ಎನ್ಇಪಿಗೆ ತಮಿಳುನಾಡು ಸೆಡ್ಡು: ದ್ವಿಭಾಷಾ ಸೂತ್ರದೊಂದಿಗೆ ರಾಜ್ಯದ್ದೇ ಶಿಕ್ಷಣ ನೀತಿ ಜಾರಿಗೊಳಿಸಿದ ಸ್ಟಾಲಿನ್
ತಮಿಳುನಾಡಿನ ಹೊಸ ಶಿಕ್ಷಣ ನೀತಿಯು ಕೇಂದ್ರದ ಎನ್ಇಪಿಯಲ್ಲಿನ ಹಲವು ಪ್ರಮುಖ ಅಂಶಗಳನ್ನು ನೇರವಾಗಿ ತಿರಸ್ಕರಿಸಿದ್ದು. ದ್ವಿಭಾಷಾ ನೀತಿಯನ್ನೇ (ತಮಿಳು ಮತ್ತು ಇಂಗ್ಲಿಷ್) ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.;
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಸೆಡ್ಡು ಹೊಡೆದಿರುವ ತಮಿಳುನಾಡು ಸರ್ಕಾರ, ರಾಜ್ಯದ್ದೇ ಆದ ಪ್ರತ್ಯೇಕ ಶಿಕ್ಷಣ ನೀತಿಯನ್ನು (SEP) ಜಾರಿಗೊಳಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಈ ಹೊಸ ನೀತಿಯನ್ನು ಅನಾವರಣಗೊಳಿಸಿದ್ದು, ಇದು ಕೇಂದ್ರ ಮತ್ತು ರಾಜ್ಯದ ನಡುವಿನ ಶೈಕ್ಷಣಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಂಡಿದೆ.
ತಮಿಳುನಾಡಿನ ಹೊಸ ಶಿಕ್ಷಣ ನೀತಿಯು ಕೇಂದ್ರದ ಎನ್ಇಪಿಯಲ್ಲಿನ ಹಲವು ಪ್ರಮುಖ ಅಂಶಗಳನ್ನು ನೇರವಾಗಿ ತಿರಸ್ಕರಿಸುತ್ತದೆ. ಮುಖ್ಯವಾಗಿ, ತ್ರಿಭಾಷಾ ಸೂತ್ರವನ್ನು ವಿರೋಧಿಸಿರುವ ಸ್ಟಾಲಿನ್ ಸರ್ಕಾರ, ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನೇ (ತಮಿಳು ಮತ್ತು ಇಂಗ್ಲಿಷ್) ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ. ಇದಲ್ಲದೆ, 3, 5 ಮತ್ತು 8ನೇ ತರಗತಿಗಳಿಗೆ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವ ಪ್ರಸ್ತಾಪವನ್ನು ಕೈಬಿಟ್ಟಿದೆ.
ಹೊಸ ನೀತಿಯ ಪ್ರಕಾರ, ಕಲಾ ಮತ್ತು ವಿಜ್ಞಾನ ಪದವಿ ಕೋರ್ಸುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಬದಲು 11 ಮತ್ತು 12ನೇ ತರಗತಿಯ ಅಂಕಗಳನ್ನು ಒಟ್ಟುಗೂಡಿಸಿ ಪ್ರವೇಶ ನೀಡಲು ಶಿಫಾರಸು ಮಾಡಲಾಗಿದೆ. ಶಿಕ್ಷಣವನ್ನು ಮತ್ತೆ ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಸ್ಥಳಾಂತರಿಸಬೇಕು ಎಂದು ಸಹ ಸಮಿತಿ ಬಲವಾಗಿ ಪ್ರತಿಪಾದಿಸಿದೆ.
ಎನ್ಇಪಿಯನ್ನು "ಪ್ರಗತಿ-ವಿರೋಧಿ" ಮತ್ತು "ಹಿಂದಿ ಹೇರಿಕೆಯ ಪ್ರಯತ್ನ" ಎಂದು ಟೀಕಿಸಿರುವ ಡಿಎಂಕೆ ಸರ್ಕಾರ, ಈ ನೀತಿಯನ್ನು ತಿರಸ್ಕರಿಸಿದ ಕಾರಣಕ್ಕೆ ಕೇಂದ್ರ ಸರ್ಕಾರವು 'ಸಮಗ್ರ ಶಿಕ್ಷಾ' ಯೋಜನೆಯಡಿ ನೀಡಬೇಕಾಗಿದ್ದ 2,152 ಕೋಟಿ ರೂಪಾಯಿ ಅನುದಾನವನ್ನು ತಡೆಹಿಡಿದಿದೆ ಎಂದು ಆರೋಪಿಸಿದೆ.
ಈ ಕುರಿತು ಮಾತನಾಡಿದ ಸಚಿವ ಉದಯನಿಧಿ ಸ್ಟಾಲಿನ್, "ಕೇಂದ್ರವು 1,000 ಕೋಟಿ ರೂಪಾಯಿ ಕೊಟ್ಟರೂ ಸರಿ, ತಮಿಳುನಾಡು ಯಾವುದೇ ಕಾರಣಕ್ಕೂ ಎನ್ಇಪಿಯನ್ನು ಜಾರಿಗೊಳಿಸುವುದಿಲ್ಲ. ಯಾವುದೇ ರೀತಿಯ ಹೇರಿಕೆಯನ್ನು ತಮಿಳುನಾಡು ಸಹಿಸುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.