Operation Sindoor | ಪಾಕಿಸ್ತಾನ ಉಗ್ರರ ಪರ ನಿಂತಿದ್ದೇ ಸೇನಾ ಸಂಘರ್ಷಕ್ಕೆ ನಾಂದಿ; ಏರ್ ಮಾರ್ಷಲ್ ಎ.ಕೆ.ಭಾರ್ತಿ
ಭಾರತೀಯ ಸೇನೆಯ ಯೋಜನಾಬದ್ಧ ರಕ್ಷಣೆಯಿಂದಾಗಿ ಎಲ್ಲಾ ಸೇನಾ ನೆಲೆಗಳು ಸುರಕ್ಷಿತವಾಗಿವೆ. ಆಕಾಶ್ ಕ್ಷಿಪಣಿ ಒಳಗೊಂಡ ವಾಯು ರಕ್ಷಣಾ ವ್ಯವಸ್ಥೆಯು ಶತ್ರುಗಳ ಕ್ಷಿಪಣಿಗಳನ್ನು ನಾಶಪಡಿಸಿದೆ ಎಂದು ಏರ್ ಮಾರ್ಷಲ್ ಎ.ಕೆ.ಭಾರ್ತಿ ತಿಳಿಸಿದರು;
ಪಾಕಿಸ್ತಾನವು ಭಯೋತ್ಪಾದನೆ ಬೆಂಬಲಿದ್ದರಿಂದ ಭಾರತದ ಕೆಂಗಣ್ಣಿಗೆ ಗುರಿಯಾಯಿತು ಎಂದು ವಾಯುಪಡೆ ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಹೇಳಿದರು.
ನವದೆಹಲಿಯಲ್ಲಿ ಸೋಮವಾರ ಮೂರು ಪಡೆಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಕರೆದಿದ್ದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ವಾಯುಪಡೆ ಕಾರ್ಯಾಚರಣೆಯ ಮಾಹಿತಿ ನೀಡಿದರು.
ಭಾರತದ ಮೇಲಿನ ದಾಳಿಗೆ ಪಾಕಿಸ್ತಾನ ಸೇನೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ಹಾಗೂ ಮಾನವರಹಿತ ವಿಮಾನಗಳನ್ನು ಬಳಸಿತು. ಆದರೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಆ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಚೀನಾ ನಿರ್ಮಿತ ಪಿಎಲ್-15 ಕ್ಷಿಪಣಿಯನ್ನೂ ಭಾರತದ ಮೇಲೆ ಪ್ರಯೋಗಿಸಿದೆ. ಪಾಕಿಸ್ತಾನ ಸೇನೆ ಹಾರಿಸಿದ ರಾಕೆಟ್ ಮತ್ತು ಮಾನವ ಸಹಿತ ವಿಮಾನಗಳನ್ನು ವಾಯುಪಡೆಯ ಯೋಧರು ಹಾಗೂ ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿದೆ ಎಂದು ವಿವರಿಸಿದರು.
ಸೇನಾನೆಲೆಗಳು ಸುರಕ್ಷಿತ
ಭಾರತೀಯ ಸೇನೆಯ ಯೋಜನಾಬದ್ಧ ರಕ್ಷಣೆಯಿಂದಾಗಿ ಎಲ್ಲಾ ಸೇನಾ ನೆಲೆಗಳು ಸುರಕ್ಷಿತವಾಗಿವೆ. ಆಕಾಶ್ ಕ್ಷಿಪಣಿ ಒಳಗೊಂಡ ವಾಯು ರಕ್ಷಣಾ ವ್ಯವಸ್ಥೆಯು ಶತ್ರುಗಳ ಕ್ಷಿಪಣಿಗಳನ್ನು ನಾಶಪಡಿಸಿದೆ. ಭಾರತದ ಸೇನೆ ನೆಲೆಗಳನ್ನು ಗುರಿಯಾಗಿಸಿ ನಡೆಸಿದ ಪ್ರತಿ ದಾಳಿಯನ್ನು ತಟಸ್ಥಗೊಳಿಸಿದ್ದೇವೆ. ನಮ್ಮ ದಾಳಿ ಉಗ್ರರ ಮೂಲಸೌಕರ್ಯ ಮತ್ತು ಉಗ್ರರ ವಿರುದ್ಧವಾಗಿತ್ತು. ಆದರೆ, ಪಾಕಿಸ್ತಾನ ಸೇನೆಯು ಭಯೋತ್ಪಾದಕರನ್ನು ಬೆಂಬಲಿಸುವ ಆಯ್ಕೆ ಮಾಡಿಕೊಂಡು ಸಂಘರ್ಷ ವಿಸ್ತರಿಸುವಂತೆ ಮಾಡಿತು ಎಂದು ಏರ್ ಮಾರ್ಷಲ್ ಎ.ಕೆ.ಭಾರ್ತಿ ತಿಳಿಸಿದರು.
ಪಾಕಿಸ್ತಾನದ ಹೊಸ ತಂತ್ರಜ್ಞಾನ ಆಧರಿತ ಯುದ್ಧ ವಿಮಾನಗಳು, ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ. ಅಲ್ಲದೇ ರಾಜಧಾನಿ ಇಸ್ಲಾಮಾಬಾದ್‌ಗೆ ಸಮೀಪವಿರುವ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಹೇಳಿದರು.
