NEET-PG Exam| ಪರೀಕ್ಷೆಯಲ್ಲಿ ಕೊನೆ ಕ್ಷಣದ ಬದಲಾವಣೆಯನ್ನು ಪ್ರಶ್ನಿಸಿದ ಸುಪ್ರೀಂ

ರಾಷ್ಟ್ರೀಯ ಶಿಕ್ಷಣ ಮಂಡಳಿ ಮಾಡಿರುವ ಈ ಬದಲಾವಣೆಗಳು ʼಅತ್ಯಂತ ಅಸಾಮಾನ್ಯʼ ಎಂದು ಸುಪ್ರೀಂ ಹೇಳಿದೆ.ಒಂದು ವಾರದೊಳಗೆ ರಾಷ್ಟ್ರೀಯ ಶಿಕ್ಷಣ ಮಂಡಳಿ (ಎನ್‌ಬಿಇ) ಮತ್ತು ಕೇಂದ್ರದಿಂದ ಪ್ರತಿಕ್ರಿಯೆಯನ್ನು ಕೋರಿದೆ.

Update: 2024-09-20 12:30 GMT

ಆಗಸ್ಟ್ 11 ರಂದು ನಡೆದ ನೀಟ್‌ ಪಿಜಿ- 2024 ರ ಪರೀಕ್ಷೆ ಮಾದರಿಯಲ್ಲಿ ಕೊನೆಯ ಕ್ಷಣದಲ್ಲಿ ಕೆಲವು ಬದಲಾವಣೆ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 20) ಪ್ರಶ್ನಿಸಿದೆ.

ರಾಷ್ಟ್ರೀಯ ಶಿಕ್ಷಣ ಮಂಡಳಿ ಮಾಡಿರುವ ಈ ಬದಲಾವಣೆಗಳು ʼಅತ್ಯಂತ ಅಸಾಮಾನ್ಯʼ. ಇದರಿಂದ ವಿದ್ಯಾರ್ಥಿಗಳು ʻಕಕ್ಕಾಬಿಕ್ಕಿʼ ಆಗುವ ಸಾಧ್ಯತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲೆ ವಿಭಾ ದತ್ತ ಮಖೀಜಾ ಮತ್ತು ವಕೀಲೆ ತನ್ವಿ ದುಬೆ ಅವರ ಸಲ್ಲಿಕೆಗಳನ್ನು ಗಮನಿಸಿದ ನ್ಯಾಯಾಲಯ, ಈ ಸಂಬಂಧ ಒಂದು ವಾರದೊಳಗೆ ರಾಷ್ಟ್ರೀಯ ಶಿಕ್ಷಣ ಮಂಡಳಿ (ಎನ್‌ಬಿಇ) ಮತ್ತು ಕೇಂದ್ರದಿಂದ ಪ್ರತಿಕ್ರಿಯೆಯನ್ನು ಕೋರಿತು. ಸೆಪ್ಟೆಂಬರ್ 27 ರಂದು ವಿಚಾರಣೆಗೆ ಪಟ್ಟಿ ಮಾಡಿದೆ.

ಕೊನೆ ಗಳಿಗೆಯಲ್ಲಿ ಬದಲಾವಣೆ: ವಿಷಯವು ಪರೀಕ್ಷೆ ಮಾದರಿಯಲ್ಲಿ ಕೊನೆಯ ಕ್ಷಣದ ಬದಲಾವಣೆ, ಅಂಕಗಳ ಸಾಮಾನ್ಯೀಕರಣ, ಉತ್ತರ ಕೀಗಳ ಬಹಿರಂಗಪಡಿಸುವಿಕೆ ಮತ್ತು ನೀಟ್-ಪಿಜಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದೆ ಎಂದು ವಕೀಲರು ಹೇಳಿದರು. 

