ಅನಂತ ಪಿತೂರಿಗಳನ್ನು ಎದುರಿಸಿ ಬೆಳೆದ 'ಸಂಘ' : ಆರ್‌ಎಸ್‌ಎಸ್ ಶತಮಾನೋತ್ಸವದಲ್ಲಿ ಮೋದಿ ಶ್ಲಾಘನೆ
ಪ್ರಧಾನಿ ಮೋದಿಯವರು ಆರ್‌ಎಸ್‌ಎಸ್‌ನ ಶತಮಾನದ ಸಾಧನೆಯನ್ನು ಸ್ಮರಿಸುವ ವಿಶೇಷ ಅಂಚೆ ಚೀಟಿ ಮತ್ತು 100 ರೂಪಾಯಿ ಮುಖಬೆಲೆಯ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ತ್ಯಾಗ, ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದ್ಭುತ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ
ನವದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಬುಧವಾರ ನಡೆದ ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಯ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು " ಆರ್‌ಎಸ್‌ಎಸ್ ಮುಖ್ಯವಾಹಿನಿಗೆ ಬರದಂತೆ ತಡೆಯಲು ಅನಂತ ಪಿತೂರಿಗಳು ನಡೆದರೂ, ಸಂಘವು ಸ್ಥಿತಪ್ರಜ್ಞೆಯಿಂದ ಎಲ್ಲವನ್ನೂ ಸಹಿಸಿಕೊಂಡು ಬಂದಿದೆ ಎಂದು ಅವರು ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ನ ಶತಮಾನದ ಸಾಧನೆಯನ್ನು ಸ್ಮರಿಸುವ ವಿಶೇಷ ಅಂಚೆ ಚೀಟಿ ಮತ್ತು 100 ರೂಪಾಯಿ ಮುಖಬೆಲೆಯ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದರು.
ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ
ಸ್ವಾತಂತ್ರ್ಯದ ನಂತರವೂ ಸಂಘವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದವು ಎಂದು ನೆನಪಿಸಿಕೊಂಡ ಪ್ರಧಾನಿ, "ಕೆಲವೊಮ್ಮೆ ನಮ್ಮ ಹಲ್ಲುಗಳಿಂದಲೇ ನಮ್ಮ ನಾಲಿಗೆಗೆ ಪೆಟ್ಟಾಗುತ್ತದೆ, ಅದಕ್ಕಾಗಿ ನಾವು ಹಲ್ಲುಗಳನ್ನು ಮುರಿಯುವುದಿಲ್ಲ. ಅದೇ ರೀತಿ, ಸಂಘವು ಸಮಾಜದ ಒಂದು ಭಾಗವೇ ಹೊರತು ಬೇರೆಯಲ್ಲ ಎಂಬ ಅರಿವಿದ್ದ ಕಾರಣ, ಯಾವುದೇ ಪಿತೂರಿ ನಡೆದರೂ, ಆರ್‌ಎಸ್‌ಎಸ್ ಎಂದಿಗೂ ಯಾರ ವಿರುದ್ಧವೂ ದ್ವೇಷ ಸಾಧಿಸಲಿಲ್ಲ. ಸಂಘದ ಸ್ವಯಂಸೇವಕರು ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ," ಎಂದು ಹೇಳಿದರು.
ರಾಷ್ಟ್ರವೇ ಮೊದಲು ಎಂಬ ಧ್ಯೇಯ
ಸಂಘದ ಸ್ಥಾಪನೆಯ ಏಕೈಕ ಉದ್ದೇಶ ರಾಷ್ಟ್ರ ನಿರ್ಮಾಣವಾಗಿದೆ ಎಂದು ಮೋದಿ ಪ್ರತಿಪಾದಿಸಿದರು. "ನದಿಗಳ ತೀರದಲ್ಲಿ ಮಾನವ ನಾಗರಿಕತೆಗಳು ಹೇಗೆ ಅರಳುತ್ತವೆಯೋ, ಹಾಗೆಯೇ ಸಂಘದ ಹರಿವಿನಲ್ಲಿ ನೂರಾರು ಜೀವಗಳು ಅರಳಿವೆ. ಸಂಘದೊಳಗಿನ ವಿವಿಧ ಉಪ-ಸಂಘಟನೆಗಳು ಜೀವನದ ಪ್ರತಿಯೊಂದು ಅಂಶಕ್ಕೂ ಕೆಲಸ ಮಾಡುತ್ತವೆ. ಆದರೆ ಅವುಗಳ ನಡುವೆ ಯಾವುದೇ ವಿರೋಧಾಭಾಸವಿಲ್ಲ. ಎಲ್ಲದರ ಗುರಿ ಮತ್ತು ಸಾರ ಒಂದೇ 'ರಾಷ್ಟ್ರವೇ ಮೊದಲು' ಎಂದು ಅವರು ವಿವರಿಸಿದರು.
ಶತಮಾನದ ಹಿಂದೆ ವಿಜಯದಶಮಿಯ ದಿನದಂದು ಸಂಘ ಸ್ಥಾಪನೆಯಾಗಿದ್ದು ಕಾಕತಾಳೀಯವಲ್ಲ ಎಂದು ಹೇಳಿದ ಅವರು, "ಕೆಟ್ಟದ್ದರ ಮೇಲೆ ಒಳ್ಳೆಯದರ, ಅಸತ್ಯದ ಮೇಲೆ ಸತ್ಯದ ವಿಜಯವನ್ನು ಸಂಕೇತಿಸುವ ದಿನದಂದು ಸಂಘ ಸ್ಥಾಪನೆಯಾಗಿದೆ ಎಂದರು. ಸಂಘದ ಸ್ಥಾಪಕರಾದ ಡಾ. ಕೇಶವ್ ಬಲಿರಾಮ್ ಹೆಡಗೇವಾರ್ ಅವರ ರಾಷ್ಟ್ರ ಸೇವೆಗೆ ಗೌರವ ನಮನ ಸಲ್ಲಿಸಿದರು.