ಔರಂಗಜೇಬ್ ಸಮಾಧಿ ವಿವಾದ: ವಾಟ್ಸ್​​ಆ್ಯಪ್ ಇತಿಹಾಸ ಓದಬೇಡಿ ಎಂದು ಎಚ್ಚರಿಸಿದ ರಾಜ್ ಠಾಕ್ರೆ

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಯೋಜನೆಯಾದ ವಾರ್ಷಿಕ ಗುಡಿ ಪಾಡ್ವಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ವಾಟ್ಸ್​​ಆ್ಯಪ್​ ಫಾರ್ವರ್ಡ್‌ ಆದ ಸಂದೇಶಗಳ ಮೂಲಕ ಇತಿಹಾಸ ಅರಿಯುವ ಪ್ರವೃತ್ತಿಯಿಂದ ಮನುಕುಲಕ್ಕೆ ಹಾನಿ ಎಂದರು;

Update: 2025-03-31 08:45 GMT

ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಅಧ್ಯಕ್ಷ ರಾಜ್ ಠಾಕ್ರೆ ಅವರು ಭಾನುವಾರ ಔರಂಗಜೇಬ್ ಸಮಾಧಿಯ ಕುರಿತು ಧಾರ್ಮಿಕ ವೈಷಮ್ಯ ಸೃಷ್ಟಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಖಂಡಿಸಿದರು. ಇತಿಹಾಸವನ್ನು ಜಾತಿ ಮತ್ತು ಧರ್ಮದ ಕಣ್ಣಿನಿಂದ ನೋಡುವ ಬದಲು, ವಿಶ್ವಾಸಾರ್ಹ ಮೂಲಗಳಿಂದ ಅಧ್ಯಯನ ಮಾಡಬೇಕೆಂದು ಅವರು ಸಲಹೆ ನೀಡಿದರು.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಯೋಜನೆಯಾದ ವಾರ್ಷಿಕ ಗುಡಿ ಪಾಡ್ವಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ವಾಟ್ಸ್​​ಆ್ಯಪ್​ ಫಾರ್ವರ್ಡ್‌ ಆದ ಸಂದೇಶಗಳ ಮೂಲಕ ಇತಿಹಾಸ ಅರಿಯುವ ಪ್ರವೃತ್ತಿಯಿಂದ ಮನುಕುಲಕ್ಕೆ ಹಾನಿ ಎಂದರು.

ಔರಂಗಜೇಬ್ ಸಮಾಧಿಯ ಕುರಿತಂತೆ ನಡೆಯುತ್ತಿರುವ ರಾಜಕೀಯ ವಿವಾದ ಛತ್ರಪತಿ ಸಂಭಾಜಿನಗರ ಜಿಲ್ಲೆಯ, ನಾಗ್ಪುರದಲ್ಲಿ ಹಿಂಸೆಗೆ ತಿರುಗಿದ್ದನ್ನು ಅವರು ಟೀಕಿಸಿದರು.

“ನೀರು, ಮರಗಳು ನಮಗೆ ಮುಖ್ಯ. ಔರಂಗಜೇಬ್‌ನ ಸಮಾಧಿ ಮುಖ್ಯವಲ್ಲ. ರಾಜಕಾರಣಿಗಳು ಇತಿಹಾಸದ ಹೆಸರಿನಲ್ಲಿ ಜನರನ್ನು ಲೋಭಕ್ಕೆ ಒಳಪಡಿಸುತ್ತಿದ್ದಾರೆ ಮತ್ತು ಇಂತಹ ವಿಷಯಗಳನ್ನು ಬಳಸಿಕೊಂಡು ದ್ವೇಷ ಉಂಟುಮಾಡುತ್ತಿದ್ದಾರೆ ಎಂದು ರಾಜ್ ಆರೋಪಿಸಿದರು.

ಔರಂಗಜೇಬ್ ಮಹಾರಾಷ್ಟ್ರದಲ್ಲಿ 27 ವರ್ಷಗಳ ಮರಾಠರ ವಿರುದ್ಧ ಹೋರಾಡಿದ್ದ. ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆ ನಾಶಗೊಳಿಸಲು ವಿಫಲರಾಗಿದ್ದ. ಶಿವಾಜಿಯಂತಹ ಒಂದು ಆಲೋಚನೆ ನಿರ್ನಾಮ ಮಾಡಲು ಔರಂಗಜೇಬ ಯತ್ನಿಸಿದ್ದ. ಆದರೆ ಶಿವಾಜಿ ಮಹಾರಾಜ ನಿಧನರಾದರೂ ಅವರ ವಿಚಾರಧಾರೆ ನಾಶ ಮಾಡಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಹೇಳಿದರು.

