Pahalgam Terror Attack | ಉಗ್ರರ ಹೆಸರು ಬಹಿರಂಗ; ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ

ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.;

Update: 2025-04-24 07:06 GMT

ಪೊಲೀಸರು ಬಿಡುಗಡೆ ಮಾಡಿರುವ ಭಯೋತ್ಪಾದಕರ ಚಿತ್ರ (ಎಕ್ಸ್‌ ಖಾತೆಯಿಂದ)

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರರ ಹೆಸರುಗಳನ್ನು ಮತ್ತು ಚಿತ್ರಗಳನ್ನು ಪ್ರಕಟಿಸಿರುವ ಜಮ್ಮು ಕಾಶ್ಮೀರ ಪೊಲೀಸರು  ಸುಳಿವು ನೀಡಿದವರಿಗೆ 20 ಲಕ್ಷ ರೂ.ಬಹುಮಾನ ನೀಡುವುದಾಗಿ  ಘೋಷಿಸಿದ್ದಾರೆ.

ಭಯೋತ್ಪಾದಕರನ್ನು ಆದಿಲ್ ಹುಸೇನ್ ಥೋಕರ್ (ಅನಂತ್‌ನಾಗ್ ನಿವಾಸಿ), ಹಾಶಿಮ್ ಮೂಸಾ ಅಲಿಯಾಸ್ ಸುಲೈಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.


ಲಷ್ಕರ್‌-ಎ-ತೊಯಿಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ  ದಿ ರೆಸಿಸ್ಟೆನ್ಸ್ ಫ್ರಂಟ್ (TRF) ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿತ್ತು. ಉಗ್ರರ ಹೆಡೆಮುರಿ ಕಟ್ಟಲು ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭಾರತೀಯ ಸೇನಾಪಡೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, ಉಗ್ರರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ. 

ಬೇಸಿಗೆ ರಜೆ ಕಳೆಯಲು ಬಂದಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಉಗ್ರರ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ ಜಮ್ಮು ಕಾಶ್ಮೀರ ಸರ್ಕಾರ ಹತ್ತು ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಕರ್ನಾಟಕ ಸರ್ಕಾರವೂ ಸಹ ಉಗ್ರ ದಾಳಿಯಲ್ಲಿ ಮಡಿದ ಮೂವರು ಕನ್ನಡಿಗರಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. 

ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸಚಿವ ಸಂತೋಷ್‌ ಲಾಡ್‌ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡವನ್ನು ಪಹಲ್ಗಾಮ್‌ಗೆ ಕಳುಹಿಸಿಕೊಡಲಾಗಿತ್ತು. 

Tags:    

Similar News