Pahalgam Terror Attack | ಪಾಹಲ್ಗಾಮ್ ಭಯೋತ್ಪಾದಕ ದಾಳಿ: ಇಬ್ಬರು ಕನ್ನಡಿಗರು ಸೇರಿದಂತೆ 26 ಜನರ ಸಾವು
ಈ ಘಟನೆಯನ್ನು ಕಾಶ್ಮೀರದ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತಯ್ಬಾದ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ.;
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಾಹಲ್ಗಾಮ್‌ನ ಬೈಸರಾನ್ ವ್ಯಾಲಿಯಲ್ಲಿ ಮಂಗಳವಾರ (ಏಪ್ರಿಲ್ 22ರಂದು) ನಡೆದ ಭಯೋತ್ಪಾದಕ ದಾಳಿಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದು, ಈ ಘಟನೆಯನ್ನು ಕಾಶ್ಮೀರದ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. ಈ ದಾಳಿಯ ಜವಾಬ್ದಾರಿಯನ್ನು ಲಷ್ಕರ್-ಎ-ತಯ್ಬಾದ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ.
ದಾಳಿಯು ಮಧ್ಯಾಹ್ನ 2.30ರಿಂದ 3 ಗಂಟೆಯ ಒಳಗೆಬೈಸರಾನ್ ವ್ಯಾಲಿಯಲ್ಲಿ ನಡೆದಿದೆ, ಈ ಪ್ರದೇಶವನ್ನು 'ಮಿನಿ ಸ್ವಿಟ್ಜರ್ಲೆಂಡ್' ಎಂದು ಹೇಳಲಾಗಿದೆ. ಈ ಸ್ಥಳವು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ಸಾಗಬಹುದಾದ ಪ್ರವಾಸಿ ತಾಣವಾಗಿದೆ. ಎರಡರಿಂದ ಮೂರು ಭಯೋತ್ಪಾದಕರು, ಸೇನೆಯ ವೇಷದಲ್ಲಿ ಬಂದು ಕುದುರೆ ಸವಾರಿ ಮಾಡುತ್ತಿದ್ದ ಅಥವಾ ಟ್ರೆಕ್ಕಿಂಗ್‌ನಲ್ಲಿ ತೊಡಗಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರರು ಗುಂಡುಗಳನ್ನು ಗೊತ್ತು- ಗುರಿಯಿಲ್ಲದೇ ಹಾರಿಸಿದ್ದಾರೆ, ಇದರಿಂದ ಮಹಿಳೆಯರು, ವೃದ್ಧರು, ಮತ್ತು ಮಕ್ಕಳು ಸೇರಿದಂತೆ ಅನೇಕರು ಬಲಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕೃತ್ಯಗಳ ವಿಡಿಯೊ ವೈರಲ್ ಆಗಿದ್ದು, ಮಹಿಳೆಯೊಬ್ಬರು ತಮ್ಮ ಪತಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ವಿಷಯವನ್ನು ವಿವರಿಸಿದ್ದಾರೆ. "ಅವರು ಮೊದಲು ನನ್ನ ಗಂಡನ ಹೆಸರು ಮತ್ತು ಧರ್ಮವನ್ನು ಕೇಳಿದರು, ನಂತರ ಅವನನ್ನು ಗುಂಡಿಕ್ಕಿದರು," ಎಂದು ಆಕೆ ಅಳುತ್ತಾ ಹೇಳುವುದನ್ನು ಕೇಳಿಸಿಕೊಳ್ಳಬಹುದು. ಇನ್ನೊಬ್ಬರು ದಾಳಿಕೋರರು ಗುಂಡುಗಳನ್ನು ಸಮೀಪದಿಂದ ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ, .
ಸಾವು-ನೋವು
ವರದಿಗಳ ಪ್ರಕಾರ, ಸಾವಿನ ಸಂಖ್ಯೆ ಇನ್ನೂ ನಿಖರವಾಗಿಲ್ಲ. ಕೆಲವು ಮೂಲಗಳು 26ರಿಂದ 27 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಶಂಕಿಸಿವೆ, ಅದೇ ರೀತಿ ಕನಿಷ್ಠ 12 ರಿಂದ 24 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಪಾಹಲ್ಗಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಶ್ರೀನಗರದ ಜಿಎಂಸಿ ಅನಂತನಾಗ್‌ಗೆ ಸ್ಥಳಾಂತರಿಸಲಾಗಿದೆ.
