ದೆಹಲಿಗೆ ಹಬ್ಬಿದ ಸಿಎಂ, ಡಿಸಿಎಂ ಮುನಿಸು; ಕರ್ನಾಟಕ ಭವನದ ವಿಶೇಷ ಕರ್ತವ್ಯಾಧಿಕಾರಿಗಳ ಮಧ್ಯೆ ಜಟಾಪಟಿ

ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮೋಹನ್‌ ಕುಮಾರ್‌ ವಿರುದ್ದ ಕರ್ನಾಟಕ ಭವನ ನಿವಾಸಿ ಆಯುಕ್ತ ಆಂಜನೇಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ದೂರು ನೀಡಿದ್ದಾರೆ.;

Update: 2025-07-26 06:27 GMT

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌

ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ಅಧಿಕಾರ ಹಂಚಿಕೆಯ ಮುನಿಸು ಹೆಚ್ಚಾಗುತ್ತಿರುವ ಬೆನ್ನಲ್ಲೇ ದೆಹಲಿ ಕರ್ನಾಟಕ ಭವನದಲ್ಲಿರುವ ಸಿಎಂ ಹಾಗೂ ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿಗಳ ನಡುವಿನ ಬೀದಿ ಜಗಳ ಬಹಿರಂಗವಾಗಿದೆ.  

ದೆಹಲಿ ಕರ್ನಾಟಕ ಭವನದಲ್ಲಿ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮೋಹನ್ ಕುಮಾರ್ ಹಾಗೂ ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ಹೆಚ್. ಆಂಜನೇಯ ನಡುವೆ ಜಟಾಪಟಿಯಾಗಿದ್ದು ಮೋಹನ್‌ ಕುಮಾರ್‌ ವಿರುದ್ದ ಕರ್ನಾಟಕ ಭವನ ನಿವಾಸಿ ಆಯುಕ್ತ ಎಚ್. ಆಂಜನೇಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ ?

ಸಿಎಂ ವಿಶೇಷ ಅಧಿಕಾರಿಯಾಗಿರುವ ಮೋಹನ್‌ ಕುಮಾರ್‌ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕರ್ನಾಟಕ ಭವನದ ಇತರೆ ಸಿಬ್ಬಂದಿ ಎದುರಲ್ಲೇ ಬೂಟು ಕಳಚಿಕೊಂಡು ಹೊಡೆಯುವುದಾಗಿ ಬೆದರಿಕೆಯಾಕಿದ್ದಾರೆ. ಕಚೇರಿಯ ಹೊರ ಆವರಣದಲ್ಲಿ ಎಲ್ಲರೆದುರಿಗೂ ಹೊಡೆಯಲು ಬಂದಿದ್ದಾರೆ. ನನಗೆ ಏನಾದರೂ ಆದರೆ ಮೋಹನ್‌ ಕುಮಾರ್‌ ಹೊಣೆ ಎಂದು ಎಂದು ಹೆಚ್‌. ಆಂಜನೇಯ ದೂರಿನಲ್ಲಿ ತಿಳಿಸಿದ್ದಾರೆ. 

"ಮೋಹನ್‌ ಕುಮಾರ್‌ ಸಿಎಂ ವಿಶೇಷ ಕರ್ತವ್ಯ ಅಧಿಕಾರಿ ಎಂಬ ಅಹಂನಲ್ಲಿ ತಾನು ಹೇಳಿದ ರೀತಿಯಲ್ಲಿ ಕರ್ನಾಟಕ ಭವನದ ಆಡಳಿತ ನಡೆಯಬೇಕು ಎಂದು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಕಚೇರಿ ಅಧೀಕ್ಷಕ-ಆಡಳಿತ ಹುದ್ದೆಯಿಂದ ನನ್ನನ್ನು ವರ್ಗಾವಣೆ ಮಾಡಿಸಿದ್ದಾರೆ. ಸೇವಾ ಹಿರಿತನವಿದ್ದರೂ ಲೆಕ್ಕಾಧಿಕಾರಿಯಾಗಿ (ಪ್ರಭಾರ) ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಾರೆ. ಹೀಗಾಗಿ, ಅವರ ಸೇವಾ ಅವಧಿಯಲ್ಲಿ ನಡೆದಿರುವ ಇಲಾಖಾ ವಿಚಾರಣೆ, ಮುಂಬಡ್ತಿ ಪಡೆದಿರುವ ಕುರಿತು ವಿಚಾರಣೆ ನಡೆಸಬೇಕು. ಏಕವಚನದಲ್ಲಿ ನಿಂದಿಸಿರುವ ಬಗ್ಗೆಯೂ ವಿಚಾರಣೆ ನಡೆಸಬೇಕು" ಎಂದು  ಒತ್ತಾಯಿಸಿದ್ದಾರೆ.



ದೂರಿನ ಬಗ್ಗೆ ಪರಿಶೀಲನೆ: ಸಿಎಂ

'ಇಬ್ಬರು ಅಧಿಕಾರಿಗಳ ನಡುವೆ ಏನೋ ಆಗಿದೆಯಂತೆ. ಈ ಬಗ್ಗೆ ನನಗೂ ಕೆಲವರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆದರಿಕೆ ಹಾಕಿಲ್ಲ, ಮೋಹನ್‌ ಕುಮಾರ್‌ ಸ್ಪಷ್ಟನೆ

"ಆಂಜನೇಯ ಮೊನ್ನೆ ಕಚೇರಿಗೆ ಬಂದಿದ್ದರು. ಈ ವೇಳೆ ನನಗೆ ಜನ್ಮದಾತ ಎಂದು ವ್ಯಂಗ್ಯವಾಗಿ ಹೇಳಿದರು. ದೂರವಾಣಿ ಕರೆಯಲ್ಲಿದ್ದ ಕಾರಣ ನಾನು ಗಮನಿಸಿರಲಿಲ್ಲ. ಬಳಿಕ ಹೊರಹೋದರು. ಕಚೇರಿಯ ಸಿಬ್ಬಂದಿಯೊಬ್ಬರು ಈ ವಿಷಯವನ್ನು ಗಮನಕ್ಕೆ ತಂದರು. ಬಳಿಕ ಆಂಜನೇಯ ಅವರನ್ನು ಕರೆಸಿ ವಿವರಣೆ ಕೇಳಿದೆ. ಬೂಟ್‌ನಿಂದ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿಲ್ಲ" ಎಂದು ಮೋಹನ್ ಕುಮಾ‌ರ್ ಸ್ಪಷ್ಟಪಡಿಸಿದ್ದಾರೆ.

ಹೆಚ್‌. ಆಂಜನೇಯ ವಿರುದ್ದವೂ ದೂರು 

ಕರ್ನಾಟಕ ಭವನದ ಮಹಿಳೆಯರ ಜತೆಗೆ ಹೆಚ್‌. ಆಂಜನೇಯ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ಬಗ್ಗೆ ಮಹಿಳಾ ಸಿಬ್ಬಂದಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ ಎಂದರು.

Tags:    

Similar News