ಯೋಗಿ ಆದಿತ್ಯನಾಥ್ ಹೇಳಿಕೆ ಸೃಷ್ಟಿಸಿದ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ತಾಯಿ ಸಾಯಿಸಿದ ರಜಾಕಾರರು ಯಾರು?
ಕಾವಿ ವೇಷದಲ್ಲಿರುವ ತೋಳ ಎಂಬ ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ತಿರುಗೇಟು ನೀಡಿದ್ದ ಯೋಗಿ ಆದಿತ್ಯನಾಥ್ , ಮುಸ್ಲಿಮರ ದಾಳಿಯಿಂದ ತಾಯಿ, ಸಹೋದರಿಯನ್ನು ಕಳೆದುಕೊಂಡರೂ ಮತಗಳಿಗಾಗಿ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.;
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಡುವಿನ ವಾಕ್ಸಮರ ವೈಯಕ್ತಿಕ ದೂಷಣೆಯ ಹಂತಕ್ಕೆ ತಲುಪಿದೆ. ಖರ್ಗೆ ಅವರು ತಮ್ಮ ಬಾಲ್ಯದಲ್ಲಿ ತಾಯಿ ಮತ್ತು ಸೋದರಿಯನ್ನು ಮುಸ್ಲಿಮರ ದಾಳಿಯಿಂದ ಕಳೆದುಕೊಂಡರು ಎಂದು ಯೋಗಿ ಆದಿತ್ಯನಾಥ್ ಹೇಳಿದರೆ, ಮಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಅವರು ಪ್ರತಿ ಹೇಳಿಕೆ ನೀಡಿ, "ಮುಸ್ಲಿಮರಲ್ಲ, ರಜಾಕಾರರು ಆ ಘಟನೆಗೆ ಕಾರಣ," ಎಂದು ಹೇಳಿದ್ದಾರೆ.
ಉಭಯ ನಾಯಕರ ರಾಜಕೀಯ ಹೇಳಿಕೆಗಳು ರಾಷ್ಟ್ರಾದ್ಯಂತ ಕೆಲವು ವಿಧಾನಸಭೆ ಉಪ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಂದಿದ್ದು, ʼಮುಸ್ಲಿಮರ ತುಷ್ಟೀಕರಣʼ ಸಂಬಂದ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ. ಹಾಗಾದರೆ, ಈ ಚರ್ಚೆಗೆ ಕಾರಣವಾಗಿರುವ "ಖರ್ಗೆ ಅವರ ತಾಯಿ ಮತ್ತು ಸೋದರಿಯ ಸಾವುʼ ಹಾಗೂ ʼರಜಾಕಾರರ ದಾಳಿʼ ಘಟನೆಗಳು ಏನು? ಈ ಬಗ್ಗೆ ವಿವರ ಇಲ್ಲಿದೆ.
ಯಾರು ಈ ರಜಾಕಾರರು?
ಸ್ವಾತಂತ್ರ್ಯಾ ನಂತರ ಹೈದರಾಬಾದ್ ನಿಜಾಮರನ್ನು ಭಾರತದೊಂದಿಗೆ ವಿಲೀನ ಮಾಡುವಂತೆ ಹಿಂದೂಗಳು ಆಂದೋಲನ ನಡೆಸಿದರು. ಆದರೆ, ಹೈದರಾಬಾದ್ ನಿಜಾಮರು ಭಾರತದ ಜೊತೆ ವಿಲೀನಕ್ಕೆ ಸಹಮತ ಹೊಂದಿರಲಿಲ್ಲ. ನಿಜಾಮರ ದೌರ್ಜನ್ಯದಿಂದ ಬೇಸತ್ತಿದ್ದ ಹಿಂದೂಗಳು ವಿಲೀನಕ್ಕೆ ಪಟ್ಟು ಹಿಡಿದು ಆಂದೋಲನ ರೂಪಿಸಿದ್ದರು. ಈ ಆಂದೋಲನ ಹತ್ತಿಕ್ಕಲೆಂದೇ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (MIM) ರಾಜಕೀಯ ಪಕ್ಷದ ಅಧೀನದಲ್ಲಿ ರಜಾಕಾರರ ಅರೆಸೈನಿಕ ಖಾಸಗಿ ಪಡೆ ರಚಿಸಲಾಯಿತು. ಇದು ಹಿಂದೂಗಳ ಮೇಲೆ ದಾಳಿ, ಹೆಣ್ಣು ಮಕ್ಕಳ ಮಾನಭಂಗ, ಆಸ್ತಿಗಳ ಕಬಳಿಕೆ ಮೂಲಕ ಹಿಂದೂಗಳಲ್ಲಿ ಭಯ ಹುಟ್ಟಿಸಿತ್ತು. ಹೈದರಾಬಾದ್ ಅನ್ನು ಭಾರತದೊಂದಿಗೆ ವಿಲೀನ ಮಾಡದಂತೆ ನೋಡಿಕೊಳ್ಳಲು ಹಿಂಸೆಗೆ ಪ್ರಚೋದಿಸಲಾಯಿತು. ಅದಕ್ಕಾಗಿಯೇ ಹೈದರಾಬಾದ್ ನಿಜಾಮರು ರಜಾಕಾರರ ಪಡೆ ಕಟ್ಟಿಕೊಂಡು ಹೊಡಿಬಡಿ-ಕೊಲ್ಲು ಎಂಬ ಸಿದ್ಧಾಂತ ಅಳವಡಿಸಿಕೊಂಡಿದ್ದರು.
