ವಿಂಗ್ ಕಮಾಂಡರ್​ ವ್ಯೋಮಿಕಾ ಸಿಂಗ್‌ ಜಾತಿ ಪ್ರಸ್ತಾಪ, ಎಸ್​ಪಿ ನಾಯಕನ ವಿರುದ್ಧ ಆಕ್ರೋಶ

ಸಿಎಂ ಆದಿತ್ಯನಾಥ್, ಎಸ್​​ಪಿ ನಾಯಕ ಯಾದವ್‌ ಹೇಳಿಕೆಯನ್ನು 'ಸಂಕುಚಿತ ಮನೋಭಾವ' ಎಂದು ಕರೆದರೆ, ಬಿಎಸ್​ಪಿ ನಾಯಕಿ ಮಾಯಾವತಿ ಎಸ್‌ಪಿ ಮತ್ತು ಬಿಜೆಪಿ ಎರಡನ್ನೂ ಖಂಡಿಸಿದ್ದಾರೆ.;

Update: 2025-05-16 05:12 GMT

ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಗುರುವಾರ (ಮೇ 15) ನೀಡಿದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸಚಿವರು, ಕರ್ನಲ್ ಸೋಫಿಯಾ ಕುರೇಶಿಯವರನ್ನು ಮುಸ್ಲಿಂ ಎಂಬ ಕಾರಣಕ್ಕೆ ಟೀಕಿಸಿದರು. ಆದರೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ರನ್ನು ರಜಪೂತ್ ಎಂದು ಭಾವಿಸಿ ಟೀಕಿಸಲಿಲ್ಲ ಎಂದು ಯಾದವ್ ಹೇಳಿಕೆ ನೀಡಿದ್ದಾರೆ. ಇದು ಸೇನೆಯಲ್ಲಿರುವವರಿಗೆ ಜಾತಿ ಬಣ್ಣ ಲೇಪನ ಎಂದು ಆರೋಪಿಸಲಾಗಿದೆ. .

ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಶಸ್ತ್ರ ಪಡೆಗಳ ಸಮವಸ್ತ್ರವನ್ನು 'ಜಾತೀಯ ಕನ್ನಡಕ'ದಿಂದ ನೋಡಲಾಗುವುದಿಲ್ಲ. ಪ್ರತಿಯೊಬ್ಬ ಸೈನಿಕನೂ 'ರಾಷ್ಟ್ರಧರ್ಮ'ವನ್ನು ಪಾಲಿಸುತ್ತಾನೆ ಹೊರತು ಯಾವುದೇ ಜಾತಿ ಅಥವಾ ಧರ್ಮದ ಪ್ರತಿನಿಧಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಕರ್ನಲ್ ಸೋಫಿಯಾ ಕುರೇಶಿಯವರೊಂದಿಗೆ 'ಆಪರೇಷನ್ ಸಿಂದೂರ್'ಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಗಳಲ್ಲಿ ನಿಯಮಿತವಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರು ಸುದ್ದಿಯಲ್ಲಿದ್ದಾರೆ.

ಬಿಜೆಪಿಯ ತಿರಂಗಾ ಯಾತ್ರೆಗೆ ಯಾದವ್ ಟೀಕೆ

ಬಿಜೆಪಿ ದೇಶಾದ್ಯಂತ ಆಯೋಜಿಸುತ್ತಿರುವ ತಿರಂಗಾ ಯಾತ್ರೆಯನ್ನೂ ಯಾದವ್ ಟೀಕಿಸಿದರು. ಮೊರಾದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, "ಈ ಜನರು (ಬಿಜೆಪಿ) ತಿರಂಗಾ ಯಾತ್ರೆ ಮಾಡುತ್ತಿದ್ದಾರೆ... ಇದೆಲ್ಲವನ್ನೂ ಚುನಾವಣೆಗಾಗಿ ಮಾತ್ರ ಮಾಡುತ್ತಾರೆ. ತಿರಂಗಾ ಯಾತ್ರೆಯ ಅಗತ್ಯವೇನು? ಅಗತ್ಯವಿದ್ದರೆ ಇಡೀ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಎಲ್ಲ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಪರೇಷನ್ ಸಿಂದೂರ್‌ನಲ್ಲಿ ಹೋರಾಡುತ್ತಿರುವವರು ಬಿಜೆಪಿಯವರೇ?" ಎಂದು ಪ್ರಶ್ನಿಸಿದರು.

ವಿಜಯ್​ ಶಾ ಹೇಳಿಕೆಗೆ ಟೀಕೆ

ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಕರ್ನಲ್ ಕುರೇಶಿ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಉಲ್ಲೇಖಿಸಿ, " ಸಚಿವರೊಬ್ಬರು ಕರ್ನಲ್ ಖುರೇಶಿಯವರನ್ನು ನಿಂದಿಸಿದ್ದಾರೆ. ಹೈಕೋರ್ಟ್ ಮತ್ತೆ ಅವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದರೆ ವ್ಯೋಮಿಕಾ ಸಿಂಗ್ ಯಾರೆಂದು ಅವರಿಗೆ ಗೊತ್ತಿರಲಿಲ್ಲ, ಏರ್ ಮಾರ್ಷಲ್ ಎಕೆ ಭಾರ್ತಿ ಬಗ್ಗೆಯೂ ಗೊತ್ತಿರಲಿಲ್ಲ, ಇಲ್ಲದಿದ್ದರೆ ಅವರನ್ನೂ ನಿಂದಿಸುತ್ತಿದ್ದರು," ಎಂದರು.