ʻಯಾವುದೇ ನಿಯಮಗಳಿಲ್ಲ ಅಥವಾ ಸ್ಪಷ್ಟತೆ ಇಲ್ಲ. ಪರೀಕ್ಷೆಗೆ ಮೂರು ದಿನಗಳ ಮುನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿ ದೆ. ಪ್ರಮಾಣೀಕೃತ ವಿಧಾನದ ಅಗತ್ಯವಿದೆ. ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂದು ಖಚಿತಪಡಿಸಿಕೊಳ್ಳಲು ಯಾವುದೇ ನಿಯಮ ಗಳಿಲ್ಲ. ಎಲ್ಲವೂ ಏಕೈಕ ಮಾಹಿತಿ ಬುಲೆಟಿನ್ ನ್ನು ಅವಲಂಬಿಸಿದೆ. ಇದನ್ನು ಅಧಿಕಾರಿಗಳು ತಮ್ಮ ಇಚ್ಛೆಗೆ ತಕ್ಕಂತೆ ಬದಲಿಸುತ್ತಾರೆʼ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಮಂಡಳಿಯ ವಕೀಲರು ಸಲ್ಲಿಕೆಗಳನ್ನು ವಿರೋಧಿಸಿದರು; ಹೊಸದನ್ನು ಮತ್ತು ಅಸಾಮಾನ್ಯವಾದ ಏನನ್ನೂ ಮಾಡಿಲ್ಲ ಎಂದು ಹೇಳಿದರು.

ಈ ಬದಲಾವಣೆಗಳು ʼಅತ್ಯಂತ ಅಸಾಮಾನ್ಯʼ. ಪರೀಕ್ಷೆಗೆ ಮೂರು ದಿನ ಮೊದಲು ಮಾದರಿಯನ್ನೇ ಬದಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ʻಕಕ್ಕಾಬಿಕ್ಕಿʼ ಆಗುವ ಸಾಧ್ಯತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.

ಇಶಿಕಾ ಜೈನ್ ಮತ್ತು ಇತರರು ಸಲ್ಲಿಸಿದ ಮನವಿಯ ವಿಚಾರಣೆ ಸೆಪ್ಟೆಂಬರ್ 13 ರಂದು ನಡೆದಿತ್ತು.

ಪಾರದರ್ಶಕತೆ ಅಗತ್ಯ: ಆಗಸ್ಟ್ 23 ರಂದು ರಾಷ್ಟ್ರೀಯ ಶಿಕ್ಷಣ ಮಂಡಳಿ ಪ್ರಕಟಿಸಿದ ಫಲಿತಾಂಶಗಳಲ್ಲಿ ಅನಿರೀಕ್ಷಿತವಾಗಿ ಕಡಿಮೆ ಶ್ರೇಯಾಂಕ ಬಂದಿರುವುದು ವಿದ್ಯಾರ್ಥಿಗಳಲ್ಲಿ ಕಳವಳಕ್ಕೆ ಕಾರಣವಾಗಿವೆ. ಅಂಕಗಳನ್ನು ಅನಧಿಕೃತ ಉತ್ತರದ ಕೀಗಳೊಂದಿಗೆ ಹೋಲಿಸಿದ ಅನೇಕ ವಿದ್ಯಾರ್ಥಿಗಳು ಶ್ರೇಯಾಂಕ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಶಿಕ್ಷಣ ಮಂಡಳಿ ಅಧಿಕೃತ ಉತ್ತರ ಕೀಗಳನ್ನು ಬಿಡುಗಡೆ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕುಂದುಕೊರತೆ ಪೋರ್ಟಲ್ ಸ್ಥಾಪಿಸಬೇಕಂದು ಒತ್ತಾಯಿಸಿದರು. 

ಆದರೆ, ರಾಷ್ಟ್ರೀಯ ಶಿಕ್ಷಣ ಮಂಡಳಿಯು ಪ್ರಶ್ನೆಪತ್ರಿಕೆಗಳು ಅಥವಾ ಉತ್ತರದ ಕೀಲಿಗಳನ್ನು ಬಿಡುಗಡೆ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಉತ್ತರ ಗೊತ್ತಿಲ್ಲದೆ ತಮ್ಮ ಕ್ಷಮತೆಯನ್ನು ಮಾಪನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಖೀಜಾ ಈ ಹಿಂದೆ ಹೇಳಿದ್ದರು.

Tags:    

Similar News