ಆಂಧ್ರಪ್ರದೇಶದಲ್ಲಿ ಖಾಸಗಿ ಬಸ್ ದುರಂತ; 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನ
ಕರ್ನೂಲ್ ಬಸ್ ದುರಂತ; ರಾಹುಲ್ ಗಾಂಧಿ ಸಂತಾಪ
ಆಂಧ್ರಪ್ರದೇಶದ ಕರ್ನೂಲ್‌ನ ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಅನೇಕ ಅಮಾಯಕರ ಸಾವಿಗೆ ಕಾರಣವಾದ ದುರಂತ ಮತ್ತು ನೋವಿನ ಘಟನೆ ತೀವ್ರ ದುಃಖಕರವಾಗಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಪ್ರಯಾಣಿಕರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ" ಎಂದು ರಾಹುಲ್ ಗಾಂಧಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆಯ ಭಯಾನಕತೆಯನ್ನು ವಿವರಿಸಿದ ಪ್ರಯಾಣಿಕ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಬಳಿ ಬೆಂಕಿ ಹತ್ತಿಕೊಂಡ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕರು ಆ ಭೀಕರ ಘಟನೆ ಬಗ್ಗೆ ವಿವರಿಸಿದ್ದಾರೆ. ಅವರು ಕಿಟಕಿಯ ಬಳಿ ಬೆಂಕಿಯನ್ನು ಗಮನಿಸಿ ತಕ್ಷಣ ಚಾಲಕರಿಗೆ ಎಚ್ಚರಿಕೆ ನೀಡಿರಿವುದಾಗಿ ತಿಳಿಸಿದರು.
"ನಿನ್ನೆ ರಾತ್ರಿ, ನಾವು ಬೆಂಗಳೂರಿಗೆ ಪ್ರಯಾಣಿಸಲು ಕುಕಟ್‌ಪಲ್ಲಿಯಲ್ಲಿ ಬಸ್ ಹತ್ತಿದೆವು. ನಾನು ಚಾಲಕರ ಸೀಟಿನ ಹಿಂದೆ ಕುಳಿತಿದ್ದೆ. ಸುದೀರ್ಘ ಪ್ರಯಾಣದ ನಂತರ, ಸುಮಾರು 2:30 ರಿಂದ 3:30ರ ನಡುವೆ, ನನಗೆ ಕಿಟಕಿಯ ಬದಿಯಲ್ಲಿ ಬೆಂಕಿ ಕಾಣಿಸಿತು ಮತ್ತು ತಕ್ಷಣವೇ ಚಾಲಕರಿಗೆ ಎಚ್ಚರಿಕೆ ನೀಡಿದೆ. ಬಸ್ ತಕ್ಷಣ ನಿಲ್ಲಿಸಲಾಯಿತು. ಈ ಮಧ್ಯೆ, ತಪ್ಪಿಸಿಕೊಳ್ಳಲು ನಾವು ಕಿಟಕಿಗಳನ್ನು ಒಡೆಯಲು ಪ್ರಯತ್ನಿಸಿದೆವು. ಸುಮಾರು 20 ಜನರು ಬಸ್ಸಿನಿಂದ ಹೊರಬರಲು ಯಶಸ್ವಿಯಾದರು, ಆದರೆ ಉಳಿದವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ
ಕರ್ನೂಲ್ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಆಂಧ್ರಪ್ರದೇಶದ ಕರ್ನೂಲು ಬಳಿ ಅಪಘಾತಕ್ಕೀಡಾಗಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿರುವ ದಾರುಣ ಘಟನೆ ತಿಳಿದು ಅಪಾರ ದುಃಖವಾಯಿತು. ಈ ದುರಂತದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಈ ದುರಂತದಲ್ಲಿ ಕರ್ನಾಟಕದವರು ಇರುವ ಸಾಧ್ಯತೆ ಇದ್ದು ರಾಜ್ಯ ಸರ್ಕಾರವು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈ ಕೂಡಲೇ ಸ್ಥಳೀಯ ಆಡಳಿತದೊಂದಿಗೆ ಕೈ ಜೋಡಿಸಿ ನೆರವು ನೀಡಲಿ ಹಾಗೂ ಮೃತರ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಲಿ ಎಂದು ಮನವಿ ಮಾಡಿದ್ದಾರೆ.