"ನಾನು ಹೇಳುತ್ತೇನೆ, ವ್ಯೋಮಿಕಾ ಸಿಂಗ್ ಹರಿಯಾಣದ ಜಾಟ್​​ ಮತ್ತು ಏರ್ ಮಾರ್ಷಲ್ ಭಾರತಿ ಪೂರ್ಣಿಯಾದ ಯಾದವ್. ಆದ್ದರಿಂದ ಮೂವರೂ ಪಿಡಿಎ (ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು) ಗುಂಪಿಗೆ ಸೇರಿದವರು. ಒಬ್ಬರನ್ನು ಮುಸ್ಲಿಂ ಎಂದು ನಿಂದಿಸಲಾಯಿತು. ಇನ್ನೊಬ್ಬರನ್ನು ರಾಜಪೂತ್ ಎಂದು ಭಾವಿಸಿ ಬಿಟ್ಟುಬಿಟ್ಟರು ಮತ್ತು ಭಾರ್ತಿಯ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಏನು ಮಾಡಬೇಕೆಂದು ಯೋಚಿಸಬೇಕಾಗಿದೆ," ಎಂದು ಹೇಳಿದರು.

ಮನಸ್ಥಿತಿ ಕೆಟ್ಟದ್ದಾಗಿದ್ದರೆ, ಸೇನೆಯ ಸಾಧನೆಗಳ ಬಗ್ಗೆ ಮಾತನಾಡುವ ಬದಲು ಜನರು ತಮ್ಮದೇ ಸಾಧನೆಗಳ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ ಎಂದು ಎಸ್‌ಪಿ ಸಂಸದರು ಅಭಿಪ್ರಾಯಪಟ್ಟರು.

ಸಂಕುಚಿತ ಮನಸ್ಸು': ಯೋಗಿ ಆದಿತ್ಯನಾಥ್

ಯಾದವ್ ಅವರ ಟೀಕೆಯು ಅವರ ಸಂಕುಚಿತ ಮನೋಭಾವ ಚಿಂತನೆಯನ್ನು ತೋರಿಸುತ್ತದೆ ಮತ್ತು ಭಾರತೀಯ ಸೇನೆಯ ಗೌರವಕ್ಕೆ ವಿರುದ್ಧವಾಗಿದೆ ಎಂದು ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದರು.

ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಅವರು, "ಸೇನೆಯ ಸಮವಸ್ತ್ರವನ್ನು 'ಜಾತೀಯ ಕನ್ನಡಕ'ದಿಂದ ನೋಡಲಾಗುವುದಿಲ್ಲ. ಭಾರತೀಯ ಸೇನೆಯ ಪ್ರತಿಯೊಬ್ಬ ಸೈನಿಕನೂ 'ರಾಷ್ಟ್ರಧರ್ಮ'ವನ್ನು ನಿರ್ವಹಿಸುತ್ತಾನೆ ಮತ್ತು ಯಾವುದೇ ಜಾತಿ ಅಥವಾ ಧರ್ಮದ ಪ್ರತಿನಿಧಿಯಲ್ಲ. ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಧೀರ ಯೋಧರೊಬ್ಬರನ್ನು ಜಾತಿಯ ಸೀಮೆಯಲ್ಲಿ ಕಟ್ಟಿಹಾಕುವುದು ಅವರ ಪಕ್ಷದ ಸಂಕುಚಿತ ಚಿಂತನೆಯ ಪ್ರದರ್ಶನ ಎಂದು ಬರೆದುಕೊಂಡಿದ್ದಾರೆ.

ಮಾಯಾವತಿಯಿಂದ ಎಸ್‌ಪಿ ಮತ್ತು ಬಿಜೆಪಿಗೆ ಟೀಕೆ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಎಸ್‌ಪಿ ಮತ್ತು ಬಿಜೆಪಿ ಎರಡನ್ನೂ ಟೀಕಿಸಿದ್ದಾರೆ., ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, "ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂದೂರ್‌ನ ವೀರತ್ವದಿಂದ ಇಡೀ ದೇಶ ಒಗ್ಗಟ್ಟಾಗಿದೆ ಮತ್ತು ಹೆಮ್ಮೆಪಡುತ್ತಿದೆ. ಇಂತಹ ಸಂದರ್ಭದಲ್ಲಿ, ಸೇನೆಯನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ವಿಂಗಡಿಸುವುದು/ನಿರ್ಣಯಿಸುವುದು ಅನ್ಯಾಯವಾಗಿದೆ. ಬಿಜೆಪಿ ಸಚಿವರು ಮಾಡಿದ ತಪ್ಪನ್ನೇ ಎಸ್‌ಪಿಯ ಹಿರಿಯ ನಾಯಕರೂ ಇಂದು ಮಾಡಿದ್ದಾರೆ, ಇದು ಖಂಡನೀಯವಾಗಿದೆ," ಎಂದಿದ್ದಾರೆ. 

Tags:    

Similar News