ಕಾಶ್ಮೀರದಲ್ಲಿ 'ಆಪರೇಷನ್ ಅಖಲ್': ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ

ದಟ್ಟವಾದ ಕಾಡು ಮತ್ತು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿದ್ದು, ಉಗ್ರರನ್ನು ಪತ್ತೆಹಚ್ಚಲು ಡ್ರೋನ್​, ಹೆಲಿಕಾಪ್ಟರ್ ಹಾಗೂ ಪ್ಯಾರಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ.;

Update: 2025-08-09 05:41 GMT

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ 'ಆಪರೇಷನ್ ಅಖಲ್' ಕಾರ್ಯಾಚರಣೆಯು 9ನೇ ದಿನಕ್ಕೆ ಕಾಲಿಟ್ಟಿದ್ದು, ಉಗ್ರರೊಂದಿಗಿನ ರಾತ್ರಿಯಿಡೀ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ವೀರಮರಣವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಇತರ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಕಣಿವೆಯ ಸುದೀರ್ಘ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾದ ಇದರಲ್ಲಿ ಗಾಯಗೊಂಡವರ ಒಟ್ಟು ಸಂಖ್ಯೆ 10ಕ್ಕೆ ಏರಿದೆ.

ಹುತಾತ್ಮರಾದ ಯೋಧರನ್ನು ಲ್ಯಾನ್ಸ್ ನಾಯಕ್ ಪ್ರಿತ್ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. "ರಾಷ್ಟ್ರಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಾಣತ್ಯಾಗ ಮಾಡಿದ ವೀರ ಯೋಧರಾದ ಪ್ರಿತ್ಪಾಲ್ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಅವರ ಸರ್ವೋಚ್ಚ ತ್ಯಾಗಕ್ಕೆ ಚಿನಾರ್ ಕಾರ್ಪ್ಸ್ ಗೌರವ ಸಲ್ಲಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಸದಾ ಸ್ಪೂರ್ತಿ. ಅವರ ಕುಟುಂಬಗಳ ದುಃಖದಲ್ಲಿ ಭಾರತೀಯ ಸೇನೆ ಭಾಗಿಯಾಗಿದೆ," ಎಂದು ಸೇನೆಯು ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ.

ಆಗಸ್ಟ್ 1 ರಂದು, ದಕ್ಷಿಣ ಕಾಶ್ಮೀರದ ಅಖಲ್ ಅರಣ್ಯ ಪ್ರದೇಶದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಕಾರ್ಯಾಚರಣೆಯಲ್ಲಿ ಈವರೆಗೆ ಐದಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇನ್ನೂ ಕನಿಷ್ಠ ಮೂವರು ಉಗ್ರರು ದಟ್ಟವಾದ ಅರಣ್ಯದಲ್ಲಿನ ನೈಸರ್ಗಿಕ ಗುಹೆಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸವಾಲಿನ ಕಾರ್ಯಾಚರಣೆ

ದಟ್ಟವಾದ ಕಾಡು ಮತ್ತು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿದ್ದು, ಉಗ್ರರನ್ನು ಪತ್ತೆಹಚ್ಚಲು ಡ್ರೋನ್​, ಹೆಲಿಕಾಪ್ಟರ್ ಹಾಗೂ ಪ್ಯಾರಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಉಗ್ರರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ರಾತ್ರಿ ವೀಕ್ಷಣಾ ಸಾಧನಗಳು ಮತ್ತು ದೂರಗಾಮಿ ರೈಫಲ್​ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ.

ನಿರಂತರ ಗುಂಡಿನ ದಾಳಿ ಮತ್ತು ಸ್ಫೋಟಗಳಿಂದಾಗಿ, ಅಖಲ್ ಗ್ರಾಮದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸ್ಥಳೀಯರಿಗೆ ನೆರವಾಗಲು ಮತ್ತು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯ ನಂತರ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, 'ಆಪರೇಷನ್ ಮಹಾದೇವ' ಮತ್ತು 'ಶಿವಶಕ್ತಿ' ಕಾರ್ಯಾಚರಣೆಗಳ ಬಳಿಕ 'ಆಪರೇಷನ್ ಅಖಲ್' ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಸುಮಾರು 20 ಪ್ರಮುಖ ಉಗ್ರರನ್ನು ಹತ್ಯೆಗೈಯಲಾಗಿದೆ.

Tags:    

Similar News