ಕರ್ನೂಲ್ ಬಸ್ ದುರಂತ| ಒಂದೇ ಕುಟುಂಬದ ನಾಲ್ವರು ಸಾವು
ಕರ್ನೂಲ್ ಬಸ್ ದುರಂತ ಪ್ರಕರಣದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ನೆಲ್ಲೂರ್ ಜಿಲ್ಲೆಯ ಗೊಲ್ಲಾವರಿಪಲ್ಲಿಯ ಗೊಲ್ಲಾ ರಮೇಶ್ (35), ಅನುಷಾ (30), ಮನ್ವಿತಾ (10) ಮತ್ತು ಮನಿಶ್ (12) ಮೃತ ಕುಟುಂಬಸ್ಥರು ಎಂದು ತಿಳಿದುಬಂದಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರು
ಅಶ್ವಿನ್ ರೆಡ್ಡಿ (36), ಜಿ. ಧಾತ್ರಿ (27), ಕೀರ್ತಿ (30), ಪಂಕಜ್ (28), ಯುವನ್ ಶಂಕರ್ ರಾಜು (22), ತರುಣ್ (27), ಆಕಾಶ್ (31), ಗಿರಿರಾವ್ (48), ಬುನಾ ಸಾಯಿ (33), ಗಣೇಶ್ (30), ಜಯಂತ್ ಪುಷ್ವಾಹ (27), ಪಿಲ್ವಾಮಿನ್ ಬೇಬಿ (64), ಕಿಶೋರ್ ಕುಮಾರ್ (41), ರಮೇಶ್ (30), ಅನುಷಾ (22), ಮೊಹಮ್ಮದ್ (51), ದೀಪಕ್ ಕುಮಾರ್ (24), ಆಂದೋಜ್ ನವೀನ್ ಕುಮಾರ್ (26), ಪ್ರಶಾಂತ್ (32), ಎಂ. ಸತ್ಯನಾರಾಯಣ (28), ಮೇಘನಾಥ್ (25), ವೇಣು ಗುಂಡ (33), ಚರಿತ್ (21), ಚಂದನಾ ಮಂಗಾ (23), ಸಂಧ್ಯಾರಾಣಿ ಮಂಗಾ (43), ಗ್ಲೋರಿಯಾ ಎಲ್ಲೆಸಾ ಶ್ಯಾಮ್ (28), ಸೂರ್ಯ (24), ಹರಿಕಾ (30), ಶ್ರೀಹರ್ಷ (24), ಶಿವ (24), ಶ್ರೀನಿವಾಸ ರೆಡ್ಡಿ (40), ಸುಬ್ರಹ್ಮಣ್ಯಂ (26), ಕೆ.ಅಶೋಕ್ (27), ಎಂ.ಜಿ. ರಾಮರೆಡ್ಡಿ (50), ಉಮಾಪತಿ (32), ಅಮೃತ್ ಕುಮಾರ್ (18), ವೇಣುಗೋಪಾಲ್ ರೆಡ್ಡಿ (24)
ಕರ್ನೂಲ್ ಬಸ್ ದುರಂತ; 11 ಮೃತದೇಹಗಳನ್ನು ಗುರುತಿಸಲಾಗಿದೆ; ಡಿಸಿ ಹೇಳಿಕೆ
ಕರ್ನೂಲ್ ಬಸ್ ದುರಂತದಲ್ಲಿ ಮೃತಪಟ್ಟಿರುವ 20 ಜನರಲ್ಲಿ 11 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ಕರ್ನೂಲ್ ಜಿಲ್ಲಾಧಿಕಾರಿ ಎ. ಸಿರಿ ಹೇಳಿದ್ದಾರೆ. ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ ಒಟ್ಟು 41 ಜನರಿದ್ದರು. ಒಂದು ಬೈಕ್ ಬಸ್‌ನ ಕೆಳಗೆ ಸಿಕ್ಕಿಹಾಕಿಕೊಂಡಿತ್ತು. ಅಪಘಾತದ ನಂತರ ಬೈಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. 41 ಜನರಲ್ಲಿ ನಾವು 21 ಪ್ರಯಾಣಿಕರನ್ನು ಪತ್ತೆಹಚ್ಚಿದ್ದೇವೆ. ಅವರು ಸುರಕ್ಷಿತವಾಗಿದ್ದಾರೆ. 11 ಮೃತದೇಹಗಳನ್ನು ಬಸ್‌ನಿಂದ ಹೊರತೆಗೆಯಲಾಗಿದೆ. 21 ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 9 ಮೃತದೇಹಗಳ ಬಗ್ಗೆ ನಾವು ದೃಢೀಕರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನೂಲ್ ಬಸ್ ದುರಂತ: ಡಿಎನ್‌ಎ ಪರೀಕ್ಷೆಗಳು ನಡೆಯುತ್ತಿವೆ; ಬಿಜೆಪಿ ವಕ್ತಾರೆ ವಿನುಷಾ ರೆಡ್ಡಿ
