'One Nation, One Electionʼ| ಸ್ವೀಕಾರಾರ್ಹವಲ್ಲ-ಕಾಂಗ್ರೆಸ್; ಬಿಜೆಪಿಯ 'ಅಗ್ಗದ ಸಾಹಸ'- ಟಿಎಂಸಿ

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಏಕಕಾಲಿಕ ಚುನಾವಣೆಗಳು ಪ್ರಾಯೋಗಿಕವಲ್ಲ.ಹೀಗಾಗಿ, ಸ್ವೀಕಾರಾರ್ಹ ವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Update: 2024-09-18 12:24 GMT

'ಒಂದು ರಾಷ್ಟ್ರ,ಒಂದು ಚುನಾವಣೆ' ಪ್ರಸ್ತಾವನೆಗೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದಂತೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯ ವರದಿಯನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ತಿಳಿಸಿದರು. ʻಹೆಚ್ಚಿನ ರಾಜಕೀಯ ಪಕ್ಷಗಳು ಈ ಉಪಕ್ರಮವನ್ನು ಬೆಂಬಲಿಸಿವೆ,ʼ ಎಂದು ಹೇಳಿದರು. 

ಪ್ರಸ್ತಾವ ತಳ್ಳಿಹಾಕಿದ ಕಾಂಗ್ರೆಸ್:‌ ʻಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಏಕಕಾಲಿಕ ಚುನಾವಣೆಗಳು ಪ್ರಾಯೋಗಿಕವಾಗಿಲ್ಲ. ಹೀಗಾಗಿ, ಸ್ವೀಕಾರಾರ್ಹವಲ್ಲ,ʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ʻಯೋಜನೆಯು ಪ್ರಾಯೋಗಿಕವಲ್ಲ. ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ.ಇದು ಯಶಸ್ವಿಯಾಗುವುದಿಲ್ಲ ಮತ್ತು ಜನ ಇದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಿದ್ದರೆ ,ಅಗತ್ಯ ಬಿದ್ದಾಗ ಚುನಾವಣೆ ನಡೆಯಬೇಕು,ʼ ಎಂದು ಖರ್ಗೆ ಹೇಳಿದರು. 

ಖರ್ಗೆಯವರ ಟೀಕೆಗೆ ಪ್ರತಿಕ್ರಿಯಿಸಿದ ವೈಷ್ಣವ್, ʻಪ್ರತಿಕ್ರಿಯಿಸಿದವರಲ್ಲಿ ಶೇ.80 ಕ್ಕಿಂತ ಹೆಚ್ಚು ಮಂದಿ ಸಕಾರಾತ್ಮಕ ಬೆಂಬಲ ನೀಡಿರುವುದರಿಂದ, ಪ್ರತಿಪಕ್ಷಗಳ ಮೇಲೆ ಒತ್ತಡ ಬೀಳಬಹುದು,ʼ ಎಂದು ಹೇಳಿದರು.

ಅಗ್ಗದ ಸಾಹಸ: ಟಿಎಂಸಿ ನಾಯಕ ಡೆರೆಕ್ ಒ'ಬ್ರಿಯಾನ್, ʻಇದು ಬಿಜೆಪಿಯ ಅಗ್ಗದ ಸ್ಟಂಟ್. ಸರ್ಕಾರಕ್ಕೆ ಏಕಕಾಲದಲ್ಲಿ ಚುನಾವಣೆ ಬೇಕಿದ್ದರೆ, ಹರಿಯಾಣ, ಜಮ್ಮು-ಕಾಶ್ಮೀರದೊಂದಿಗೆ ಮಹಾರಾಷ್ಟ್ರಕ್ಕೆ ಏಕೆ ಚುನಾವಣೆಯನ್ನು ಘೋಷಿಸಲಿಲ್ಲ,ʼ ಎಂದು ಪ್ರಶ್ನಿಸಿದ್ದಾರೆ.

ʻಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದು ಪ್ರಜಾಪ್ರಭುತ್ವ ವಿರೋಧಿ ನಡೆ. ಒಮ್ಮೆಲೆ ಮೂರು ರಾಜ್ಯಗಳಿಗೆ ಚುನಾವಣೆ ನಡೆಸಲು ಬಿಜೆಪಿ ಅಸಮರ್ಥವಾಗಿದೆ. ಏಕ ಕಾಲದಲ್ಲಿ ಚುನಾವಣೆಗೆ ತರಲು ಎಷ್ಟು ಸಂವಿಧಾನ ತಿದ್ದುಪಡಿ ತರಬೇಕು ಮತ್ತು ಎಷ್ಟು ವಿಧಾನಸಭೆಗಳ ಅವಧಿ ಕಡಿತಗೊಳಿಸಬೇಕು? ಇದು ಕ್ಲಾಸಿಕ್ ಮೋದಿ-ಶಾ ಜುಮ್ಲಾ,ʼ ಎಂದು ಹೇಳಿದರು.

ಪ್ರಜಾಸತ್ತಾತ್ಮಕ ಹೊಣೆಗಾರಿಕೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು,ʼಇದು ಫೆಡರಲಿಸಂನ್ನು ನಾಶಪಡಿಸುತ್ತದೆ ಮ ತ್ತು ಸಂವಿಧಾನದ ಮೂಲಭೂತ ರಚನೆಯ ಭಾಗವಾಗಿರುವ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತದೆ,ʼ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ. 

ʻಮೋದಿ ಮತ್ತು ಶಾ ಹೊರತುಪಡಿಸಿ ಬೇರೆ ಯಾರಿಗೂ ಬಹು ಚುನಾವಣೆಗಳು ಸಮಸ್ಯೆಯಲ್ಲ. ಅವರಿಬ್ಬರು ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಪ್ರಚಾರ ಮಾಡಬೇಕಿರುವುದರಿಂದ, ಎಲ್ಲರಿಗೂ ಏಕಕಾಲದಲ್ಲಿ ಚುನಾವಣೆ ಬೇಕು ಎಂದರ್ಥವಲ್ಲ. ಆಗಾಗ ಮತ್ತು ಆವರ್ತಕ ಚುನಾವಣೆಗಳು ಪ್ರಜಾಸತ್ತಾತ್ಮಕ ಹೊಣೆಗಾರಿಕೆಯನ್ನು ಸುಧಾರಿಸುತ್ತವೆ,ʼ ಎಂದು ಹೇಳಿದರು.

ಪ್ರಸ್ತಾವನೆ ಅಂಗೀಕಾರಕ್ಕೆ ಎನ್‌ಡಿಎಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇದನ್ನು ಜಾರಿಗೆ ತರಲು ಸಂವಿಧಾನಕ್ಕೆ ಕನಿಷ್ಠ ಆರು ತಿದ್ದುಪಡಿ ಅಗತ್ಯವಿದೆ. ಆನಂತರ ಅದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಮೋದಿಸಬೇಕು.

Tags:    

Similar News