RG Kar rape-murder: ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಬಿಜೆಪಿ ಮಾಜಿ ಸಂಸದ, ಇಬ್ಬರು ವೈದ್ಯರಿಗೆ ಪೊಲೀಸರು ಸಮನ್ಸ್

Update: 2024-08-18 13:05 GMT
ಲಾಕೆಟ್ ಚಟರ್ಜಿ
Click the Play button to listen to article

ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆಯ ಗುರುತು ಹಾಗೂ ವದಂತಿಯನ್ನು ಹರಡಿಸಿರುವ ಆರೋಪದ ಮೇಲೆ ಬಿಜೆಪಿಯ ಮಾಜಿ ಸಂಸದ ಲಾಕೆಟ್ ಚಟರ್ಜಿ ಮತ್ತು ಇಬ್ಬರು ಖ್ಯಾತ ವೈದ್ಯರಿಗೆ ಕೋಲ್ಕತ್ತಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಮೂವರ ಹೊರತಾಗಿ, ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಪೊಲೀಸರು ಇತರ 57 ಮಂದಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಗೆ ಹಾಜರಾಗುವಂತೆ ಡಾ.ಕುನಾಲ್ ಸರ್ಕಾರ್ ಮತ್ತು ಡಾ.ಸುಬರ್ಣಾ ಗೋಸ್ವಾಮಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತಸ್ತ್ರ ಗುರುತನ್ನು ಬಹಿರಂಗಪಡಿಸಿದ ಮತ್ತು ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ವೈದ್ಯರ ಪ್ರತಿಕ್ರಿಯೆ 

ಖ್ಯಾತ ಹೃದ್ರೋಗ ತಜ್ಞ ಡಾ.ಸರ್ಕಾರ್ ಅವರಿಗೆ ಸಮನ್ಸ್ ನೋಟಿಸ್‌ ನೀಡಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಸರ್ಕಾರ್, “ಹೌದು, ನನಗೆ ಸಮನ್ಸ್ ಬಂದಿದೆ. ಆದರೆ ಸದ್ಯಕ್ಕೆ ನಾನು ಊರಿನಿಂದ ಹೊರಗಿದ್ದು, ಕೋಲ್ಕತ್ತಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರು ನನ್ನನ್ನು ಏಕೆ ಕರೆದಿದ್ದಾರೆಂದು ನನಗೆ ತಿಳಿದಿಲ್ಲ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಕೆಲವು ಕಾಮೆಂಟ್‌ಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ ಎಂದು ತೋರುತ್ತದೆ ... ಬಹುಶಃ ಅದಕ್ಕೆ ಕಾರಣವಾಗಿರಬಹುದು ”ಎಂದು ಸರ್ಕಾರ್ ತಿಳಿಸಿದ್ದಾರೆ.

ಪುರ್ಬಾ ಬರ್ಧಮಾನ್ ಜಿಲ್ಲೆಯ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಗೋಸ್ವಾಮಿ ಅವರು ಇನ್ನೂ ಯಾವುದೇ ಸಮನ್ಸ್ ಸ್ವೀಕರಿಸಿಲ್ಲ ಎಂದು ಹೇಳಿದರು. "ಕೋಲ್ಕತ್ತಾ ಪೊಲೀಸರು ಪ್ರಕರಣದ ತನಿಖೆ ನಡೆಸದಿರುವಾಗ ನನಗೆ ಏಕೆ ಸಮನ್ಸ್ ನೀಡುತ್ತಾರೆ ಎಂದು ನನಗೆ ತಿಳಿದಿಲ್ಲ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದೇನೆ. ನಾನು ಸಂತ್ರಸ್ತೆ ಗುರುತನ್ನು ಬಹಿರಂಗಪಡಿಸಿಲ್ಲ ಅಥವಾ ಯಾವುದೇ ವದಂತಿಯನ್ನು ಹರಡಿಲ್ಲ ಎಂದು ಹೇಳಿದ್ದಾರೆ.

"ಹೆಣ್ಣಿಗೆ ನ್ಯಾಯ ಬೇಕು"

ಹೂಗ್ಲಿ ಕ್ಷೇತ್ರದ ಬಿಜೆಪಿಯ ಮಾಜಿ ಸಂಸದ ಚಟರ್ಜಿ ಅವರು ಇನ್ನೂ ಯಾವುದೇ ಸಮನ್ಸ್ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. “ಕೋಲ್ಕತ್ತಾ ಪೊಲೀಸರು ಪ್ರಕರಣವನ್ನು ತನಿಖೆ ಮಾಡುವಾಗ ಅದೇ ಚುರುಕುತನವನ್ನು ತೋರಿಸಿದ್ದರೆ ಉತ್ತಮವಾಗಿತ್ತು. ಎಲ್ಲರೂ ಹುಡುಗಿಗೆ ನ್ಯಾಯವನ್ನು ಬಯಸುತ್ತಾರೆ ಎಂದು ಅವರು ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್, ಸಾಕಷ್ಟು ವದಂತಿಗಳು ನಡೆಯುತ್ತಿವೆ. ಇದು ಅವರ ತನಿಖೆಯ ಮೇಲೆ ಪರಿಣಾಮ ಬೀರಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ತಿಳಿಸಿದ್ದರು.

Tags:    

Similar News