ಕರ್ನೂಲ್ ಬಸ್ ದುರಂತದ ಬಗ್ಗೆ ಬಿಜೆಪಿ ವಕ್ತಾರೆ ವಿನುಷಾ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರದೇಶದ ಆಡಳಿತವು ತಕ್ಷಣವೇ ಪ್ರತಿಕ್ರಿಯಿಸಿದೆ. ಬಸ್‌ನಲ್ಲಿ ಸುಟ್ಟು ಕರಕಲಾದವರ ದೇಹಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಬಸ್ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿತ್ತು ಮತ್ತು ಅನೇಕ ಜನರು ಈ ಬಸ್‌ನಲ್ಲಿ ಸುಟ್ಟು ಕರಕಲಾಗಿದ್ದಾರೆ. ಇಲ್ಲಿನ ಆಡಳಿತವು ಬಹಳ ತ್ವರಿತವಾಗಿ ಪ್ರತಿಕ್ರಿಯಿಸಿದೆ. ಬಸ್‌ನೊಳಗೆ ಅನೇಕ ಜನರು ಸುಟ್ಟುಹೋಗಿದ್ದಾರೆ ಮತ್ತು ವಿಧಿವಿಜ್ಞಾನ ತಜ್ಞರು ಮತ್ತು ವೈದ್ಯರು ಡಿಎನ್‌ಎ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ, ಮತ್ತು ಈ ಸಂಪೂರ್ಣ ಪ್ರಕ್ರಿಯೆಯು ಬಹಳ ವೇಗವಾಗಿ ನಡೆಯುತ್ತಿದೆ ಮತ್ತು ದೇಹಗಳನ್ನು ಶೀಘ್ರದಲ್ಲೇ ಗುರುತಿಸಲಾಗುವುದು. ಎಂದು ಅವರು ತಿಳಿಸಿದ್ದಾರೆ.
ಕರ್ನೂಲ್ ಬಸ್ ದುರಂತ| ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಕರ್ನೂಲ್ ಜಿಲ್ಲೆಯ ಚಿನ್ನಾಟೇಕೂರು ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಆಂಧ್ರಪ್ರದೇಶದ ಕರ್ನೂಲ್‌ನ ಬೆಂಗಳೂರು - ಹೈದರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಬಸ್‌ಗೆ ಬೆಂಕಿ ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಸುದ್ದಿ ಕೇಳಿ ಅತೀವ ದುಃಖವಾಯಿತು. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಕರ್ನೂಲ್ ಬಸ್ ಅಪಘಾತ; ಡಿ.ಕೆ ಶಿವಕುಮಾರ್ ಸಂತಾಪ
ಆಂಧ್ರಪ್ರದೇಶದ ಕುರ್ನೂಲ್ ಬಳಿ ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತರಾದ ಎಲ್ಲರ ಜೊತೆ ನಾವಿದ್ದೇವೆ. ದುರಂತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಕರ್ನೂಲ್ ಬಸ್ ದುರಂತ: ರಾಷ್ಟ್ರಪತಿ ದ್ರೌಪತಿ ಮುರ್ಮು ಸಂತಾಪ
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ಬಸ್ ಬೆಂಕಿ ಅಪಘಾತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, "ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ಬಸ್ ಬೆಂಕಿ ಅಪಘಾತದಲ್ಲಿ ಜೀವಹಾನಿ ಸಂಭವಿಸಿರುವುದು ಅತ್ಯಂತ ದುರದೃಷ್ಟಕರ. ಮೃತರ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.