Operation Sindoor | ಪಾಕಿಸ್ತಾನ ಭಯೋತ್ಪಾದನೆ ಬೆಂಬಲಿಸಿ ಭಾರತದ ಕೆಂಗಣ್ಣಿಗೆ ಗುರಿಯಾಯಿತು; ಏರ್ ಮಾರ್ಷಲ್ ಎ.ಕೆ.ಭಾರ್ತಿ
ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು.;
ಭಾರತ -ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದು, ಉದ್ವಿಗ್ನತೆ ಶಮನಕ್ಕೆ ಇಂದು ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರ (ಡಿಜಿಎಂಒ) ಮಟ್ಟದ ಮಹತ್ವದ ಮಾತುಕತೆ ನಡೆಯಲಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22 ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಮೇ 7 ರಂದು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ನಡೆಸಿ, ನಾಶಪಡಿಸಿತ್ತು.
ಭಾರತದ ಈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ, ರಾಜಸ್ತಾನ, ಪಂಜಾಬ್ ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದು ಹಾಕಿತ್ತು. ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತಿದಾಳಿ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಪಾಕಿಸ್ತಾನದ ಒಟ್ಟು 9 ವಾಯುನೆಲೆಗಳಿಗೆ ಹಾನಿಯಾಗಿತ್ತು.
ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕೂಡಲೇ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಅಲ್ಲದೇ ಮೇ 12 ರಂದು ಎರಡೂ ದೇಶಗಳ ಡಿಜಿಎಂಒ ಮಟ್ಟದ ಮಾತುಕತೆ ನಡೆಯಲಿದೆ ಎಂದು ಹೇಳಿದ್ದರು.
ಕದನ ವಿರಾಮ ಘೋಷಣೆ ನಂತರವೂ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಒನ್ನೊಮ್ಮೆ ಕದನ ವಿರಾಮ ಉಲ್ಲಂಘಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಭಾರತ ಎಚ್ಚರಿಕೆ ನೀಡಿದ ಕೂಡಲೇ ಗುಂಡಿನ ದಾಳಿ ನಿಲ್ಲಿಸಿತ್ತು. ಸದ್ಯ ಜಮ್ಮು ಕಾಶ್ಮೀರ ಹಾಗೂ ಇತರೆ ರಾಜ್ಯಗಳ ಗಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ಉಗ್ರರ ಹಸ್ತಾಂತರಕ್ಕೆ ಪಟ್ಟು
ಪಹಲ್ಗಾಮ್ ದಾಳಿಗೆ ಕಾರಣರಾದ ಉಗ್ರರನ್ನು ಹಸ್ತಾಂತರ ಮಾಡುವಂತೆ ಭಾರತವು ಡಿಜಿಎಂಒ ಮಾತುಕತೆ ವೇಳೆ ಪಟ್ಟು ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ನೆಲೆದಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ, ಪ್ರೋತ್ಸಾಹ ನೀಡಬಾರದು. ಈ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಕದನ ವಿರಾಮ ಪಾಲಿಸಲಿದೆ ಎಂದು ಹೇಳಲಾಗಿದೆ.
ಪೂಂಚ್‌ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭೇಟಿ ಮಾಡಿದರು.
ಭಾರತ ಕಿರಾನಾ ಬೆಟ್ಟಗಳನ್ನು ಹೊಡೆದಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಏರ್ ಮಾರ್ಷಲ್ ಎ.ಕೆ. ಭಾರ್ತಿ, "ಕಿರಾನಾ ಬೆಟ್ಟಗಳಲ್ಲಿ ಪರಮಾಣು ಸ್ಥಾವರವಿದೆ ಎಂದು ಹೇಳಿದ್ದಕ್ಕಾಗಿ ಧನ್ಯವಾದಗಳು, ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ. ಅಲ್ಲಿ ಏನೇ ಇರಲಿ ನಾವು ಕಿರಾನಾ ಬೆಟ್ಟಗಳತ್ತ ದಾಳಿ ಮಾಡಿಲ್ಲ ಎಂದು ಅವರು ತಿಳಿಸಿದರು.
ಪ್ರತಿಯೊಂದು ಹೋರಾಟವೂ ವಿಭಿನ್ನವಾಗಿ ಹೋರಾಟಲ್ಪಡುತ್ತದೆ. ಹಾಗೇಯೇ ಇದೊಂದು ವಿಭಿನ್ನ ರೀತಿಯ ಯುದ್ದವಾಗಿತ್ತು ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
"ನೀವು ಇಲ್ಲಿ ಟರ್ಕಿಶ್ ಮತ್ತು ಇನ್ನೊಂದು ರೀತಿಯ ಡ್ರೋನ್‌ಗಳ ಅವಶೇಷಗಳನ್ನು ನೋಡಿದ್ದೀರಿ. ನಾವು ಯಾವುದೇ ರೀತಿಯ ತಂತ್ರಜ್ಞಾನಕ್ಕೂ ಸಮರ್ಥರಾಗಿದ್ದೇವೆ" ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ತಿಳಿಸಿದರು.
