ರತ್ನಗಿರಿ: ನರ್ಸಿಂಗ್ ಟ್ರೈನಿ ಅತ್ಯಾಚಾರ, ಸ್ಥಳೀಯರಿಂದ ರಸ್ತೆ ತಡೆ
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಆಟೋರಿಕ್ಷಾ ಚಾಲಕನೊಬ್ಬ ನರ್ಸಿಂಗ್ ಟ್ರೈನಿಯ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ ನೂರಾರು ಸ್ಥಳೀಯರು, ಬೀದಿಗಿಳಿದು ಪ್ರತಿಭಟಿಸಿದರು.
ಚಾಲಕ ಸಂತ್ರಸ್ತೆ(19)ಯನ್ನು ಮನೆಗೆ ಕರೆದೊಯ್ಯುವಾಗ ಅಪರಾಧ ಎಸಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಕೊಟ್ಟ ನೀರು ಕುಡಿದ ನಂತರ ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡರು. ಆನಂತರ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಪ್ರಜ್ಞೆ ಮರಳಿದ ನಂತರ ಯುವತಿ ಕುಟುಂಬಕ್ಕೆ ದೂರವಾಣಿ ಕರೆ ಮಾಡಿದ್ದು, ಅವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರಿಂದ ಪ್ರತಿಭಟನೆ: ಅತ್ಯಾಚಾರಿಯನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ರಾತ್ರಿ ಹಲವು ಗಂಟೆ ಕಾಲ ರಸ್ತೆ ತಡೆ ನಡೆಸಿದರು. ಅಪರಾಧಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ, ದಾದಿಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆ ಹೊರಗೆ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ಸಿಬ್ಬಂದಿ ಇತರರೊಂದಿಗೆ ರತ್ನಗಿರಿಯ ಹಲವು ಪ್ರದೇಶಗಳಲ್ಲಿ ಸಂಚಾರಕ್ಕೆ ತಡೆ ಒಡ್ಡಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.
ಕೋಲ್ಕತ್ತಾದಲ್ಲಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ನಲ್ಲಿ ಇಬ್ಬರು ಶಿಶುವಿಹಾರದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ನಂತರ ರತ್ನಗಿರಿ ಘಟನೆ ನಡೆದಿದೆ.