Break on Bulldozer Justice| ಅಕ್ರಮ ಧ್ವಂಸ ಸಂವಿಧಾನ ವಿರೋಧಿ: ಸುಪ್ರೀಂ

ತನ್ನ ಅನುಮತಿ ಇಲ್ಲದೆ ಅಕ್ಟೋಬರ್ 1 ರವರೆಗೆ ಆರೋಪಿಗಳು ಸೇರಿದಂತೆ ಯಾವುದೇ ಆಸ್ತಿಯನ್ನು ನೆಲಸಮ ಮಾಡದಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

Update: 2024-09-18 06:44 GMT

ಒಂದೇ ಒಂದು ಅಕ್ರಮ ನೆಲಸಮ ನಡೆದರೂ, ಅದು ನಮ್ಮ ಸಂವಿಧಾನದ ನೀತಿಗೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಅಕ್ಟೋಬರ್ 1 ರವರೆಗೆ ತನ್ನ ಅನುಮತಿ ಪಡೆಯದೆ ಆರೋಪಿಗಳ ಆಸ್ತಿ ಸೇರಿದಂತೆ ಯಾವುದೇ ಆಸ್ತಿಯನ್ನು ನೆಲಸಮ ಮಾಡಬಾರದು ಎಂದು ನಿರ್ದೇಶಿಸಿತು. ಆದರೆ, ಸಾರ್ವಜನಿಕ ರಸ್ತೆಗಳು, ಫುಟ್‌ಪಾತ್‌ಗಳಲ್ಲಿ ಅನಧಿಕೃತ ಕಟ್ಟಡಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠ ಸ್ಪಷ್ಟಪಡಿಸಿತು. 

ಹಲವು ರಾಜ್ಯಗಳಲ್ಲಿ ಆರೋಪಿಗಳ ಆಸ್ತಿಗಳನ್ನು ಕಾನೂನುಬಾಹಿರವಾಗಿ ನೆಲಸಮ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. 

ʻಅಕ್ರಮ ಧ್ವಂಸ ನಮ್ಮ ಸಂವಿಧಾನದ ನೀತಿಗೆ ವಿರುದ್ಧವಾದುದು. ಮುಂದಿನ ವಿಚಾರಣೆ ದಿನಾಂಕವಾದ ಅಕ್ಟೋಬರ್ 1 ರವರೆಗೆ ಈ ನ್ಯಾಯಾಲಯದ ಅನುಮತಿ ಪಡೆಯದೆ ಯಾವುದೇ ಆಸ್ತಿಯನ್ನು ನೆಲಸಮ ಮಾಡಬಾರದು,ʼ ಎಂದು ಹೇಳಿದೆ. 

ನ್ಯಾಯಾಲಯದ ಆದೇಶವು ಕಾನೂನುಬದ್ಧ ಉರುಳಿಸುವಿಕೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕಳವಳವನ್ನು ಪೀಠ ತಳ್ಳಿಹಾಕಿತು.

ʻಮುಂದಿನ ವಿಚಾರಣೆ ತನಕ ಕೈ ಕಟ್ಟಿಕೊಳ್ಳಿ. ಅಷ್ಟರೊಳಗೆ ಸ್ವರ್ಗ ಕುಸಿದುಬಿಡುವುದಿಲ್ಲʼ ಎಂದು ಪೀಠ ಹೇಳಿದೆ. 

ಹೊರಗಿನ ಗದ್ದಲ ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ: ಆಸ್ತಿಗಳ ಧ್ವಂಸ ಕುರಿತು ʻನಿರೂಪಣೆʼ ಕಟ್ಟಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು.

ʻವ್ಯಕ್ತಿ ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿರುವುದರಿಂದ ಅವರ ಆಸ್ತಿಯನ್ನು ನೆಲಸಮ ಮಾಡಲಾಗಿದೆ ಎಂದು ಆರೋಪಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಇದೆʼ ಎಂದು ಅವರು ಹೇಳಿದರು. 

ʻಕಾನೂನು ಪಾಲಿಸದ ಒಂದೇ ಒಂದು ಉರುಳಿಸುವಿಕೆಯ ನಿದರ್ಶನವನ್ನು ಅವರು ನೀಡಲಿ,ʼ ಎಂದು ಮೆಹ್ತಾ ಹೇಳಿದರು. ಕಕ್ಷಿದಾರರು ನ್ಯಾಯಾಲಯವನ್ನು ಸಂಪರ್ಕಿಸಿಲ್ಲ. ಅವರು ನೋಟಿಸ್‌ ಸ್ವೀಕರಿಸಿದ್ದಾರೆ ಮತ್ತು ಅವರ ನಿರ್ಮಾಣಗಳು ಅಕ್ರಮ ಎಂದು ಅವರಿಗೆ ತಿಳಿದಿದೆ,ʼ ಎಂದು ಮೆಹ್ತಾ ಹೇಳಿದರು. 

