ಹತ್ರಾಸ್ ಕಾಲ್ತುಳಿತ: ಸರ್ಕಾರದಿಂದ ಲೋಪ- ರಾಹುಲ್
ಹತ್ರಾಸ್‌ನಲ್ಲಿ ಜುಲೈ 2 ರಂದು ನಡೆದ ಸತ್ಸಂಗದಲ್ಲಿ ಕಾಲ್ತುಳಿತದಿಂದ 121 ಮಂದಿ ಮೃತಪಟ್ಟರು.;
ಹತ್ರಾಸ್ ಘಟನೆಯನ್ನು ರಾಜಕೀಯಕ್ಕೆ ಬಳಸುವುದಿಲ್ಲ. ಆದರೆ, ಆಡಳಿತದ ಕಡೆಯಿಂದ ಲೋಪಗಳಾಗಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ (ಜುಲೈ 5) ಹೇಳಿದರು.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದ ಸಂತ್ರಸ್ತರನ್ನು ಶುಕ್ರವಾರ ಬೆಳಗ್ಗೆ (ಜುಲೈ 5) ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ʻಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನೂರಾರು ಜನ ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿ. ನಾನು ರಾಜಕೀಯ ಮಾಡಲು ಬಯಸುವುದಿಲ್ಲ. ಆದರೆ, ಆಡಳಿತದ ಕಡೆಯಿಂದ ಕೆಲವು ಲೋಪಗಳಾಗಿವೆ, ʼಎಂದು ಹೇಳಿದರು.
ಶುಕ್ರವಾರ ಮುಂಜಾನೆ ದೆಹಲಿಯಿಂದ ಹತ್ರಾಸ್‌ಗೆ ರಸ್ತೆ ಮಾರ್ಗವಾಗಿ ತೆರಳಿದರು. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ, ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನಾಥೆ ಮತ್ತು ಇತರ ಪದಾಧಿಕಾರಿಗಳು ಅವರೊಟ್ಟಿಗೆ ಇದ್ದರು.
ಬೆಳಗ್ಗೆ 9 ಗಂಟೆ ಸುಮಾರಿಗೆ ಹತ್ರಾಸ್‌ನ ವಿಭವ್ ನಗರ ಕಾಲೋನಿಯ ಗ್ರೀನ್ ಪಾರ್ಕ್‌ಗೆ ತಲುಪಿದರು. ಸಂತ್ರಸ್ತ ಕುಟುಂಬಗಳೊಂದಿಗೆ ಸಂವಾದ ನಡೆಸಿದರು.
ಮಂಗಳವಾರ (ಜುಲೈ 2) ಹತ್ರಾಸ್‌ನಲ್ಲಿ ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಅವರ ಸತ್ಸಂಗದಲ್ಲಿ ನಡೆದ ಕಾಲ್ತುಳಿತದಲ್ಲಿ 121 ಮಂದಿ ಸಾವನ್ನಪ್ಪಿದ್ದಾರೆ.