ಭಾರತ ಒಕ್ಕೂಟದಿಂದ ಪ್ರತಿಭಟನೆ: 'ಅತಿರೇಕ' ಎಂದ ವಿತ್ತ ಸಚಿವೆ
'ನಮಗೆ ಭಾರತ ಬಜೆಟ್ ಬೇಕು; ಎನ್‌ಡಿಎ ಬಜೆಟ್ ಅಲ್ಲ' ಮತ್ತು 'ಬಜೆಟ್‌ನಲ್ಲಿ ಎನ್‌ಡಿಎಯಿಂದ ಭಾರತಕ್ಕೆ ದ್ರೋಹ' ಎಂಬ ಫಲಕಗಳನ್ನು ಸಂಸದರು ಪ್ರದರ್ಶಿಸಿದರು. ಅನುದಾನ ನೀಡಿಕೆಯಲ್ಲಿ ತಾರತಮ್ಯವನ್ನು ಖಂಡಿಸಿದರು.;
ಬಜೆಟ್‌ನಲ್ಲಿ ಎರಡು ರಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳನ್ನು ʻನಿರ್ಲಕ್ಷಿಸಲಾಗಿದೆʼ ಎಂದು ಪ್ರತಿಭಟಿಸಿದ ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದ ಪಕ್ಷಗಳು ಬುಧವಾರ (ಜುಲೈ 24) ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದವು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದು ʻಅತಿರೇಕದ ವರ್ತನೆʼ. ಕಾಂಗ್ರೆಸ್ ಮಂಡಿಸಿದ ಬಜೆಟ್ ಸೇರಿದಂತೆ ಹಿಂದಿನ ಯಾವುದೇ ಬಜೆಟ್‌ನಲ್ಲಿ ಎಲ್ಲ ರಾಜ್ಯಗಳ ಉಲ್ಲೇಖ ಇರುತ್ತಿರಲಿಲ್ಲ ಎಂದು ಪ್ರತಿಕ್ರಿಯಿಸಿದರು.
ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮೇಲೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷದ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಪ್ರತಿಭಟನೆ ಯಲ್ಲಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಡಪಕ್ಷಗಳ ಹಲವು ಸಂಸದರು ಪಾಲ್ಗೊಂಡರು.
ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ʻಇದು ಜನವಿರೋಧಿ ಬಜೆಟ್. ಯಾರಿಗೂ ನ್ಯಾಯ ಸಿಕ್ಕಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿದ್ದಾರೆ. ಆದರೆ, ವಿಶೇಷ ಸ್ಥಾನಮಾನ ನೀಡಿಲ್ಲ. ಇದೊಂದು ಮೋಸದ ಬಜೆಟ್ ಮತ್ತು ಜನರಿಗೆ ಅನ್ಯಾಯವಾಗಿದೆʼ ಎಂದು ಹೇಳಿದರು.
‘ನಮಗೆ ಭಾರತ ಬಜೆಟ್ ಬೇಕು; ಎನ್‌ಡಿಎ ಬಜೆಟ್ ಅಲ್ಲ’ ಮತ್ತು ‘ಬಜೆಟ್‌ನಲ್ಲಿ ಎನ್‌ಡಿಎ ಭಾರತಕ್ಕೆ ದ್ರೋಹ ಬಗೆದಿದೆ’ ಎಂಬ ಫಲಕಗಳನ್ನು ಸಂಸದರು ಪ್ರದರ್ಶಿಸಿದರು.
ʻಬಜೆಟ್ ಮೂಲಕ ಬಿಜೆಪಿ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ತತ್ವಗಳನ್ನು ಉಲ್ಲಂಘಿಸಿದೆ. ಸರಕಾರವನ್ನು ರಕ್ಷಿಸಿಕೊಳ್ಳುವುದು ಬಜೆಟ್‌ನ ಉದ್ದೇಶವಾಗಿತ್ತು. ಕೇವಲ ಎರಡು ರಾಜ್ಯಗಳಿಗೆ ಇಷ್ಟೊಂದು ಅನುದಾನ ನೀಡಲಾಗಿದೆ. ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹಣ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ, ಇತರ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಅದಕ್ಕಾಗಿ ನಾವು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಇದರಿಂದ ಜನ ರೊಚ್ಚಿಗೆದ್ದಿದ್ದಾರೆ,ʼ ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು.
ʻಯುವಜನರಿಗೆ ಸುಳ್ಳು ಭರವಸೆಗಳನ್ನು ನೀಡಲಾಗಿದೆ,ʼ ಎಂದು ಎಸ್‌ಪಿ ಸಂಸದೆ ಜಯಾ ಬಚ್ಚನ್, ಬಜೆಟ್ ವಿರುದ್ಧ ಟೀಕಿಸಿದರು.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ʻತಮ್ಮ ರಾಜ್ಯ ಉತ್ತರ ಪ್ರದೇಶಕ್ಕೆ ತಾರತಮ್ಯ ಮಾಡಲಾಗಿದೆ. ಉದ್ಯೋಗಗಳನ್ನು ಕಿತ್ತುಕೊಂಡು ಈಗ ಶಿಷ್ಯವೇತನದ ಬಗ್ಗೆ ಮಾತನಾಡುತ್ತಿದ್ದಾರೆ,ʼ ಎಂದರು.
ಮಂಗಳವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿ ನಡೆದ ಇಂಡಿಯ ಒಕ್ಕೂಟದ ಪಕ್ಷಗಳ ಸಭಾ ನಾಯಕರ ಸಭೆಯಲ್ಲಿ ಪ್ರತಿಭಟನೆ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ತಾರತಮ್ಯವನ್ನು ವಿರೋಧಿಸಿ ಕಾಂಗ್ರೆಸ್ ಮುಖ್ಯಮಂತ್ರಿಗಳು ಜುಲೈ 27 ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲಿದ್ದಾರೆ.