ಮೃತರಲ್ಲಿ ಕರ್ನಾಟಕದ ಶಿವಮೊಗ್ಗದ ನಿವಾಸಿ 47 ವರ್ಷದ ಮಂಜುನಾಥ್ ರಾವ್ ಸೇರಿದ್ದಾರೆ, ಅವರು ತಮ್ಮ ಪತ್ನಿ ಪವಿತ್ರಾ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅವರ ಪತ್ನಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಇದರ ಜೊತೆಗೆ, ವಿದೇಶಿ ಪ್ರಜೆಗಳ ಸಾವಿನ ಬಗ್ಗೆ ವರದಿಗಳಿವೆ, ಆದರೆ ಅವರ ಗುರುತು ಅಥವಾ ರಾಷ್ಟ್ರೀಯತೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ರಕ್ಷಣಾ ಕಾರ್ಯಾಚರಣೆ
ಬೈಸರಾನ್ ವ್ಯಾಲಿಯ ದುರ್ಗಮ ಪರಿಸರಿಂದಾಗಿ ರಕ್ಷಣಾ ಕಾರ್ಯಾಚರಣೆ ಸವಾಲಿನದಾಗಿತ್ತು. ಸ್ಥಳೀಯರು ಗಾಯಾಳುಗಳನ್ನು ಕುದುರೆಗಳ ಮೇಲೆ ಕೆಳಗಿಳಿಸುವಲ್ಲಿ ಸಹಾಯ ಮಾಡಿದ್ದಾರೆ, ಜೊತೆಗೆ ಹೆಲಿಕಾಪ್ಟರ್‌ಗಳನ್ನು ಗಾಯಾಳುಗಳ ಸ್ಥಳಾಂತರಕ್ಕೆ ಬಳಸಲಾಗಿದೆ. ಭದ್ರತಾ ಪಡೆಗಳು, ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಮತ್ತು ಸಿಆರ್‌ಪಿಎಫ್‌ನ ವಿಶೇಷ ದಳಗಳು ಸ್ಥಳವನ್ನು ಸುತ್ತುವರಿದು ದಾಳಿಕೋರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ.
ರಾಜಕೀಯ ಪ್ರತಿಕ್ರಿಯೆಗಳು
ಈ ದಾಳಿಯನ್ನು ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸೌದಿ ಅರೇಬಿಯಾದಲ್ಲಿದ್ದಾಗಲೇ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ, ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಶಾ ಅವರು ಶ್ರೀನಗರಕ್ಕೆ ತೆರಳಿ ಭದ್ರತಾ ವಿಮರ್ಶೆ ಸಭೆ ನಡೆಸಿದ್ದಾರೆ. ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, "ಈ ಘೋರ ಕೃತ್ಯದ ಹಿಂದಿರುವವರನ್ನು ಕ್ಷಮಿಸಲಾಗದು, ಅವರಿಗೆ ಪಾಠ ಕಲಿಸಲಾಗುವುದು," ಎಂದು ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯನ್ನು "ನಾಗರಿಕರ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ದಾಳಿ" ಎಂದು ವಿವರಿಸಿದ್ದಾರೆ. "ಈ ದಾಳಿಯ ರೂವಾರಿಗಳು ಪ್ರಾಣಿಗಳಿಗಿಂತ ಕಡಿಮೆ, ಅಮಾನವೀಯರು," ಎಂದು ಅವರು ಖಂಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, "ಪ್ರವಾಸಿಗರಂತಹ ನಿರಾಯುಧ ನಾಗರಿಕರ ಮೇಲಿನ ದಾಳಿ ಕ್ಷಮಾರ್ಹವಲ್ಲ," ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಈ ದಾಳಿಯು ಮಾನವೀಯತೆಗೆ ಕಳಂಕವಾಗಿದೆ," ಎಂದು ಟೀಕಿಸಿದ್ದಾರೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, "ಕಾಶ್ಮೀರವು ಐತಿಹಾಸಿಕವಾಗಿ ಪ್ರವಾಸಿಗರ ಸ್ವರ್ಗ. ಈ ದಾಳಿಯು ಆತಂಕಕಾರಿ," ಎಂದು ತಿಳಿಸಿದ್ದಾರೆ.
ಭಯೋತ್ಪಾದಕರ ಉದ್ದೇಶ
ದಾಳಿಯ ನೇತೃತ್ವ ವಹಿಸಿರುವ ಟಿಆರ್ಎಫ್ ಸಂಘಟನೆ ತನ್ನ ಹೇಳಿಕೆಯಲ್ಲಿ, "ಪ್ರವಾಸಿಗರಂತೆ ಬಂದು ನಂತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವವರ ವಿರುದ್ಧ ದಾಳಿಗಳನ್ನು ಇನ್ನಷ್ಟು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ.
