ದೆಹಲಿಯಲ್ಲಿ ಮಹಾ ಮಳೆ: ಹಲವು ಪ್ರದೇಶಗಳು ಜಲಾವೃತ, ರೆಡ್ ಅಲರ್ಟ್ ಘೋಷಣೆ

ಹವಾಮಾನ ಇಲಾಖೆಯು ಉತ್ತರ, ಪಶ್ಚಿಮ, ದಕ್ಷಿಣ, ಆಗ್ನೇಯ ಮತ್ತು ಮಧ್ಯ ದೆಹಲಿಯ ಜಿಲ್ಲೆಗಳಿಗೆ ರೆಡ್ ಅಲರ್ಟ್ ಜಾರಿ ಮಾಡಿದ್ದು, ದಿನವಿಡೀ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.;

Update: 2025-08-09 04:58 GMT

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ತಡರಾತ್ರಿ ಆರಂಭವಾದ ಮಳೆ ಶನಿವಾರವೂ ಮುಂದುವರಿದಿದ್ದು, ನಗರದ ಬಹುತೇಕ ಭಾಗಗಳಲ್ಲಿ ತೀವ್ರ ಜಲಾವೃತ ಉಂಟಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿರುವ ಭಾರತೀಯ ಹವಾಮಾನ ಇಲಾಖೆ (IMD), ದೆಹಲಿ- ಎನ್​​ಸಿಆರ್​​ನ ಹಲವು ಭಾಗಗಳಿಗೆ 'ರೆಡ್ ಅಲರ್ಟ್' ಘೋಷಿಸಿದೆ.

ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಪ್ರಾರಂಭವಾದ ಮಳೆ, ಬೆಳಗಿನವರೆಗೂ ಬಿಡುವಿಲ್ಲದೇ ಸುರಿದಿದೆ. ಇದರ ಪರಿಣಾಮವಾಗಿ ಪಂಚಕುಯಿನ್ ಮಾರ್ಗ, ಮಥುರಾ ರಸ್ತೆ, ಶಾಸ್ತ್ರಿ ಭವನ, ಆರ್.ಕೆ. ಪುರಂ, ಮೋತಿ ಬಾಗ್, ಮತ್ತು ಕಿದ್ವಾಯಿ ನಗರ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಮತ್ತು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದ್ದು, ನಗರದಾದ್ಯಂತ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.

ಹವಾಮಾನ ಇಲಾಖೆಯು ಉತ್ತರ, ಪಶ್ಚಿಮ, ದಕ್ಷಿಣ, ಆಗ್ನೇಯ ಮತ್ತು ಮಧ್ಯ ದೆಹಲಿಯ ಜಿಲ್ಲೆಗಳಿಗೆ ರೆಡ್ ಅಲರ್ಟ್ ಜಾರಿ ಮಾಡಿದ್ದು, ದಿನವಿಡೀ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಮತ್ತು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

Tags:    

Similar News