ಉಕ್ರೇನ್ - ರಷ್ಯಾ ಯುದ್ಧ ಅಂತ್ಯಕ್ಕೆ ಸಂಧಾನ; ಆಗಸ್ಟ್ 15ಕ್ಕೆ ಟ್ರಂಪ್-ಪುಟಿನ್ ಭೇಟಿ
2021ರಲ್ಲಿ ಅಂದಿನ ಅಧ್ಯಕ್ಷ ಜೋ ಬೈಡನ್ ಅವರು ಜಿನೀವಾದಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದರು. ಅದಾದ ನಂತರ ನಡೆಯುತ್ತಿರುವ ಮೊದಲ ಅಮೆರಿಕ-ರಷ್ಯಾ ಶೃಂಗಸಭೆ ಇದಾಗಿದೆ. ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಯುದ್ಧಭೂಮಿಯಲ್ಲಿ ತೀವ್ರ ಹೋರಾಟ ಮುಂದುವರಿದಿದೆ.;
ಡೊನಾಲ್ಡ್ ಟ್ರಂಪ್
ಮೂರು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮುಂದಿನ ಶುಕ್ರವಾರ, ಆಗಸ್ಟ್ 15 ರಂದು ಅಲಾಸ್ಕಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಶಾಂತಿ ಮಾತುಕತೆಯಲ್ಲಿ "ಭೂಪ್ರದೇಶಗಳ ಅದಲು-ಬದಲು" ಒಪ್ಪಂದದ ಪ್ರಮುಖ ಭಾಗವಾಗುವ ಸಾಧ್ಯತೆಯಿದೆ ಎಂದು ಟ್ರಂಪ್ ಅವರೇ ಸುಳಿವು ನೀಡಿದ್ದು, ಇದು ಜಾಗತಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಟ್ರಂಪ್ ಈ ಘೋಷಣೆ ಮಾಡಿದ್ದರೂ, ರಷ್ಯಾದ ಕ್ರೆಮ್ಲಿನ್ ಭೇಟಿಯ ಕುರಿತು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಹತ್ತಾರು ಸಾವಿರ ಜನರ ಸಾವಿಗೆ ಕಾರಣವಾಗಿರುವ ಈ ಯುದ್ಧವನ್ನು ನಿಲ್ಲಿಸುವ ಈ ಪ್ರಯತ್ನವು ನಿರ್ಣಾಯಕವಾಗಿದ್ದರೂ, ಶಾಂತಿ ಸ್ಥಾಪನೆಗೆ ರಷ್ಯಾ ಮತ್ತು ಉಕ್ರೇನ್ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಸಭೆಯ ಯಶಸ್ಸಿನ ಬಗ್ಗೆ ಖಚಿತತೆ ಇಲ್ಲ.
ಟ್ರಂಪ್ ಸ್ಪಷ್ಟನೆ
2021ರಲ್ಲಿ ಅಂದಿನ ಅಧ್ಯಕ್ಷ ಜೋ ಬೈಡನ್ ಅವರು ಜಿನೀವಾದಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದರು. ಅದಾದ ನಂತರ ನಡೆಯುತ್ತಿರುವ ಮೊದಲ ಅಮೆರಿಕ-ರಷ್ಯಾ ಶೃಂಗಸಭೆ ಇದಾಗಿದೆ. ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಯುದ್ಧಭೂಮಿಯಲ್ಲಿ ತೀವ್ರ ಹೋರಾಟ ಮುಂದುವರಿದಿದೆ. "ರಷ್ಯಾದೊಂದಿಗೆ ಮಾತುಕತೆ ಅಸಾಧ್ಯ, ಅವರನ್ನು ಸೋಲಿಸುವುದೊಂದೇ ದಾರಿ" ಎಂದು ಉಕ್ರೇನಿಯನ್ ಕಮಾಂಡರ್ ಒಬ್ಬರು ಅಭಿಪ್ರಾಯಪಟ್ಟಿದ್ದರು.
ಈ ಮಹತ್ವದ ಸಭೆಯ ಘೋಷಣೆಗೂ ಮುನ್ನ, ಪುಟಿನ್ ಅವರು ಚೀನಾ, ಭಾರತ ಸೇರಿದಂತೆ ಹಲವು ಮಿತ್ರ ರಾಷ್ಟ್ರಗಳ ನಾಯಕರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಇದು ಸಂಭಾವ್ಯ ಶಾಂತಿ ಒಪ್ಪಂದದ ಕುರಿತು ಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಿರಬಹುದು ಎಂದು ಅಂದಾಜಿಸಲಾಗಿದೆ.