ಭದ್ರತಾ ಕ್ರಮಗಳು
ಈ ದಾಳಿಯ ಬಳಿಕ, ಭದ್ರತಾ ಪಡೆಗಳು ಪಾಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಳ್ಳಲಿದ್ದು, ಏಪ್ರಿಲ್ 23ರಂದು ಸ್ಥಳಕ್ಕೆ ಭೇಟಿ ನೀಡಲಿದೆ. ಈ ಘಟನೆಯು ಜುಲೈ 3ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ.
ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಪರಿಣಾಮ
ಕಾಶ್ಮೀರವು ಇತ್ತೀಚಿನ ವರ್ಷಗಳಲ್ಲಿ ದಾಳಿಗಳ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿತ್ತು. 2025ರಲ್ಲಿ ಶ್ರೀನಗರ, ಗುಲ್ಮಾರ್ಗ್, ಮತ್ತು ಪಾಹಲ್ಗಾಮ್‌ನಲ್ಲಿ ಎಲ್ಲಾ ಹೋಟೆಲ್‌ಗಳು ಪೂರ್ಣವಾಗಿ ಬುಕ್ ಆಗಿದ್ದವು. ಈ ವರ್ಷ 2 ಕೋಟಿಗೂ ಅಧಿಕ ಪ್ರವಾಸಿಗರ ಆಗಮನದ ನಿರೀಕ್ಷೆಯಿತ್ತು. ಆದರೆ, ಈ ದಾಳಿಯು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕವನ್ನು ಮೂಡಿಸಿದ್ದು, ಕಾಶ್ಮೀರದ ಆರ್ಥಿಕತೆಗೆ ಧಕ್ಕೆ ತರುವ ಸಾಧ್ಯತೆಯಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರಡ.
ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ.ಉ ಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿಎಂ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ, ಇಂದು ರಾತ್ರಿ ಭಾರತಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಸೌದಿ ಅರೇಬಿಯಾ ಆಯೋಜಿಸಿದ್ದ ಅಧಿಕೃತ ಭೋಜನಕೂಟದಲ್ಲಿ ಭಾಗಿಯಾಗುವುದನ್ನು ತಪ್ಪಿಸಿಕೊಂಡು ತಮ್ಮ ಪ್ರವಾಸ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ. ಅವರು ಇಂದು(ಮಂಗಳವಾರ) ರಾತ್ರಿ ಭಾರತಕ್ಕೆ ಮರಳಲಿದ್ದಾರೆ. ಅಧಿಕೃತವಾಗಿ ಬುಧವಾರ ರಾತ್ರಿಯೇ ಹಿಂತಿರುಗಬೇಕಿತ್ತು, ಆದರೆ ಈಗ ಬುಧವಾರ ಮುಂಜಾನೆ ಭಾರತಕ್ಕೆ ಆಗಮಿಸಲಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಯನ್ನು ಖಂಡಿಸಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮತ್ತು ಭಾರತದ ಜನತೆಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. "ಕಾಶ್ಮೀರದಿಂದ ಬಂದಿರುವ ಸುದ್ದಿ ತೀವ್ರ ಕಳವಳಕಾರಿಯಾಗಿದೆ. ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಅಮೆರಿಕ ದೃಢವಾಗಿ ನಿಲ್ಲುತ್ತದೆ," ಎಂದು ಟ್ರಂಪ್ ಹೇಳಿದ್ದಾರೆ.
ಇಂದು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಶಿವಮೊಗ್ಗ ಮೂಲದ ಮಂಜುನಾಥ್ ಅವರ ಪತ್ನಿ ಪಲ್ಲವಿ ಅವರೊಂದಿಗೆ ತಾವು ಮಾತನಾಡಿರುವುದಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.
"ಗಾಯಗೊಂಡಿರುವ ಇತರ ಕುಟುಂಬ ಸದಸ್ಯರೊಂದಿಗೂ ಮಾತನಾಡಿದ್ದೇನೆ. ಸ್ಥಳೀಯ ಆಡಳಿತವು ಅವರಿಗೆ ಸಹಾಯ ಮಾಡುತ್ತಿದೆ ಹಾಗೂ ಅವರ ವಾಸ್ತವ್ಯ ಮತ್ತು ಸುರಕ್ಷತೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ," ಎಂದವರು ಹೇಳಿದ್ದಾರೆ.
