Operation Sindoor | ಸಂಘರ್ಷ ವಿರಾಮಕ್ಕೆ ಅಮೆರಿಕದ ಮಧ್ಯಪ್ರವೇಶಕ್ಕೆ ಆಕ್ಷೇಪ; ವಿಶೇಷ ಅಧಿವೇಶನ ಕರೆಯಲು ಪ್ರಧಾನಿಗೆ ಖರ್ಗೆ ಪತ್ರ
ವಾಷಿಂಗ್ಟನ್ ಡಿಸಿ ಯಿಂದ ಮೊದಲು ಕದನ ವಿರಾಮ ಘೋಷಣೆಯಾಗಿದೆ. ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.;
ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ್ ಹಾಗೂ ಕದನ ವಿರಾಮ ಘೋಷಣೆಗಳ ಕುರಿತು ಚರ್ಚಿಸಲು ಸಂಸತ್ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷಗಳು ಒತ್ತಾಯಿಸಿವೆ. ಪ್ರಮುಖವಾಗಿ ಈ ವಿಚಾರದಲ್ಲಿ ಅಮೆರಿಕ ಮೂಗು ತೂರಿಸಿರುವುದು ಹಾಗೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಪತ್ರದಲ್ಲಿ ಅವರು ಸಲಹೆ ನೀಡಿದ್ದಾರೆ.
ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ವಿಶೇಷ ಸಂಸತ್ ಅಧಿವೇಶನ ಕರೆಯುವಂತೆ ಮನವಿ ಮಾಡಿದ್ದಾರೆ.
ಪಹಾಲ್ಗಮ್ ದಾಳಿಯ ಕುರಿತಂತೆ ಚರ್ಚಿಸಲು ಕಳೆದ ಏ.28 ರಂದು ಕೂಡ ಪತ್ರ ಬರೆದು ಒತ್ತಾಯಿಸಲಾಗಿತ್ತು. ಈಗಲೂ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಸರ್ವಾನುಮತದ ವಿನಂತಿ ಮೇರೆಗೆ ವಿಶೇಷ ಅಧಿವೇಶನ ಕರೆಯಬೇಕು. ಉಗ್ರರ ದಾಳಿ ಬಳಿಕ ನಡೆದ ಬೆಳವಣಿಗೆಗಳ ಕುರಿತು ಚರ್ಚಿಸುವ ಅಗತ್ಯವಿದೆ. ಕದನ ವಿರಾಮದ ಕುರಿತು ವಾಷಿಂಗ್ಟನ್ ಡಿಸಿ ಯಿಂದ ಮೊದಲು ಘೋಷಣೆಯಾಗಿದೆ. ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರ ಈ ಬಗ್ಗೆ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಕೋರಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವಧಿಯಲ್ಲಿ ನಡೆದ ಪಾಕಿಸ್ತಾನದ ಮೇಲಿನ ಯುದ್ಧದಲ್ಲಿ ವಿದೇಶಿ ನಾಯಕರ ಮಧ್ಯ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಈಗ ಅಮೆರಿಕವು ಭಾರತ ಹಾಗೂ ಪಾಕ್ ಸಂಘರ್ಷದಲ್ಲಿ ತಾನೇ ಕದನ ವಿರಾಮ ಘೋಷಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.