ಸುಂಕದ ವಿವಾದ ಇತ್ಯರ್ಥವಾಗದ ಹೊರತು ಭಾರತದೊಂದಿಗೆ ವ್ಯಾಪಾರ ಮಾತುಕತೆ ಇಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್

ಸುಂಕ ವಿವಾದ ಪರಿಹರಿಸುವವರೆಗೆ ಭಾರತದ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಓವಲ್ ಕಚೇರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.;

Update: 2025-08-08 07:02 GMT

ಡೊನಾಲ್ಡ್‌ ಟ್ರಂಪ್‌ 

ಸುಂಕ ವಿವಾದ ಬಗೆಹರಿಯುವವರೆಗೆ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆ ಇರುವುದಿಲ್ಲ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ವ್ಯಾಪಾರ ಮಾತುಕತೆಗಳ ಪುನರಾರಂಭದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ಸುಂಕ ವಿವಾದ ಪರಿಹರಿಸುವವರೆಗೆ ಮಾತುಕತೆಗಳು ನಡೆಯುವುದಿಲ್ಲ ಎಂದು ಓವಲ್ ಕಚೇರಿಯಲ್ಲಿ ಹೇಳಿದ್ದಾರೆ. 

ಹೆಚ್ಚುತ್ತಿರುವ ಸುಂಕ ಸಮರ

ಬುಧವಾರ ಶ್ವೇತಭವನವು ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದು,ಈ ಆದೇಶದ ಪ್ರಕಾರ ಭಾರತದ ಕೆಲವು ಸರಕುಗಳ ಮೇಲೆ ವಿಧಿಸಲಾಗುತ್ತಿದ್ದ ಶೇ 25ರಷ್ಟು ಸುಂಕದ ಜತೆಗೆ ಹೆಚ್ಚುವರಿ ಶೇ 25 ರಷ್ಟು ಹೆಚ್ಚಿಸಲಾಗಿದೆ. ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಲಾಗಿದೆ. ಈ ಆದೇಶವು ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ರಷ್ಯಾದಿಂದ ನಿರಂತರವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದೆ. ಭಾರತದ ಈ ತೈಲ ಆಮದುಗಳು ನೇರವಾಗಿಯೇ ಆಗಿರಲಿ ಅಥವಾ ಮಧ್ಯವರ್ತಿಗಳ ಮೂಲಕವಾಗಿರಲಿ, ಇದು ಅಮೆರಿಕಕ್ಕೆ ಅಸಾಧಾರಣ ಮತ್ತು ಅಸಾಮಾನ್ಯ ಬೆದರಿಕೆಯಾಗಿದೆ. ಹಾಗಾಗಿ ತಕ್ಷಣವೇ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಆದೇಶದಲ್ಲಿ ಹೇಳಲಾಗಿದೆ.

ಆಗಸ್ಟ್ 7 ರಂದು ಅಮೆರಿಕವು ಆರಂಭಿಕ ಶೇ25 ಸುಂಕ ಜಾರಿಗೆ ತಂದಿದ್ದು, ಹೆಚ್ಚುವರಿ ಸುಂಕವು 21 ದಿನಗಳಲ್ಲಿ ಭಾರತದಿಂದ ಬರುವ ಎಲ್ಲಾ ಸರಕುಗಳ ಮೇಲೆ ಪರಿಣಾಮ ಬೀರಲಿದೆ. ಈ ನಿಯಮವು ಈಗಾಗಲೇ ಸಾಗಣೆಯಲ್ಲಿರುವ ಮತ್ತು ಕೆಲವು ನಿರ್ದಿಷ್ಟ ವರ್ಗದ ಸರಕುಗಳಿಗೆ ವಿನಾಯಿತಿ ನೀಡುತ್ತದೆ.

ಭಾರತ ತನ್ನ ನಿಲುವನ್ನು ಉಳಿಸಿಕೊಂಡಿದೆ

ಈ ಮಧ್ಯೆ ಗುರುವಾರ ನವದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಆರ್ಥಿಕ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ. ನಾನು ಅದಕ್ಕೆ ಸಿದ್ಧನಿದ್ದೇನೆ. ಭಾರತ ಅದಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. 

ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ವಲಯಗಳನ್ನು ಜಾಗತಿಕ ಸ್ಪರ್ಧೆಗೆ ತೆರೆಯುವುದನ್ನು ನವದೆಹಲಿ ಬಹಳ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಲಕ್ಷಾಂತರ ಗ್ರಾಮೀಣ ಜೀವನೋಪಾಯಗಳಿಗೆ ಸಂಭಾವ್ಯ ಹಾನಿಯ ಬಗ್ಗೆ ಎಚ್ಚರಿಸಿದೆ. ಪ್ರಸ್ತುತ ಬಿಕ್ಕಟ್ಟು ವ್ಯಾಪಾರ ಉದ್ವಿಗ್ನತೆಯಲ್ಲಿ ಗಮನಾರ್ಹ ಏರಿಕೆಯನ್ನು ಪ್ರತಿನಿಧಿಸುತ್ತದೆ, ಎರಡೂ ದೇಶಗಳು ಆರ್ಥಿಕ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ತಮ್ಮ ನೆಲೆಯನ್ನು ದೃಢವಾಗಿ ಹಿಡಿದಿಟ್ಟುಕೊಂಡಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Similar News