"ನಾನು ಕರ್ನಾಟಕದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ಸುರಕ್ಷಿತವಾಗಿ ಮನೆಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಮನ್ವಯ ಸಾಧಿಸುತ್ತೇವೆ," ಎಂದೂ ಭರವಸೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ನಗರಗಳು, ಪ್ರವಾಸಿ ತಾಣಗಳು, ಸ್ಥಾವರಗಳು, ಮಿಲಿಟರಿ ನೆಲೆಗಳು ಸೇರಿದಂತೆ ಹಲವೆಡೆ ಭದ್ರತೆ ಹೆಚ್ಚಿಸಲಾಗಿದೆ.
ಈಗಾಗಲೇ ಕೇಂದ್ರ ಗೃಹ ಮಂತ್ರಾಲಯದಿಂದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತ ಸೂಚನೆ ರವಾನೆಯಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲೂ ಪೊಲೀಸ್ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ.
ಕರ್ನಾಟಕದಲ್ಲೂ ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಕುಗ್ಗುವುದಿಲ್ಲ; ಬದಲಾಗಿ ಭಯೋತ್ಪಾದನೆ ವಿರುದ್ಧ ಹೋರಾಟದ ನಮ್ಮ ಸಂಕಲ್ಪ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ದುಷ್ಟತನದ ವಿರುದ್ಧ ಕೇಂದ್ರ ಸರ್ಕಾರ ಸಮರ್ಥ ಹೋರಾಟ ನಡೆಸಲು ಬದ್ಧವಿದೆ. ಭಯೋತ್ಪಾದನೆಯನ್ನು ನಾವೆಂದೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಭಯೋತ್ಪಾದಕ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ಕರೆದು ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಗಹನ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಅಲ್ಲಿನ ಡಿಜಿಪಿ ಜತೆಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗದ ಉದ್ಯಮಿ ಹತ್ಯೆಗೆ ತೀವ್ರ ಸಂತಾಪ:
ಭಯೋತ್ಪಾದನೆ ದಾಳಿ ವೇಳೆ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಹತ್ಯೆಗೆ ಸಚಿವ ಜೋಶಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ, ಕುಟುಂಬಗಳಿಗೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ. ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದೂ ಸಂತೈಸಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ತೆರಳುತ್ತಿದ್ದಾರೆ. ಅವರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತರಾದ ಇಬ್ಬರು ಕನ್ನಡಿಗರು ಸೇರಿದಂತೆ ಇತರ ಗಾಯಾಗಳುಗಳ ತ್ವರಿತ ಚಿಕಿತ್ಸೆ ಹಾಗೂ ಇತರ ಸೌಕರ್ಯಗಳನ್ನು ಒದಗಿಸುವ ಸಂಬಂಧ ಅಲ್ಲಿನ ಸರ್ಕಾರದ ಜತೆ ಸಂಪರ್ಕ ಸಾಧಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಯೋತ್ಪಾದಕ ಕೃತ್ಯವನ್ನು ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದ್ದಾರೆ. "ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ದುಃಖಿತನಾಗಿದ್ದೇನೆ. ಮೃತರ ಕುಟುಂಬ ಸದಸ್ಯರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ. ಈ ಹೇಯ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ, ಮತ್ತು ದುಷ್ಕರ್ಮಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ," ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಘಟನೆಯ ಬಗ್ಗೆ ವಿವರಿಸಲಾಯಿತು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲಾಯಿತು. ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಲು ಶೀಘ್ರದಲ್ಲೇ ಶ್ರೀನಗರಕ್ಕೆ ತೆರಳುತ್ತೇನೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತ ಪ್ರವಾಸದಲ್ಲಿರುವ ನಡುವೆಯೇ ಉಗ್ರರ ದಾಳಿ ನಡೆದಿದೆ. ಈ ನಡುವೆ ಅಮೆರಿದಕ ಅಧ್ಯಕ್ಷರು. “ಭಾರತದ ಜನರೊಂದಿಗೆ ನಾವಿದ್ದೇವೆ, ಮೃತರಿಗಾಗಿ ಪ್ರಾರ್ಥನೆಗಳು,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದರು.
ಸಿಎಂ ಅವರ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳೂ ತೆರಳಿದ್ದಾರೆ.
ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂರೆ ದೆಹಲಿಯ ನಿವಾಸಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. IPS ಅಧಿಕಾರಿ ಚೇತನ್ ಆರ್ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ತೆರಳಿದೆ.