1938 ರಲ್ಲಿ ಎಂಐಎಂ ನಾಯಕ ಬಹದ್ದೂರ್ ಯಾರ್ ಜಂಗ್ ನಾಯಕತ್ವದಲ್ಲಿ ಆರಂಭವಾದ ರಜಾಕಾರರ ಪಡೆಯು ದೇಶ ವಿಭಜನೆ ಬಳಿಕ ಖಾಸಿಮ್ ರಜ್ವಿ ನೇತೃತ್ವದಲ್ಲಿ ದೇಶದ ಹಲವೆಡೆ ವಿಸ್ತರಿಸಿತು. ರಜಾಕಾರರ ದೌರ್ಜನ್ಯ ಹೆಚ್ಚಾದಾಗ ಭಾರತೀಯ ಸೇನೆ ಹೈದರಾಬಾದ್ ವಿರುದ್ಧ ಯುದ್ಧ ಸಾರಿತು. ನಿಜಾಮರು ಸೋತು ಭಾರತದೊಂದಿಗೆ ವಿಲೀನಕ್ಕೆ ಒಪ್ಪಿದರು. ಬಳಿಕ ರಜಾಕಾರರ ಪಡೆಯನ್ನು ವಿಸರ್ಜಿಸಲಾಯಿತು. ರಜಾಕಾರರ ನಾಯಕ ಖಾಸೀಂ ರಿಜ್ವಿಯನ್ನು ಬಂಧಿಸಲಾಯಿತು. ದಶಕದ ನಂತರ ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಎಂಐಎಂ ಪಕ್ಷಕ್ಕೆ ಅಬ್ದುಲ್ ವಾಜಿದ್ ಓವೈಸಿಯನ್ನು ನೇಮಕ ಮಾಡಿ ಪಾಕಿಸ್ತಾನಕ್ಕೆ ಸ್ಥಳಾಂತರವಾಗಿದ್ದ. ಬಳಿಕ ಎಂಐಎಂ ಪಕ್ಷವನ್ನು ನಿಷೇಧಿಸಲಾಯಿತು.
ಆದರೆ, ಅಬ್ದುಲ್ ವಾಜೀದ್ ಓವೈಸಿ 1957 ರಲ್ಲಿ ಆಲ್ ಇಂಡಿಯಾ ಎಂಐಎಂ (AIMIM) ಎಂದು ಮರುನಾಮಕರಣ ಮಾಡಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದರು. ಈಗ ಸಂಸದ ಅಸಾಸುದ್ದೀನ್ ಓವೈಸಿ ನೇತೃತ್ವದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಆದರೆ, ರಜಾಕಾರರಿಗೂ ತಮಗೂ ಸಂಬಂಧ ಇಲ್ಲ ಎಂದು ಓವೈಸಿ ಹೇಳುತ್ತಿದ್ದಾರೆ.
ಕಲಬುರಗಿ, ಬೀದರ್‌ನಲ್ಲೂ ರಜಾಕಾರರ ದಾಳಿ
18 ನೇ ಶತಮಾನದ ಆರಂಭದಲ್ಲಿ ಕಲಬುರಗಿ, ಬೀದರ್ ಹೈದರಾಬಾದ್ ಸಂಸ್ಥಾನ ಸೇರಿದವು. ಸ್ವಾತಂತ್ರ್ಯ ನಂತರ ಬೀದರ್, ಕಲಬುರಗಿ ಮತ್ತು ರಾಯಚೂರಿನ ಪ್ರಜಾ ಚಳವಳಿಯ ಫಲವಾಗಿ 1948ರ ಸೆಪ್ಟೆಂಬರ್ ತಿಂಗಳಲ್ಲಿ ಹೈದರಾಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನವಾಯಿತು. ಇದಕ್ಕೂ ಮುನ್ನ ರಜಾಕಾರರ ಪಡೆ ಈ ಮೂರೂ ಜಿಲ್ಲೆಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರದಲ್ಲಿ ತೊಡಗಿತ್ತು.