ಕಿರಾನಾ ಬೆಟ್ಟಗಳಲ್ಲಿ ಅಣುಸ್ಥಾವರಗಳಿವೆ ಎಂಬ ಮಾಹಿತಿ ನಮಗೆ ತಿಳಿದಿಲ್ಲ. ನಾವು ಅವುಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನೌಕಾಪಡೆ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ್ ಮಾತನಾಡಿ, ಶತ್ರು ರಾಷ್ಟ್ರದ ನಿರಂತರ ಬೆದರಿಕೆ ಹಾಗೂ ದಾಳಿಗಳನ್ನು ನಾವು ತಡೆದಿದ್ದೇವೆ. ಸಮರನೌಕೆಯಲ್ಲಿನ ವಾಯು ರಕ್ಷಣಾ ವ್ಯವಸ್ಥೆಯ ಸಹಾಯದಿಂದ ಪಾಕಿಸ್ತಾನದ ಡ್ರೋನ್, ಸೂಪರ್‌ಸಾನಿಕ್ ಕ್ಷಿಪಣಿ ಹಾಗೂ ಯುದ್ಧವಿಮಾನಗಳನ್ನು ಹೊಡೆದು ಹಾಕಿದ್ದೇವೆ ಎಂದು ತಿಳಿಸಿದರು.
ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆಫ್ಟಿನಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿ, ನಮ್ಮ ವಾಯುನೆಲೆಯನ್ನು ಗುರಿಯಾಗಿಸುವುದು ಬಹಳ ಕಷ್ಟ. ಭಾರತದ ಹಲವು ಹಂತಗಳ ರಕ್ಷಣಾ ಕೋಟೆ ಭೇದಿಸಬೇಕಾದರೆ ಕನಿಷ್ಠ ಒಂದರಲ್ಲಾದರೂ ಪೆಟ್ಟು ತಿನ್ನುವುದು ಖಚಿತ ಎಂದು ಸೇನಾ ಸಾಮರ್ಥ್ಯದ ಕುರಿತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಸಂಜೆ ಡಿಜಿಎಂಒ ಸಭೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆ ನಂತರ ನಡೆಯುತ್ತಿರುವ ಪಾಕಿಸ್ತಾನ ಹಾಗೂ ಭಾರತದ ಡಿಜಿಎಂಒಗಳ ಸಭೆ ಸೋಮವಾರ ಸಂಜೆ ನಿಗದಿಯಾಗಿದೆ. ಹಾಟ್ಲೈನ್ ಮೂಲಕ ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂದೂರ್ ಮತ್ತು ಇತರ ಸಂಬಂಧಿತ ಬೆಳವಣಿಗೆಗಳ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿಯನ್ನು ಸೋಮವಾರ ಕೇರಳದಲ್ಲಿ ಬಿಜೆಪಿ ಟೀಕಿಸಿದೆ.
"ಸದನದ ಅಧಿವೇಶನ ನಡೆಯುತ್ತಿರುವಾಗ ಸಂಸತ್ತಿಗೆ ಗೈರು ಹಾಜರಾಗುವವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಪ್ರಮುಖ ಕಾನೂನುಗಳು ಅಂಗೀಕಾರವಾದಾಗ ಅವರು ಕಣ್ಮರೆಯಾಗುತ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಂಸತ್ತಿನ ವಿಶೇಷ ಅಧಿವೇಶನ ಅಗತ್ಯವಿದೆಯೇ ಎಂದು ನಿರ್ಧರಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯದ ನಂತರ ಭಾರತ ಪಾಕಿಸ್ತಾನಕ್ಕೆ ಅತ್ಯಂತ ತೀವ್ರವಾದ ಹೊಡೆತ ನೀಡಿದೆ ಎಂದು ಚಂದ್ರಶೇಖರ್ ಹೇಳಿದರು.
ಸಂಸತ್ತಿನ ವಿಶೇಷ ಅಧಿವೇಶನಕ್ಕೆ ವಿರೋಧ ಪಕ್ಷದ ಬೇಡಿಕೆಯ ಕುರಿತು ಮಾತನಾಡಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, " ಸಂಸತ್ತಿನ ವಿಶೇಷ ಅಧಿವೇಶನ ಕರೆಯುವುದನ್ನು ನಾನು ವಿರೋಧಿಸುವುದಿಲ್ಲ... ಆದರೆ ಇದು ಸೂಕ್ಷ್ಮ ಮತ್ತು ಗಂಭೀರ ವಿಷಯವಾಗಿದ್ದು, ಅಂತಹ ಗಂಭೀರ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ... ಅಂತಹ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ಹಿತಾಸಕ್ತಿಗಾಗಿ ಮಾಹಿತಿಯನ್ನು ಗೌಪ್ಯವಾಗಿಡುವುದು ಅವಶ್ಯಕ... ವಿಶೇಷ ಅಧಿವೇಶನ ಕರೆಯುವ ಬದಲು, ನಾವೆಲ್ಲರೂ ಸರ್ವಪಕ್ಷ ಸಭೆ ಕರೆದರೆ ಉತ್ತಮ ಎಂದು ಅವರು ತಿಳಿಸಿದ್ದಾರೆ.