ನಿಯಮ 20(3)(b) ಅಡಿಯಲ್ಲಿ ಈ ಘೋಷಣಾ ಪತ್ರಕ್ಕೆ ಸಹಿ ಹಾಕುವಂತೆ ಆಯೋಗವು ಸೂಚಿಸಿದೆ. ಒಂದು ವೇಳೆ ರಾಹುಲ್ ಗಾಂಧಿ ಅವರು ಸಹಿ ಹಾಕಲು ನಿರಾಕರಿಸಿದರೆ, ಅವರು ತಮ್ಮದೇ ವಿಶ್ಲೇಷಣೆ ಮತ್ತು ಅದರ ಆಧಾರದ ಮೇಲೆ ಮಾಡಿದ "ಅಸಂಬದ್ಧ ಆರೋಪಗಳನ್ನು" ನಂಬುವುದಿಲ್ಲ ಎಂದರ್ಥವಾಗುತ್ತದೆ. ಅಂತಹ ಸಂದರ್ಭದಲ್ಲಿ, ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಆಯೋಗವು ಸ್ಪಷ್ಟಪಡಿಸಿದೆ.