Satish Dhawan Space Centre: ಶ್ರೀಹರಿಕೋಟಾದಲ್ಲಿ ನಿರ್ಮಾಣವಾಗಲಿದೆ 3ನೇ ರಾಕೆಟ್ ಲಾಂಚ್ ಪ್ಯಾಡ್
Satish Dhawan Space Centre: ಮೂರನೇ ಲಾಂಚ್ ಪ್ಯಾಡ್ ಮಾನವ ಸಹಿತ ಬಾಹ್ಯಾಕಾಶ ಸಂಶೋಧನೆ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಲ್ಲಿಂದಲೇ ಆ ರಾಕೆಟ್‌ಗಳು ಉಡಾವಣೆಗೊಳ್ಳಲಿವೆ.;
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಪ್ಯಾಡ್ (ಟಿಎಲ ಪಿ) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಮೂರನೇ ಉಡಾವಣಾ ಪ್ಯಾಡ್ ಯೋಜನೆಯು ಇಸ್ರೋದ ಮುಂದಿನ ಪೀಳಿಗೆಯ ಉಡಾವಣಾ ವಾಹನಗಳಿಗೆ ಮೂಲಸೌಕರ್ಯ ಕಲ್ಪಿಸುವ ಯೋಜನೆಯಾಗಿದೆ. ಅದೇ ರೀತಿ ಶ್ರೀಹರಿಕೋಟಾದಲ್ಲಿ ಈಗಾಗಲೇ ಇರುವ ಎರಡನೇ ಉಡಾವಣಾ ಪ್ಯಾಡ್‌ಗೆ ಸ್ಟ್ಯಾಂಡ್‌ಬೈ ಉಡಾವಣಾ ಪ್ಯಾಡ್ ಆಗಿಯೂ ಕೆಲಸ ಮಾಡಲಿದೆ. ಇದು ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಾಚರಣೆಗಳಿಗೆ ಉಡಾವಣಾ ಸೌಕರ್ಯವಾಗಲಿದೆ.
ಕಾರ್ಯತಂತ್ರ ಮತ್ತು ಗುರಿ
ಟಿಎಲ್‌ಪಿಯನ್ನು ಸಾಧ್ಯವಾದಷ್ಟು ಸಾರ್ವತ್ರಿಕ ಮತ್ತು ಹೊಂದಿಕೊಳ್ಳಬಹುದಾದ ಸಂರಚನೆಗೆ ಪೂರಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ಅದು ಮುಂದಿನ ಪೀಳಿಗೆಯ ಉಡಾವಣಾ ವಾಹನವಲ್ಲದೆ ಸೆಮಿಕ್ರಯೋಜೆನಿಕ್ ಹಂತ ಹೊಂದಿರುವ ಎಲ್‌ವಿಎಂ 3 ರಾಕೆಟ್‌ಗಳ ಉಡಾವಣೆಗೂ ಪೂರಕವಾಗಿದೆ. ಹೊಸ ಲಾಂಚ್ ಪ್ಯಾಡ್ ಮೂಲಕ ಅಸ್ತಿತ್ವದಲ್ಲಿರುವ ಉಡಾವಣಾ ಸಂಕೀರ್ಣ ಸೌಲಭ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವುದಕ್ಕೆ ಮತ್ತು ಇಸ್ರೋದ ಅನುಭವವನ್ನು ಸಂಪೂರ್ಣವಾಗಿ ವಿನಿಯೋಗಿಸಲು ಸಾಧ್ಯವಿದೆ ಎನ್ನಲಾಗಿದೆ.
ಟಿಎಲ್‌ಪಿಯನ್ನು 48 ತಿಂಗಳು ಅಥವಾ 4 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸುವ ಯೋಜನೆಯಿದೆ.