ಔರಂಗಜೇಬ್ ಸಮಾಧಿ ತೆಗೆದು ಹಾಕಬೇಕೆಂಬ ಕೂಗುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಆ ಸಮಾಧಿ ಬಳಿ ಫಲಕವೊಂದನ್ನು ಇಡಬೇಕು. ಈ ಅರಸನನ್ನು ನಾವು ಕೊಂದಿದ್ದೇವೆ ಎಂದು ಬರೆಯಬೇಕು ಎಂದು,” ಹೇಳಿದರು.

ಅಫ್ಜಲ್ ಖಾನ್ ಸಮಾಧಿ ಬಗ್ಗೆ ಮಾತನಾಡಿದ ಅವರು, “ಅದು ಶಿವಾಜಿ ಮಹಾರಾಜರ ಅನುಮತಿ ಇದ್ದೇ ನಿರ್ಮಾಣವಾಗಿದೆ. ಇತಿಹಾಸವನ್ನು ಸಮಯ ಮತ್ತು ಸನ್ನಿವೇಶದ ತಳಹದಿಯಲ್ಲಿ ಅರ್ಥಮಾಡಿಕೊಳ್ಳಬೇಕು. ಅದನ್ನು ಧರ್ಮದ ವಿರುದ್ಧ ಪ್ರಯೋಗಿಸಬಾರದು ಎಂದು ಹೇಳಿದರು.

ಸಿನಿಮಾ ನೋಡಿ ಇತಿಹಾಸ ಅರಿಯುವವರನ್ನು ಟೀಕಿಸಿದ, ಚಿತ್ರಗಳನ್ನು ನೋಡಿ ಜಾಗೃತರಾದ ಹಿಂದೂಗಳು ಉಪಯೋಗಕ್ಕೆ ಸಿಗುವುದಿಲ್ಲ. ವಿಕ್ಕಿ ಕೌಶಲ್ ಮೂಲಕ ಸಂಭಾಜಿ ಮಹಾರಾಜರ ತ್ಯಾಗ ಗೊತ್ತಾಯಿತೇ ಅಥವಾ ಅಕ್ಷಯ್ ಖನ್ನಾ ಮೂಲಕ ಔರಂಗಜೇಬ್‌ನ ಬಗ್ಗೆ ತಿಳಿದುಕೊಂಡರೇ? ಎಂದು ಇತ್ತೀಚೆಗೆ ಬಿಡುಗಡೆಗೊಂಡ ಛಾವಾ ಚಿತ್ರದ ಬಗ್ಗೆ ಮಾತನಾಡಿದರು.

ಭಾರತ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಮುಂದುವರಿಯದು ಸರಿಯಲ್ಲ. ಧರ್ಮವನ್ನು ಮನೆ ಮನೆಯಲ್ಲಿ ನಿರ್ಮಿಸಬೇಕು. ಮುಸ್ಲಿಮರು ಬೀದಿಗೆ ಬಂದಾಗ ಅಥವಾ ಗಲಭೆಯ ಸಮಯದಲ್ಲಿ ಹಿಂದೂಗಳು ತಮ್ಮನ್ನು ತಾವು ''ಹಿಂದೂ'' ಎಂದು ಗುರುತಿಸಿಕೊಳ್ಳುವುದು ಯಾಕೆ? ಉಳಿದ ಸಮಯದಲ್ಲಿ ಅವರು ಜಾತಿಗಳಲ್ಲಿ ವಿಭಜಿತಗೊಂಡಿರುತ್ತಾರೆ,” ಎಂದರು.

ಇದೇ ವೇಳೆ ಅವರು, ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ವಿರುದ್ಧವೂ ಅವರು ಕಿಡಿಕಾರಿದರು. ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್’ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಅನುದಾನ ಹೆಚ್ಚಿಸುವ ಭರವಸೆ ನೀಡಿದ್ದರೂ, ಅದನ್ನು ಈವರೆಗೆ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು.

ಮರಾಠಿ ಭಾಷೆ ಬಳಕೆಯ ಅಗತ್ಯ ಒತ್ತಿಹೇಳಿದ ಅವರು, “ಇಲ್ಲಿ ವಾಸವಿರುವವರು ಮರಾಠಿಯಲ್ಲಿ ಮಾತನಾಡಲೇಬೇಕು. ಇಲ್ಲದಿದ್ದರೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ,” ಎಂದು ಎಚ್ಚರಿಸಿದರು. 

Tags:    

Similar News