Priyanka Gandhi|ವಯನಾಡು ಚುನಾವಣೆ: ಪ್ರಿಯಾಂಕ ಗಾಂಧಿಗೆ ಕೇರಳ ಹೈಕೋರ್ಟ್‌ ಸಮನ್ಸ್‌ ಜಾರಿ

ಪ್ರಿಯಾಂಕಾ ಗಾಂಧಿ ವಿರುದ್ಧ ಸಲ್ಲಿಸಲಾದ ಈ ಅರ್ಜಿಯಲ್ಲಿ, ನವೆಂಬರ್ 2024 ರಲ್ಲಿ ನಡೆದ ಉಪಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಲಾಗಿದೆ.;

Update: 2025-06-11 08:53 GMT

ಪ್ರಿಯಾಂಕ ಗಾಂಧಿ 

ಭಾರತೀಯ ಜನತಾ ಪಕ್ಷದ ನಾಯಕಿ ನವ್ಯಾ ಹರಿದಾಸ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಪರಿಗಣಿಸಿ ಕೇರಳ ಹೈಕೋರ್ಟ್ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

2024 ರಲ್ಲಿ ಪ್ರಿಯಾಂಕಾ ಗಾಂಧಿ ವಯನಾಡು ಉಪಚುನಾವಣೆಯಲ್ಲಿ ನವ್ಯಾ ಹರಿದಾಸ್ ಅವರನ್ನು ಸೋಲಿಸುವ ಮೂಲಕ ಗೆದ್ದಿದ್ದರು. ಪ್ರಿಯಾಂಕಾ ಗಾಂಧಿ ವಿರುದ್ಧ ಸಲ್ಲಿಸಲಾದ ಈ ಅರ್ಜಿಯಲ್ಲಿ, ನವೆಂಬರ್ 2024 ರಲ್ಲಿ ನಡೆದ ಉಪಚುನಾವಣೆಯ ಫಲಿತಾಂಶಗಳನ್ನು ಪ್ರಶ್ನಿಸಲಾಗಿದೆ. ಇದರಲ್ಲಿ ಪ್ರಿಯಾಂಕಾ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. 

ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೆ. ಬಾಬು ಅವರ ಪೀಠವು ಅಂಗೀಕರಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್‌ ತಿಂಗಳಿಗೆ ಮುಂದೂಡಲಾಗಿದೆ.  ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಒಡೆತನದ ಹಲವಾರು ಸ್ಥಿರ ಆಸ್ತಿಗಳ ಬಗ್ಗೆ ಮಾಹಿತಿಯನ್ನು ಮರೆಮಾಚಿದ್ದಾರೆ ಅಥವಾ ಬಹಿರಂಗಪಡಿಸಿಲ್ಲ ಎಂದು ನವ್ಯಾ ಹರಿದಾಸ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. 

ಅರ್ಜಿಯಲ್ಲಿ ಏನಿದೆ?

ಪ್ರಿಯಾಂಕಾ, ಮತದಾರರನ್ನು ದಾರಿತಪ್ಪಿಸಲು ಮತ್ತು ಅಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ. ಇದು ಜನತಾ ಪ್ರಾತಿನಿಧ್ಯ ಕಾಯ್ದೆ, 1951 ರ ಅಡಿಯಲ್ಲಿ 'ಭ್ರಷ್ಟ ನಡವಳಿಕೆ' ಎಂದಾಗುತ್ತದೆ. ಪ್ರಿಯಾಂಕಾ ಗಾಂಧಿ ಸಲ್ಲಿಸಿದ ನಾಮಪತ್ರಗಳು, ಚುನಾವಣಾ ಕಾನೂನುಗಳು ಮತ್ತು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿವೆ. ಪ್ರಿಯಾಂಕಾ ಅವರ ಚುನಾವಣಾ ಗೆಲುವನ್ನು ಅಸಿಂಧು ಎಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದರು.

ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಯ್ ಬರೇಲಿ ಸ್ಥಾನಕ್ಕೆ ಆದ್ಯತೆ ನೀಡಿದ್ದರಿಂದ ಈ ಉಪಚುನಾವಣೆ ನಡೆದಿತ್ತು. 

ಭಾರೀ ಅಂತರದಿಂದ ಗೆದ್ದಿರುವ ಪ್ರಿಯಾಂಕ ಗಾಂಧಿ 

ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ವಯನಾಡಿನಿಂದ ಭಾರಿ ಅಂತರದಿಂದ ಗೆದ್ದಿದ್ದರು. ಅವರು ಒಟ್ಟು 6,22,338 ಮತಗಳನ್ನು ಪಡೆದರೆ, ಎಲ್‌ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೇರಿ 2,11,407 ಮತ್ತು ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ 1,09,939 ಮತಗಳನ್ನು ಪಡೆದಿದ್ದರು. ಪ್ರಿಯಾಂಕಾ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.

ಹಾಗಾಗಿ ನವ್ಯಾ ಹರಿದಾಸ್  ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಅದನ್ನು ಕಾನೂನುಬಾಹಿರವೆಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಪರಿಗಣಿಸಿರುವ ನ್ಯಾಯಾಲಯವು ಪ್ರಿಯಾಂಕಾ ಗಾಂಧಿಯವರಿಂದ ಉತ್ತರವನ್ನು ಕೋರಿದೆ. ಅರ್ಜಿಯಲ್ಲಿ ಮಾಡಲಾದ ಆರೋಪಗಳು ಸಾಬೀತಾದರೆ, ಅದು ಪ್ರಿಯಾಂಕಾ ಅವರ ಸಂಸತ್ ಸದಸ್ಯತ್ವದ ಮೇಲೆ ಪರಿಣಾಮ ಬೀರಬಹುದು. 

Tags:    

Similar News