"ನಮ್ಮ ವಾಯುಪಡೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದ ಡ್ರೋನ್ ಮತ್ತು ಯುಎವಿ ದಾಳಿಗಳನ್ನು ನಮ್ಮ ವಾಯು ರಕ್ಷಣಾ ಗ್ರಿಡ್‌ಗಳಿಂದ ಹಾರಿಸಿದ ಶಸ್ತ್ರಾಸ್ತ್ರಗಳಿಂದ ವಿಫಲಗೊಳಿಸಲಾಯಿತು. ಇದೆಲ್ಲದರಲ್ಲೂ ಬಿಎಸ್‌ಎಫ್ ಪಾತ್ರವನ್ನು ನಾನು ಶ್ಲಾಘಿಸುತ್ತೇನೆ. ಆಪರೇಷನ್ ಸಿಂಧೂರ್ ಅನ್ನು ಕಾರ್ಯಗತಗೊಳಿಸುವಲ್ಲಿ ಮೂರು ಸೇವೆಗಳ ನಡುವೆ ಸಂಪೂರ್ಣ ಸಮನ್ವಯವಿತ್ತು" ಎಂದು ಡಿಜಿಎಂಒ ತಿಳಿಸಿದರು.
"ನಾವು ಎಲ್‌ಒಸಿ ದಾಟದೆ ಭಯೋತ್ಪಾದಕರ ಮೇಲೆ ದಾಳಿ ಮಾಡಿದೆವು ಮತ್ತು ಪಾಕಿಸ್ತಾನದ ಪ್ರತೀಕಾರವು ಗಡಿಯಾಚೆಯಿಂದ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ನಮ್ಮ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನದ ಪುನರಾವರ್ತಿತ ದಾಳಿಗಳನ್ನು ನಮ್ಮ ವಾಯು ರಕ್ಷಣಾ ಗ್ರಿಡ್ ವಿಫಲಗೊಳಿಸಿತು. ಪಾಕಿಸ್ತಾನ ವಾಯುಪಡೆಯು ನಮ್ಮ ವಾಯು ರಕ್ಷಣೆಯನ್ನು ಉಲ್ಲಂಘಿಸಿ ನಮ್ಮ ವಾಯು ನೆಲೆಗಳನ್ನು ಗುರಿಯಾಗಿಸುವ ಯಾವುದೇ ಸಾಧ್ಯತೆ ಇರಲಿಲ್ಲ ಎಂದು ಡಿಜಿಎಂಒ ಹೇಳಿದರು.
"ನಮ್ಮ ಹೋರಾಟ ಭಯೋತ್ಪಾದಕರೊಂದಿಗೆ ಹೊರತು ಪಾಕಿಸ್ತಾನ ಸೇನೆಯೊಂದಿಗೆ ಅಲ್ಲ ಎಂದು ನಾವು ಪುನರುಚ್ಚರಿಸಿದ್ದೇವೆ. ದುರದೃಷ್ಟವಶಾತ್ ಪಾಕಿಸ್ತಾನ ಸೇನೆಯು ಭಯೋತ್ಪಾದಕರ ಪರವಾಗಿ ಮಧ್ಯಪ್ರವೇಶಿಸಿತು. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಮತ್ತು ಅವರು ಅನುಭವಿಸಿದ ಹಾನಿಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಅವರಿಗೆ ಅಭೇದ್ಯವಾಗಿತ್ತು" ಎಂದು ವಾಯು ಕಾರ್ಯಾಚರಣೆಗಳ ಡಿಜಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಸಂಘರ್ಷದ ನಂತರ, ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಮೇ10ರಂದು ಕದನ ವಿರಾಮವನ್ನು ಘೋಷಿಸಲಾಯಿತು. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿಈ ಕದನ ವಿರಾಮದ ಬಗ್ಗೆ ಮಾಹಿತಿ ನೀಡಿದರು. ಅಂದಿನಿಂದ, ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಅವರ ಕುಟುಂಬ ಮತ್ತು ವಿಶೇಷವಾಗಿ ಅವರ ಮಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುತ್ತಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ರಹತ್ಕರ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯುವತಿಯ ವೈಯಕ್ತಿಕ ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವುದನ್ನು ಸಮಿತಿಯು ಖಂಡಿಸಿದೆ. ಹಾಗೂ ಇದು ತೀವ್ರ ಬೇಜವಾಬ್ದಾರಿಯುತ ಕೃತ್ಯ ಮತ್ತು ಆಕೆಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಗೌಪ್ಯತೆಯ ಗಂಭೀರ ಉಲ್ಲಂಘನೆ ಎಂದು ಕರೆದಿದೆ.
ಮಿಸ್ರಿಯಂತಹ ಹಿರಿಯ ನಾಗರಿಕ ಸೇವಕರ ಕುಟುಂಬ ಸದಸ್ಯರ ಮೇಲಿನ ವೈಯಕ್ತಿಕ ದಾಳಿಗಳು ಸ್ವೀಕಾರಾರ್ಹವಲ್ಲ ಮಾತ್ರವಲ್ಲದೆ ನೈತಿಕವಾಗಿ ಅಸಮರ್ಥನೀಯವೂ ಆಗಿದೆ ಎಂದು ರಹತ್ಕರ್ ಒತ್ತಿ ಹೇಳಿದರು.
ಮೇ 10 ರಂದು ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್ ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ಗಡಿಯಾಚೆಗಿನ ಗುಂಡಿನ ದಾಳಿಗೆ ಕರ್ತವ್ಯದ ವೇಳೆ ಹುತಾತ್ಮರಾದ ಬಿಎಸ್‌ಎಫ್ ಕಾನ್‌ಸ್ಟೆಬಲ್ ದೀಪಕ್ ಚಿಂಗಖಮ್ ಅವರ ಗೌರವಾರ್ಥ ಮಾಲಾರ್ಪಣೆ ಸಮಾರಂಭ ನಡೆಯಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಮುಚ್ಚಲ್ಪಟ್ಟ 32 ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.