ʻಹೊರಗಿನ ಗಲಾಟೆ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ,ʼ ಎಂದು ಪೀಠ ಹೇಳಿತು. 

ಮಾರ್ಗಸೂಚಿ ರಚನೆ: ʻಅನಧಿಕೃತ ನಿರ್ಮಾಣದ ನೆಲಸಮವನ್ನು ನಾವು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ .ಆದರೆ, ಯಾವುದು ಕಾನೂನುಬಾಹಿರ ಎಂದು ನಿರ್ಧರಿಸುವ ನ್ಯಾಯಾಧೀಶರಲ್ಲ. ಪೀಠವು ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಮಾರ್ಗಸೂಚಿಗಳನ್ನು ರೂಪಿಸುತ್ತದೆ,ʼ ಎಂದು ಹೇಳಿದೆ. 

ದೇಶಾದ್ಯಂತ ಜಾರಿಗೊಳಿಸಬಹುದಾದ ಕೆಲವು ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಹೇಳಿದ ಬಳಿಕವೂ ಈ ಸಂಬಂಧ ನೀಡಿದ ಹೇಳಿಕೆಗಳಿಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. 

ʻಸೆ. 2 ರ ಆದೇಶದ ನಂತರ, ಬುಲ್ಡೋಜರ್ ಬಳಕೆ ಮುಂದುವರಿಯುತ್ತದೆ ಎಂಬ ಹೇಳಿಕೆ ನೀಡಲಾಗಿದೆ ಮತ್ತು ಇದು ಸ್ಟೀರಿಂಗ್ ಯಾರ ಕೈಯಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ,ʼ ಎಂದು ಪೀಠ ಹೇಳಿದೆ. 

ವೈಭವೀಕರಣ ನಿಲ್ಲಿಸಿ: ಈ ತಿಂಗಳಿನಲ್ಲಿ ಎರಡು ಬಾರಿ ಬುಲ್ಡೋಜರ್ ನ್ಯಾಯ ಕುರಿತು ತೀವ್ರ ಅಸಮಾಧಾನಗೊಂಡಿರುವ ನ್ಯಾಯಾಲಯ, ಈ ಅಭ್ಯಾಸದ ವೈಭವೀಕರಣದ ವಿರುದ್ಧ ಎಚ್ಚರಿಸಿದೆ. 

ʼಮಿಸ್ಟರ್ ಮೆಹ್ತಾ, ಇಂಥ ಕ್ರಮಗಳ ವೈಭವೀಕರಣ ಕೂಡದು. ಇದನ್ನು ಹೇಗೆ ನಿಲ್ಲಿಸಬೇಕೆಂದು ನೀವು ನಮಗೆ ಸಹಾಯ ಮಾಡುತ್ತೀರಿ. ಅಗತ್ಯವಿದ್ದರೆ, ನಾವು ಚುನಾವಣಾ ಆಯೋಗವನ್ನು ಸಹ ಕೇಳುತ್ತೇವೆ,ʼ ಎಂದು ಪೀಠ ಹೇಳಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಉಲ್ಲೇಖವು ಮಹತ್ವ ಪಡೆದುಕೊಂಡಿದೆ.

ʻಈ ನ್ಯಾಯಾಲಯದ ಅನುಮತಿಯಿಲ್ಲದೆ ಮುಂದಿನ ದಿನಾಂಕದವರೆಗೆ ಕೆಡವಲು ಅವಕಾಶವಿಲ್ಲ,ʼ ಎಂದು ಪೀಠ ಪುನರುಚ್ಚರಿಸಿದೆ.

ಕ್ರಿಮಿನಲ್ ಅಪರಾಧ ಕೆಡವಲು ಆಧಾರವಲ್ಲ: ಸೆಪ್ಟೆಂಬರ್ 2 ರಂದು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಆರೋಪಿ ಎಂಬ ಮಾತ್ರಕ್ಕೆ ವ್ಯಕ್ತಿಯೊಬ್ಬರ ಮನೆಯನ್ನು ಹೇಗೆ ಕೆಡವಲು ಸಾಧ್ಯ ಎಂದು ಪ್ರಶ್ನಿಸಿತ್ತು.

