Kolkata rape-murder| ವೈದ್ಯಕೀಯ ಸಂಸ್ಥೆಗಳಿಗೆ ರಾಷ್ಟ್ರೀಯ ಶಿಷ್ಟಾಚಾರ: 10 ಸದಸ್ಯರ ಕಾರ್ಯಪಡೆ ರಚನೆ

ʻವೈದ್ಯೆಯರನ್ನು ರಕ್ಷಿಸುವುದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ; ಸಮಾನತೆಯ ತತ್ವವು ಇದಕ್ಕಿಂತ ಕಡಿಮೆ ಇರುವಂಥದ್ದನ್ನು ಒಪ್ಪುವುದಿಲ್ಲʼ ಎಂದು ಮು.ನ್ಯಾ. ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠ ಹೇಳಿದೆ.;

Update: 2024-08-20 08:59 GMT

ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಕೆಲಸದ ಪರಿಸ್ಥಿತಿಯಿಂದ ಹಿಂಸಾಚಾರಕ್ಕೆ ಗುರಿಯಾಗುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಅವರ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಶಿಷ್ಟಾಚಾರ ರೂಪಿಸಲು 10 ಸದಸ್ಯರ ಕಾರ್ಯಪಡೆಯನ್ನು ಮಂಗಳವಾರ (ಆಗಸ್ಟ್ 20) ರಚಿಸಿದೆ.

ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ.ʻ ವೈದ್ಯೆ ಯರನ್ನು ರಕ್ಷಿಸುವುದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ; ಸಮಾನತೆಯ ತತ್ವವು ಇದಕ್ಕಿಂತ ಕಡಿಮೆಯದನ್ನು ಬಯಸುವುದಿಲ್ಲ ಎಂದು ಮು.ನ್ಯಾ. ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ ಹೇಳಿದೆ. 

ʻಪರಿಸ್ಥಿತಿ ಬದಲಾಗಲು ದೇಶ ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಬಾರದು.ವೈದ್ಯಕೀಯ ವೃತ್ತಿಪರರನ್ನು ರಕ್ಷಿಸಲು ಕಾನೂನುಗಳಿವೆ. ಆದರೆ, ಅವು ವ್ಯವಸ್ಥಿತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ,ʼ ಎಂದು ಹೇಳಿದೆ.

10 ಸದಸ್ಯರ ಕಾರ್ಯಪಡೆ: ಕಾರ್ಯಪಡೆಯಲ್ಲಿ ಶಸ್ತ್ರಚಿಕಿತ್ಸಕ ವೈಸ್ ಅಡ್ಮಿರಲ್ ಆರ್‌.ಕೆ. ಸರಿಯಾನ್, ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರಾಲಜಿಯ ವ್ಯವಸ್ಥಾಪಕ ನಿರ್ದೇಶಕ ಡಾ. ರೆಡ್ಡಿ, ದೆಹಲಿಯ ಏಮ್ಸ್ ನಿರ್ದೇಶಕ ಡಾ. ಎಂ. ಶ್ರೀನಿವಾಸ್, ನಿಮ್ಹಾನ್ಸ್ ನ ಡಾ. ಪ್ರತಿಮಾ ಮೂರ್ತಿ ಇದ್ದಾರೆ. ಸಂಪುಟ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ, ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರು ಪದನಿಮಿತ್ತ ಸದಸ್ಯರಾ ಗಿರುತ್ತಾರೆ ಎಂದು ಪೀಠ ಹೇಳಿದೆ. 

ಕಾರ್ಯಪಡೆಗೆ ಕ್ರಿಯಾಯೋಜನೆ: ಟಾಸ್ಕ್ ಫೋರ್ಸ್ ಎರಡು ವಿಷಯ ಕುರಿತು ಕ್ರಿಯಾಯೋಜನೆಗಳನ್ನು ರೂಪಿಸಲಿದೆ: ವೈದ್ಯಕೀಯ ವೃತ್ತಿಪರರ ವಿರುದ್ಧ ಲಿಂಗ ಆಧಾರಿತ ಹಿಂಸಾಚಾರ ಸೇರಿದಂತೆ ಹಿಂಸೆಯನ್ನು ತಡೆಗಟ್ಟುವುದು ಮತ್ತು ಇಂಟರ್ನ್‌ಗಳು, ದಾದಿಯರು, ವೈದ್ಯರಿಗೆ ಘನತೆ ಮತ್ತು ಸುರಕ್ಷಿತ ಕೆಲಸದ ಪರಿಸ್ಥಿತಿಗಾಗಿ ರಾಷ್ಟ್ರೀಯ ಶಿಷ್ಟಾಚಾರವನ್ನು ರೂಪಿಸುವುದು.

ಮೊದಲ ಕ್ರಿಯಾಯೋಜನೆಯು ಆಸ್ಪತ್ರೆಗಳಲ್ಲಿ ಸುರಕ್ಷತೆ, ಮೂಲಸೌಕರ್ಯ ಅಭಿವೃದ್ಧಿ, ಸಂಕಷ್ಟ ಮತ್ತು ಬಿಕ್ಕಟ್ಟಿನ ಸಮಾಲೋಚನೆಯಲ್ಲಿ ತರಬೇತಿ ಪಡೆದ ಸಮಾಜ ಕಲ್ಯಾಣ ಕಾರ್ಯಕರ್ತರ ನೇಮಕ ಹಾಗೂ ದುಃಖ-ಬಿಕ್ಕಟ್ಟನ್ನು ನಿಭಾಯಿಸುವ ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ.

ಪರಿಸ್ಥಿತಿಯ ತುರ್ತು ಮತ್ತು ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪಡೆಯು ಎಲ್ಲ ಮಧ್ಯಸ್ಥಗಾರರನ್ನು ಸಂಪರ್ಕಿಸಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ತಡೆ ಕಾಯ್ದೆಗೆ ಸೂಕ್ತವಾದ ಹೆಚ್ಚುವರಿ ಸಲಹೆಗಳನ್ನು ಕಾರ್ಯಪಡೆ ನೀಡಬಹುದು ಮತ್ತು ತನ್ನ ಶಿಫಾರಸುಗಳನ್ನು ಎಷ್ಟು ಸಮಯದೊಳಗೆ ಕಾರ್ಯಗತಗೊಳಿಸಬೇಕು ಎಂದು ಸೂಚಿಸಬೇಕು ಎಂದು ಸುಪ್ರೀಂ ಹೇಳಿದೆ. 

ಸಿಬಿಐ, ಪಶ್ಚಿಮ ಬಂಗಾಳ ಸರ್ಕಾರದಿಂದ ವಸ್ತುಸ್ಥಿತಿ ವರದಿ: ಸಿಬಿಐ ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯ ವಸ್ತುಸ್ಥಿತಿ ವರದಿ ಯನ್ನು ಆಗಸ್ಟ್ 22 ರೊಳಗೆ ಸಲ್ಲಿಸುವಂತೆ ಮತ್ತು ಆರ್‌.ಜಿ. ಕರ್ ಆಸ್ಪತ್ರೆಯ ಮೇಲಿನ ಗುಂಪು ದಾಳಿ ತನಿಖೆ ಕುರಿತು ಆಗಸ್ಟ್ 22 ರೊಳಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

Tags:    

Similar News