ಅಬಕಾರಿ ಹಗರಣದಲ್ಲಿ ತನಿಖಾ ಸಂಸ್ಥೆಗಳಿಗೆ ಯಾವುದೇ ಪುರಾವೆ ಸಿಕ್ಕಿಲ್ಲ: ಎಎಪಿ

Update: 2024-07-30 07:56 GMT

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಪತ್ತೆಹಚ್ಚುವಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ವಿಫಲವಾಗಿವೆ. ಆಪ್‌ ಒಂದು ಪ್ರಾಮಾಣಿಕ ಪಕ್ಷ ಎಂದು ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಪ್‌ ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಐವರ ವಿರುದ್ಧ ಸಿಬಿಐ ತನ್ನ ಅಂತಿಮ ಆರೋಪ ಪಟ್ಟಿಯನ್ನು ವಿಚಾರಣೆ ನ್ಯಾಯಾಲಯಕ್ಕೆ ಸಲ್ಲಿಸಿದ ಗಂಟೆಗಳ ನಂತರ ಆಪ್‌ ಈಸಂಬಂಧ ಪ್ರತಿಕ್ರಿಯಿಸಿದೆ.

ʻಬಿಜೆಪಿ ಮತ್ತು ಅದರ ಏಜೆನ್ಸಿಗಳು ಎರಡು ವರ್ಷಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದು, 50,000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿವೆ, 500 ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿವೆ, ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿವೆ ಎಂದು ಎಎಪಿ ಹೇಳಿದೆ.

ಪ್ರಾಮಾಣಿಕ ಪಕ್ಷ: ʻಆದರೂ ಅವರು ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾವುದೇ ಪುರಾವೆ ಹುಡುಕುವಲ್ಲಿ ವಿಫಲರಾಗಿ ದ್ದಾರೆ. ಏಕೆಂದರೆ ನಾವು ಪ್ರಾಮಾಣಿಕ ಜನರು. ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ವಿಚಾರಣೆ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಮೂರು ಬಾರಿ ಜಾಮೀನು ನೀಡಿದೆ,ʼ ಎಂದು ಆಪ್‌ ಹೇಳಿದೆ.

ʻಪ್ರತಿದಿನವೂ ಬಿಜೆಪಿ ಮತ್ತು ಅದರ ಇಡಿ-ಸಿಬಿಐ ಹೊಸ ಚಾರ್ಜ್ ಶೀಟ್‌ಗಳನ್ನು ಸಲ್ಲಿಸುತ್ತಿವೆ. ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಡಲು ಹೊಸ ತಂತ್ರಗಳನ್ನು ಸೃಷ್ಟಿಸಲಾಗುತ್ತಿದೆ. ಸಾಧ್ಯವಾದಷ್ಟು ಹೆಚ್ಚು ಎಎಪಿ ನಾಯಕರನ್ನು ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ,ʼ ಎಂದು ಆರೋಪಿಸಿದೆ.

ಜನಾದೇಶಕ್ಕೆ ಬಿಜೆಪಿ ಮನ್ನಣೆ ನೀಡುವುದಿಲ್ಲ: ಬಿಜೆಪಿಗೆ ದೆಹಲಿಯ ಜನರು ಮತ್ತು ಅವರ ಜನಾದೇಶದ ಬಗ್ಗೆ ಯಾವುದೇ ಗೌರವವಿಲ್ಲ. ಅದರಿಂದಾಗಿಯೇ ಅವರು ಮೂರು ಬಾರಿ ಸಿಎಂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ʻನಕಲಿʼ ಪ್ರಕರಣದಲ್ಲಿ ಬಂಧಿಸಿದ್ದಾರೆ. ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟ ಅಪಾಯಕಾರಿಯಾಗಿ ಕಡಿಮೆಯಾಗಿದೆ ಎಂದು ಹೇಳಿದೆ.

ಜುಲೈ 12 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

Tags:    

Similar News