ಕೆಲವು ರಾಜ್ಯಗಳಲ್ಲಿ ಮನೆಗಳನ್ನು ಕೆಡವಲು ಬುಲ್ಡೋಜರ್‌ ಬಳಸಲಾಗುತ್ತಿದೆ. ಇತ್ತೀಚಿನ ಉದಾಹರಣೆ, ಜೈಪುರದಲ್ಲಿ ಮಾಲೀಕನ ಮಗ ಸಹಪಾಠಿಯನ್ನು ಇರಿದ ಕಾರಣ ಮನೆ ಧ್ವಂಸಗೊಳಿಸಿರುವುದು. 

ʻಅಪರಾಧಿಯಾಗಿದ್ದರೂ ಕಾನೂನಿನ ಪ್ರಕಾರ ಸೂಕ್ತ ಕಾರ್ಯವಿಧಾನವನ್ನು ಅನುಸರಿಸದೆ ಅದನ್ನು ಮಾಡಲು ಸಾಧ್ಯವಿಲ್ಲʼ ಎಂದು ನ್ಯಾಯಾಲಯ ಹೇಳಿತ್ತು. 

ಉತ್ತರ ಪ್ರದೇಶದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್, ವ್ಯಕ್ತಿಯೊಬ್ಬ ಕೆಲವು ಅಪರಾಧದ ಭಾಗವಾಗಿದ್ದಾನೆ ಎಂದು ಆರೋಪವು ಅವನ ಸ್ಥಿರಾಸ್ತಿಯನ್ನು ಕೆಡವಲು ಆಧಾರವಾಗುವುದಿಲ್ಲ ಎಂದು ಪ್ರಮಾಣಪತ್ರ ಹೇಳುತ್ತದೆ ಎಂದು ಹೇಳಿದ್ದರು. 

ಜಮಿಯ ಉಲಾಮಾ-ಇ-ಹಿಂದ್ ಅರ್ಜಿ: ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲರು, ಬಹುತೇಕ ಎಲ್ಲಾ ರಾಜ್ಯಗಳು ಈಗ ಈ ಅಭ್ಯಾಸದಲ್ಲಿ ತೊಡಗಿವೆ ಮತ್ತು ಆಸ್ತಿಗಳನ್ನು ನೆಲಸಮ ಮಾಡುತ್ತಿವೆ ಎಂದು ಹೇಳಿದರು.

ʻಇದು ಪ್ರತಿದಿನ ನಡೆಯುತ್ತಿದೆ,ʼ ಎಂದು ಒಬ್ಬ ಅರ್ಜಿದಾರರು ಹೇಳಿದರೆ, ಇನ್ನೊಬ್ಬರು ʻನೆರೆಹೊರೆಯಲ್ಲಿರುವ ಒಂದು ಮನೆ ಹೇಗೆ ಅನಧಿಕೃತವಾಗುತ್ತದೆ ಎಂದು ಕೇಳಿದರು. 

ಗಲಭೆ ಮತ್ತು ಹಿಂಸಾಚಾರದ ಪ್ರಕರಣಗಳಲ್ಲಿ ಆರೋಪಿಗಳ ಆಸ್ತಿಗಳನ್ನು ಧ್ವಂಸ ಮಾಡದಂತೆ ವಿವಿಧ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜಮಿಯ ಉಲಾಮಾ-ಇ-ಹಿಂದ್ ಮತ್ತು ಇತರರು ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. 

ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕೆಲವು ಕಟ್ಟಡಗಳನ್ನು ಕೆಡವಲು ಹಾಗೂ ಉತ್ತರಪ್ರದೇಶದಲ್ಲಿ ಹಿಂಸಾಚಾರದ ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸದಂತೆ ನಿರ್ದೇಶನ ನೀಡುವಂತೆ ಸಲ್ಲಿಸಿತ್ತು.

ಕ್ಷಮೆ ಕೇಳಿ: ಅಖಿಲೇಶ್‌ - ಇಲ್ಲಿಯವರೆಗೆ ಉರುಳಿಸಿದ ಮನೆಗಳು ಮತ್ತು ಕಟ್ಟಡಗಳ ಮಾಲೀಕರ ಕ್ಷಮೆ ಯಾಚಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ʻಆರೋಪಿ ಎಂದ ಮಾತ್ರಕ್ಕೆ ಅವರ ಮನೆಯನ್ನು ಕೆಡವಿದರೆ ಹೇಗೆ? ಬುಲ್ಡೋಜರ್ ಅನ್ನು ಜನರನ್ನು ಹೆದರಿಸಲು ಹಾಗೂ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲು ಬಳಸಲಾಗಿತ್ತು. ಬುಲ್ಡೋಜರ್‌ ನಿಲ್ಲಿಸಿರುವುದಕ್ಕೆ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುತ್ತೇನೆ,ʼ ಎಂದು ಹೇಳಿದರು.

Tags:    

Similar News