ಸಂವಿಧಾನ ಪೀಠಿಕೆ | ʼಜಾತ್ಯತೀತʼ, ʼಸಮಾಜವಾದʼ ತೆಗೆಯಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್ ತೀರ್ಪು
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠವು ಸೋಮವಾರ (ನವೆಂಬರ್ 25) ಈ ಮಹತ್ವದ ಆದೇಶ ಹೊರಡಿಸಿದೆ. ಇಷ್ಟು ವರ್ಷಗಳ ನಂತರ ತಿದ್ದುಪಡಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
1976ರ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ತಿದ್ದುಪಡಿ ತಂದು "ಸಮಾಜವಾದ" ಮತ್ತು "ಜಾತ್ಯತೀತ" ಪದಗಳನ್ನು ಸೇರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠವು ಸೋಮವಾರ (ನವೆಂಬರ್ 25) ಈ ಆದೇಶ ಹೊರಡಿಸಿದೆ. ಇಷ್ಟು ವರ್ಷಗಳ ನಂತರ ತಿದ್ದುಪಡಿ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ತೀರ್ಪು ನೀಡುವ ವೇಳೆ ನ್ಯಾಯಪೀಠ "ಸಮಾಜವಾದ" ಮತ್ತು "ಜಾತ್ಯತೀತ" ಪದಗಳ ಅರ್ಥಗಳನ್ನು ನ್ಯಾಯಾಲಯ ವಿವರಿಸಿದೆ ಎಂದು ʼಲೈವ್ ಲಾʼ ವರದಿ ಮಾಡಿದೆ.
1976ರಲ್ಲಿ ಅಂಗೀಕರಿಸಲಾದ 42ನೇ ತಿದ್ದುಪಡಿಯ ಮೂಲಕ ಈ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಯಿತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಸಂಸತ್ತಿನ ತಿದ್ದುಪಡಿ ಅಧಿಕಾರವು ಪೀಠಿಕೆಗೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಿದ್ದುಪಡಿ ಮಾಡಿ ಅನೇಕ ವರ್ಷಗಳಾಗಿವೆ. ಈಗ ಈ ವಿಷಯವನ್ನು ಏಕೆ ಎತ್ತಬೇಕು?" ಎಂದು ನ್ಯಾಯಪೀಠ ಇದೇ ವೇಳೆ ಪ್ರಶ್ನಿಸಿತು. 42 ನೇ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ನ್ಯಾಯಪೀಠ ನವೆಂಬರ್ 22ರಂದು ಕಾಯ್ದಿರಿಸಿತ್ತು.
"ಸಮಾಜವಾದಿ", "ಜಾತ್ಯತೀತ" ಎಂಬ ಪದಗಳ ಅರ್ಥ ವಿವರಣೆ
ಭಾರತೀಯ ಸನ್ನಿವೇಶದಲ್ಲಿ "ಸಮಾಜವಾದ" ಎಂದರೇನು ಎಂದು ಸಿಜೆಐ ಖನ್ನಾ ವಿವರಿಸಿದ್ದಾರೆ. "ಭಾರತದಲ್ಲಿ ಸಮಾಜವಾದವನ್ನು ನಾವು ಅರ್ಥಮಾಡಿಕೊಳ್ಳುವ ವಿಧಾನವು ಇತರ ದೇಶಗಳಿಗಿಂತ ಭಿನ್ನವಾಗಿದೆ. ನಮ್ಮ ಸನ್ನಿವೇಶದಲ್ಲಿ, ಸಮಾಜವಾದವು ಪ್ರಾಥಮಿಕವಾಗಿ ಕಲ್ಯಾಣ ರಾಜ್ಯವನ್ನು ಅರ್ಥೈಸುತ್ತದೆ. ಅಷ್ಟೆ. ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ವಲಯವನ್ನೂ ಸೇರಿಸಿಕೊಂಡಿದೆ. ನಾವೆಲ್ಲರೂ ಇದರಿಂದ ಪ್ರಯೋಜನ ಪಡೆದಿದ್ದೇವೆ" ಎಂದು ಸಿಜೆಐ ಖನ್ನಾ ಹೇಳಿದ್ದಾರೆ.
'ಸಮಾಜವಾದ' ಎಂಬ ಪದವನ್ನು ವಿಭಿನ್ನ ಸಂದರ್ಭದಲ್ಲಿ ಬಳಸಲಾಗುತ್ತದೆ. ಇದರರ್ಥ ರಾಜ್ಯವು ಕಲ್ಯಾಣ ರಾಜ್ಯವಾಗಿದೆ ಮತ್ತು ಜನರ ಕಲ್ಯಾಣಕ್ಕಾಗಿ ನಿಲ್ಲಬೇಕು ಮತ್ತು ಅವಕಾಶ ವಿಚಾರಕ್ಕೆ ಬಂದಾಗ ಸಮಾನತೆ ಒದಗಿಸಬೇಕು" ಎಂದು ನ್ಯಾಯಪೀಠ ವಿವರಿಸಿದೆ.
ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯವು "ಜಾತ್ಯತೀತತೆ" ಯಾವಾಗಲೂ ಸಂವಿಧಾನದ ಮೂಲ ರಚನೆಯ ಒಂದು ಭಾಗ ಎಂದು ಹೇಳಿತ್ತು
ಬಲರಾಮ್ ಸಿಂಗ್, ಹಿರಿಯ ಬಿಜೆಪಿ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಈ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಹಿಂದೆ, ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ವಜಾಗೊಳಿಸಿತ್ತು.
"ಪ್ರಸ್ತಾವನೆ ಸಂವಿಧಾನದ ಭಾಗವಾಗಿದೆ"
ಅರ್ಜಿದಾರರಲ್ಲಿ ಒಬ್ಬರ ಪರವಾಗಿ ವಾದಿಸಿದ ವಕೀಲ ವಿಷ್ಣು ಶಂಕರ್ ಜೈನ್, ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾಡಿದ ತಿದ್ದುಪಡಿಯನ್ನು ಜನರ ಮಾತನ್ನು ಕೇಳದೆ ಅಂಗೀಕರಿಸಲಾಗಿದೆ. ಈ ಪದಗಳನ್ನು ಸೇರಿಸುವುದರಿಂದ ಪ್ರಜೆಗಳಿಗೆ ಕೆಲವು ಸಿದ್ಧಾಂತಗಳ ಹೇರಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಪೀಠಿಕೆ ಸಂವಿಧಾನದ ಅವಿಭಾಜ್ಯ ಅಂಗ. ಇದು ಪ್ರತ್ಯೇಕವಲ್ಲ ಎಂದು ನ್ಯಾಯಪೀಠ ಹೇಳಿತು. "ತಿದ್ದುಪಡಿ (42 ನೇ ತಿದ್ದುಪಡಿ) ಈ ನ್ಯಾಯಾಲಯದಿಂದ ಸಾಕಷ್ಟು ಪರಿಶೀಲನೆಗೆ ಒಳಗಾಗಿದೆ. ಶಾಸಕಾಂಗ ಮಧ್ಯಪ್ರವೇಶಿಸಿದೆ. ಆ ಸಮಯದಲ್ಲಿ (ತುರ್ತು ಪರಿಸ್ಥಿತಿ) ಮಾಡಿರುವ ತಿದ್ದುಪಡಿಯನ್ನು ಈ ಬದಲಾಯಿಸಿ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.