ಆರ್‌ಆರ್‌ಬಿಯಿಂದ ದಸರಾ ಗಿಫ್ಟ್ | ರೈಲ್ವೆ ಇಲಾಖೆಯಿಂದ 8,850 ಹುದ್ದೆಗಳ ಭರ್ತಿ ಪ್ರಕ್ರಿಯೆ ಶುರು
ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಟಿಕೆಟ್ ಸೂಪರ್‌ವೈಸರ್ ಸೇರಿದಂತೆ ಒಟ್ಟು 5,800 ತಾಂತ್ರಿಕೇತರ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದಾಗಿದೆ.
ಸಾಂದರ್ಭಿಕ ಚಿತ್ರ
ಪದವಿ ಹಾಗೂ ಪದವಿ ಪೂರ್ವ ಶಿಕ್ಷಣ ಪೂರೈಸಿದ ನಿರುದ್ಯೋಗಿಗಳಿಗೆ ಭಾರತೀಯ ರೈಲ್ವೆ ಇಲಾಖೆಯು ದಸರಾ ಹಬ್ಬಕ್ಕೆ ಭರ್ಜರಿ ಉದ್ಯೋಗ ಕೊಡುಗೆ ನೀಡಿದೆ. ಒಟ್ಟು 8,850 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ರೈಲ್ವೆ ಇಲಾಖೆಯ ರೈಲ್ವೆ ನೇಮಕಾತಿ ಮಂಡಳಿ (RRB) ಯು ತಾಂತ್ರಿಕೇತರ 8,850 ಹುದ್ದೆಗಳ ನೇಮಕಾತಿಗಾಗಿ ಸೆ.29 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆ ದಿನಾಂಕವಾಗಿದೆ.
ಪದವಿ ಮಟ್ಟದ ಹುದ್ದೆಗಳು
ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಟಿಕೆಟ್ ಸೂಪರ್‌ವೈಸರ್ ಸೇರಿದಂತೆ ಒಟ್ಟು 5,800 ತಾಂತ್ರಿಕೇತರ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದಾಗಿದೆ.
ಪದವಿಪೂರ್ವ ಮಟ್ಟದ ಹುದ್ದೆಗಳು
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಟ್ರೈನ್ಸ್ ಕ್ಲರ್ಕ್ ಸೇರಿದಂತೆ ಒಟ್ಟು 3,050 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ಅರ್ಹತೆ
ಪದವೀಧರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ಹಾಗೂ ಪದವಿಪೂರ್ವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌ನಿಂದ 12ನೇ ತರಗತಿ (ಪಿಯುಸಿ) ಉತ್ತಿರ್ಣರಾಗಿರಬೇಕು.
ಅರ್ಜಿ ಸಲ್ಲಿಕೆ
ರೈಲ್ವೆ ನೇಮಕಾತಿ ಮಂಡಳಿಯು ಸೆ. 29ರಂದು ಅಧಿಸೂಚನೆ ಬಿಡುಗಡೆ ಮಾಡಿದ್ದು, ಪದವಿ ಮಟ್ಟದ ಅಭ್ಯರ್ಥಿಗಳು ಅ.21 ರಂದು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಅ.28 ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಪದವಿ ಪೂರ್ವ ಮಟ್ಟದ ಅಭ್ಯರ್ಥಿಗಳು ಅ.28 ರಂದು ಅರ್ಜಿ ಸಲ್ಲಿಸಲುನ ಅವಕಾಶ ನೀಡಿದ್ದು, ನ. 27 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ವಯೋಮಿತಿ ಮತ್ತು ವಿಶೇಷ ಸಡಿಲಿಕೆ
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವರ್ಗವಾರು ವಯೋಮಿತಿ ಸಡಿಲಿಕೆ ಕೂಡ ಲಭ್ಯವಿದೆ. ಹಿಂದುಳಿದ ವರ್ಗಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ. ವಿಶೇಷವಾಗಿ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಒಂದು ಬಾರಿಯ ಕ್ರಮವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಕರ್ಷಕ ವೇತನ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಉತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಪದವಿ ಮಟ್ಟದ ಹುದ್ದೆಗಳಾದ ಟಿಕೆಟ್ ಮೇಲ್ವಿಚಾರಕರು, ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಮಾಸಿಕ 35,400 ರೂಪಾಯಿ ಹಾಗೂ ದ್ವಿತೀಯ ಪಿಯುಸಿ ಮಟ್ಟದ ಕಿರಿಯ ಮತ್ತು ಹಿರಿಯ ಲಿಪಿಕ ಹುದ್ದೆಗಳಿಗೆ ಮಾಸಿಕ 29,200 ರೂಪಾಯಿ ಸಂಬಳ ದೊರೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ತಮ್ಮ ಪ್ರಾದೇಶಿಕ ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ಕರ್ನಾಟಕದ ಸ್ಪರ್ಧಾರ್ಥಿಗಳು ಬೆಂಗಳೂರು ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್: www.rrbbnc.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.