ಯೋಜನಾ ವೆಚ್ಚ
ಒಟ್ಟು 3984.86 ಕೋಟಿ ರೂ.ಗಳಲ್ಲಿ ಈ ಲಾಂಚ್‌ಪ್ಯಾಡ್ ನಿರ್ಮಾಣವಾಗಲಿದೆ. ಇದರಲ್ಲಿ ಉಡಾವಣಾ ಪ್ಯಾಡ್ ಸ್ಥಾಪನೆ ಮತ್ತು ಇತರ ಸೌಲಭ್ಯಗಳು ಸೇರಿಕೊಂಡಿವೆ. ಈ ಯೋಜನೆಯು ಬಾಹ್ಯಾಕಾಶ ಕೇಂದ್ರಕ್ಕೆ ಹೆಚ್ಚಿನ ಉಡಾವಣಾ ಸಾಮರ್ಥ್ಯವನ್ನು ಒದಗಿಸಲಿದೆ. ಜತೆಗೆ ಮಾನವ ಸಹಿತ ಬಾಹ್ಯಾಕಾಶ ಯಾನದ ರಾಕೆಟ್‌ಗಳನ್ನು ಉಡಾಯಿಸಲು ನೆರವಾಗಲಿದೆ. ಹೀಗಾಗಿ ಲಾಂಚ್ ಪ್ಯಾಡ್ ನಿರ್ಮಾಣದ ಬಳಿಕ ಭಾರತದ ಬಾಹ್ಯಾಕಾಶ ಸಾಧನೆ ಇನ್ನಷ್ಟು ಹೆಚ್ಚಾಗಲಿದೆ.
ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರ ಎರಡು ಉಡಾವಣಾ ಪ್ಯಾಡ್‌ಗಳ ಮೇಲೆ ಅವಲಂಬಿತವಾಗಿವೆ. ಮೊದಲ ಉಡಾವಣಾ ಪ್ಯಾಡ್ (ಎಫ್‌ಎಲ್‌ಪಿ) ಮತ್ತು ಎರಡನೇ ಉಡಾವಣಾ ಪ್ಯಾಡ್ (ಎಸ್‌ಎಲ್ ಪಿ) ಸೇವೆಗೆ ಲಭ್ಯವಿದೆ. ಎಫ್ಎಲ್‌ಪಿಯನ್ನು (ಮೊದಲ ಲಾಂಚ್ ಪ್ಯಾಡ್) 30 ವರ್ಷಗಳ ಹಿಂದೆ ನಿರ್ಮಿಸಲಾಯಿತು ಮತ್ತು ಪಿಎಸ್ಎಲ್‌ವಿ ಮತ್ತು ಎಸ್ಎಸ್ಎಲ್‌ವಿ ರಾಕೆಟ್‌ಗಳನ್ನುಉಡಾಯಿಸಲು ಸಾಧ್ಯವಾಗುತ್ತಿದೆ. ಎಸ್ಎಲ್‌ವಿಯ (ಎರಡನೇ ಪ್ಯಾಡ್) ಜಿಎಸ್ಎಲ್‌ವಿ ಮತ್ತು ಎಲ್‌ವಿಎಂ3 ಉಡಾವಣಾ ರಾಕೆಟ್‌ಗಳಿಗಾಗಿ ನಿರ್ಮಿಸಲಾಗಿದೆ. ಜತೆಗೆ ಪಿಎಸ್ಎಲ್‌ವಿಗೆ ಸ್ಟ್ಯಾಂಡ್‌ಬೈ ಆಗಿಯೂ ಕಾರ್ಯನಿರ್ವಹಿಸುತ್ತದೆ. ಎಸ್ಎಲ್‌ವಿ ಸುಮಾರು 20 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಚಂದ್ರಯಾನ -3 ಮಿಷನ್ ಕೂಡ ಇಲ್ಲಿಂದಲೇ ಆರಂಭಿಸಲಾಗಿದೆ.
2035 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ (ಬಿಎಎಸ್) ಮತ್ತು 2040 ರ ವೇಳೆಗೆ ಭಾರತದ ಮಾನವ ಸಹಿತ ಚಂದ್ರನ ಮೇಲೆ ಲ್ಯಾಂಡಿಂಗ್ ಸೇರಿದಂತೆ ಹಲವಾರು ಯೋಜನೆಗಳನ್ನು ಮಾಡಲಿದೆ. ಅದಕ್ಕೆ ಹೊಸ ಪ್ರೊಪಲ್ಷನ್ ವ್ಯವಸ್ಥೆಗಳೊಂದಿಗೆ ಹೊಸ ತಲೆಮಾರಿನ ಭಾರವಾದ ಉಡಾವಣಾ ವಾಹನಗಳು ಬೇಕಾಗುತ್ತವೆ, ಇದನ್ನು ಅಸ್ತಿತ್ವದಲ್ಲಿರುವ ಉಡಾವಣಾ ಪ್ಯಾಡ್‌ಗಳಿಂದ ಹಾರಿಸಲು ಸಾಧ್ಯವಿಲ್ಲ. ಹೀಗಾಗಿ ಮೂರನೇ ಲಾಂಚ್ ಪ್ಯಾಡ್ ನಿರ್ಮಿಸಲಾಗಿದೆ.