ಮಿತಿ ಮೀರಿದ್ದ ರಜಾಕಾರರ ದೌರ್ಜನ್ಯ
ಹಿಂದೂಗಳನ್ನು ಗುರಿಯಾಗಿಸಿಕೊಂಡು ರಜಾಕಾರರ ನಡೆಸಿದ ದಾಳಿ ಕಲಬುರಗಿ, ಬೀದರ್ ಹಾಗೂ ರಾಯಚೂರಿನಲ್ಲಿ ಸಾಕಷ್ಟು ಪ್ರಾಣ-ಮಾನಹಾನಿಗೆ ಕಾರಣವಾಗಿತ್ತು. ರೈತರ ಬೆಳೆ ನಾಶ, ಮನೆ -ದೇವಸ್ಥಾನಗಳ ಲೂಟಿ, ಮಹಿಳೆಯರ ಮೇಲೆ ಮಾನಭಂಗ, ಮಕ್ಕಳು ವೃದ್ಧರೆನ್ನದೇ ಕತ್ತಿ, ಕೊಡಲಿ, ಬಂದೂಕುಗಳಿಂದ ಹಿಂಸಿಸಿ ಕೊಲ್ಲುತ್ತಿದ್ದರು. ಭಾರತದ ಜೊತೆ ಹೈದರಾಬಾದ್ ಸಂಸ್ಥಾನದ ವಿಲೀನಕ್ಕಾಗಿ ನಡೆಯುತ್ತಿದ್ದ ಪ್ರಜಾ ಚಳವಳಿ ಹತ್ತಿಕ್ಕಲು ರಜಾಕಾರರು ಹಿಂಸಾಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 1946-48ರ ನಡುವೆ ರಜಾಕಾರರು ನಡೆಸಿದ ದೌರ್ಜನ್ಯ ಭೀತಿ ಹುಟ್ಟಿಸುವಂತಿತ್ತು.
ಕಲಬುರಗಿ ಜಿಲ್ಲೆಯಲ್ಲಿ 98 ಗ್ರಾಮಗಳ ಮೇಲೆ ದಾಳಿ, 42ಕೊಲೆ, 36 ದರೋಡೆ ಹಾಗು 34 ಮಂದಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದರು. ಬೀದರ ಜಿಲ್ಲೆಯಲ್ಲಿ 176 ಗ್ರಾಮಗಳ ಮೇಲೆ ದಾಳಿ, 120 ಕೊಲೆ, 23 ಮಹಿಳೆಯರ ಮೇಲೆ ದೌರ್ಜನ್ಯ, ರಾಯಚೂರು ಜಿಲ್ಲೆಯಲ್ಲಿ 94 ಗ್ರಾಮಗಳ ಮೇಲೆ ದಾಳಿ, 25ಕೊಲೆ, 63 ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದ ಬಗ್ಗೆ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ರಜಾಕಾರರ ಪಡೆಯನ್ನು ಮುನ್ನಡೆಸುತ್ತಿದ್ದ ನಿಜಾಮರ ಬೆಂಬಲಿಗ ಖಾಸಿಂ ರಜ್ವಿ ತನ್ನ ಸೈನಿಕರಿಗೆ ‘ಕಾಟೊ, ಲೂಟೊ ಔರ ಬಾಟೊ’ ಎಂಬ ಸಂದೇಶ ಕಳುಹಿಸಿದ್ದ.
ತಾಯಿ, ಸೋದರಿ ಕಳೆದುಕೊಂಡ ಖರ್ಗೆ
1948 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 7 ವರ್ಷದ ವಯಸ್ಸಿನ ಬಾಲಕನಾಗಿದ್ದಾಗ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಮೇಲೂ ರಜಾಕಾರರು ದಾಳಿ ನಡೆಸಿದ್ದರು. ಖರ್ಗೆ ಅವರ ಮನೆಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಖರ್ಗೆ ಅವರ ತಾಯಿ ಸಾಯಿಬವ್ವ ಹಾಗೂ ಸೋದರಿ ಬಲಿಯಾಗಿದ್ದರು.
ಹೈದರಾಬಾದ್ ಸಂಸ್ಥಾನದ ವ್ಯಾಪ್ತಿಯಲ್ಲಿ ರಜಾಕಾರರ ಉಪಟಳ ಗಮನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು ಗಮನ ಸೆಳೆದರು. ಹೈದರಾಬಾದ್ ಮೇಲೆ ದಾಳಿಗೆ ಭಾರತೀಯ ಸೇನೆಗೆ ಅನುಮತಿ ಪಡೆದು ́ಆಪರೇಷನ್ ಪೋಲೋ́ ಹೆಸರಿನಲ್ಲಿ ಯುದ್ಧ ನಡೆಸಲಾಯಿತು. ಯುದ್ಧದಲ್ಲಿ ನಿಜಾಮರನ್ನು ಸೋಲಿಸಲಾಯಿತು. ಬಳಿಕ ಹೈದರಾಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನವಾಯಿತು.
ಅಜ್ಜಿಯ ಮನೆಯಲ್ಲಿ ಬೆಳೆದ ಖರ್ಗೆ
ರಜಾಕಾರರ ದಾಳಿಯಲ್ಲಿ ತಾಯಿ ಹಾಗೂ ಸೋದರಿಯನ್ನು ಕಳೆದುಕೊಂಡ ಬಳಿಕ ಮಲ್ಲಿಕಾರ್ಜು ಖರ್ಗೆ ಅವರು ತಮ್ಮ ಅಜ್ಜಿಯ ಮನೆಯಲ್ಲಿ ಬಾಲ್ಯ ಕಳೆದರು. ಮನೆ ಮಠ ಕಳೆದುಕೊಂಡು ಗುಡಿಸಲಿನಲ್ಲಿ ಅಜ್ಜಿಯ ಜೊತೆ ವಾಸವಾಗಿದ್ದರು. ಸಂಕಷ್ಟಗಳ ನಡುವೆಯೂ ನೂತನ್ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮುಗಿಸಿ, ಕಲಬುರಗಿಯ ಕಲಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದರು. ನಂತರ ಕಲಬುರಗಿಯ ಸೇಠ್ ಶಂಕರ್‌ಲಾಲ್ ಲಾಹೋಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಬಳಿಕ ಅಂದಿನ ಸಮಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಶಿವರಾಜ್ ಪಾಟೀಲ್ (ಬಳಿಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೂನಿಯರ್ ಆಗಿ ಕಾನೂನು ಅಭ್ಯಾಸ ಮಾಡಿದರು. ಬಳಿಕ ಹಲವು ಕಾರ್ಮಿಕ ಸಂಘಟನೆಗಳಲ್ಲಿ ಭಾಗವಹಿಸಿ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.
ಖರ್ಗೆ ಅವರು 2009 ರಲ್ಲಿ ಮೊದಲ ಅವಧಿಯಲ್ಲೇ ಲೋಕಸಭೆಗೆ ಆಯ್ಕೆಯಾದರು. ಒಟ್ಟು ಒಂಬತ್ತು ಬಾರಿ ಶಾಸಕರಾಗಿ, ಎರಡು ಬಾರಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಲೋಕಸಭೆ ನಾಯಕರಾಗಿದ್ದರು. ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚರ್ಚೆಗೆ ಕಾರಣವಾದ ಹೇಳಿಕೆಗಳೇನು?
ಯೋಗಿ ಆದಿತ್ಯನಾಥ್ ಕಾವಿ ವೇಷದಲ್ಲಿರುವ ತೋಳ ಎಂಬ ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ತಿರುಗೇಟು ನೀಡಿದ್ದ ಉತ್ತರ ಪ್ರದೇಶದ ಸಿಎಂ ಅವರು, ನನಗೆ ರಾಷ್ಟ್ರ ಮುಖ್ಯ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಲ್ಪಸಂಖ್ಯಾತರ ತುಷ್ಟೀಕರಣ ಮುಖ್ಯ. ಮುಸ್ಲಿಮರ ದಾಳಿಯಿಂದ ತಾಯಿ, ಸಹೋದರಿಯನ್ನು ಕಳೆದುಕೊಂಡರೂ ಮುಸ್ಲಿಮರ ಮತಗಳಿಗಾಗಿ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಖರ್ಗೆ ಅವರ ಬಾಲ್ಯದ ದುರಂತದ ಕುರಿತ ಯೋಗಿ ಆದಿತ್ಯನಾಥ ಟೀಕೆಗೆ ಗುರುವಾರ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಅಜ್ಜಿ ಹಾಗೂ ಸಂಬಂಧಿಕರು ರಜಾಕಾರರ ದಾಳಿಯಿಂದ ಮೃತಪಟ್ಟರೆ ಹೊರತು ಮುಸ್ಲಿಮರಿಂದ ಅಲ್ಲ. ಬೇರೆ ಸಮುದಾಯದ ಯಾರೋ ಒಬ್ಬರು ತಪ್ಪು ಮಾಡಿದರೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಇಷ್ಟೆಲ್ಲಾ ಮಾತನಾಡುವ ನೀವು ದಲಿತರಿಗೆ ದೇಗುಲ ಪ್ರವೇಶಿಸಲು ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮೊದಲು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ, ಬಿಜೆಪಿಯವರು ಅಪಾಯದಲ್ಲಿದ್ದರೆ ಹಿಂದೂಗಳು ಅಪಾರಯದಲ್ಲಿದ್ದಾರೆ ಎಂದು ಬಿಂಬಿಸುವುದನ್ನು ಬಿಡಿ ಎಂದು ತಿರುಗೇಟು ನೀಡಿದ್ದಾರೆ.